ವಾಯುಪಡೆಯಲ್ಲಿ 14 ವರ್ಷ ಸೇವೆ, ಈಗ ಯಶಸ್ವಿ ಉದ್ಯಮಿ: ಮುಂಬೈನಲ್ಲಿ ಕೆಫೆ ತೆರೆದು ಮಿಂಚುತ್ತಿರುವ ಶಿಖಾ ಚೌಧರಿ
ಭಾರತೀಯ ವಾಯುಪಡೆಯಲ್ಲಿ ಸುದೀರ್ಘ 14 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ವಿಂಗ್ ಕಮಾಂಡರ್ ಶಿಖಾ ಚೌಧರಿ ಇದೀಗ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸೇನೆಯಲ್ಲಿದ್ದಾಗ ತಾವು ಕಲಿತ ಶಿಸ್ತು , ಜವಾಬ್ದಾರಿ ಮತ್ತು ನಾಯಕತ್ವದ ಗುಣಗಳನ್ನ ಇದೀಗ ವ್ಯವಹಾರದಲ್ಲಿ ಅಳವಡಿಸಿಕೊಂಡಿರುವ ಅವರು, ತಮ್ಮ ಸಹೋದರಿಯೊಂದಿಗೆ ಸೇರಿ ಮುಂಬೈನ ಅಂಧೇರಿಯಲ್ಲಿ 'ಜೆಸ್ಸಿಯಾಸ್ ಕೆಫೆ' ನಡೆಸುತ್ತಿದ್ದಾರೆ.
ದೇಶ ಕಾಯುವ ಕೆಲಸದಲ್ಲಿದ್ದ ಕೈಗಳು ಇದೀಗ ಯಶಸ್ವಿ ಉದ್ಯಮಿಯಾಗಿ ರೂಪುಗೊಂಡಿವೆ ನೋಡಿ.

ಭಾರತೀಯ ವಾಯುಪಡೆಯ ರೋಚಕ ಅನುಭವ
ಚಿಕ್ಕಂದಿನಿಂದಲೇ ಪೈಲಟ್ ಅಥವಾ ನಟಿಯಾಗಬೇಕೆಂಬ ಕನಸು ಕಂಡಿದ್ದ ಶಿಖಾ, ಪೈಲಟ್ ಆಗದಿದ್ದರೂ ಭಾರತೀಯ ವಾಯುಪಡೆಯನ್ನ ಸೇರಿದರು. ಎಂಜಿನಿಯರಿಂಗ್ ಮುಗಿಸಿದ ಬಳಿಕ ಎತ್ತರದ ಕೊರತೆಯಿಂದಾಗಿ ಪೈಲಟ್ ಹುದ್ದೆ ಕೈತಪ್ಪಿದರೂ , ತಾಂತ್ರಿಕ ವಿಭಾಗದಲ್ಲಿ ಏರೋನಾಟಿಕಲ್ ಎಂಜಿನಿಯರ್ ಆಗಿ ಹೆಲಿಕಾಪ್ಟರ್ ನಿರ್ವಹಣಾ ಜವಾಬ್ದಾರಿ ವಹಿಸಿಕೊಂಡರು. 14 ವರ್ಷಗಳ ಸೇವಾವಧಿಯಲ್ಲಿ ಶ್ರೀನಗರ, ಸಿಯಾಚಿನ್, ಬಾಗ್ಡೋಗ್ರಾ ಹಾಗೂ ನಕ್ಸಲ್ ಪೀಡಿತ ಬಸ್ತಾರ್‌ನಂತಹ ಸವಾಲಿನ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಿದರು.
2014ರ ಜಮ್ಮು-ಕಾಶ್ಮೀರ ಪ್ರವಾಹದ ಸಮಯದಲ್ಲಿ ಆಪರೇಷನ್ ಮೇಘ್ ರಾಹತ್ ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಡರಾತ್ರಿ ಗಾಯಗೊಂಡ ಯೋಧರನ್ನ ರಕ್ಷಿಸುವ ಕಾರ್ಯಾಚರಣೆಗಳು ಅವರಿಗೆ ಎಂತಹ ಒತ್ತಡದ ಪರಿಸ್ಥಿತಿಯನ್ನೂ ನಿಭಾಯಿಸುವ ಧೈರ್ಯವನ್ನ ಕಲಿಸಿದವು.
ಉದ್ಯಮಶೀಲತೆ ಕಡೆಗೆ ಶಿಖಾ ಒಲವು
ಸೇನೆಯಿಂದ ನಿವೃತ್ತಿಯಾದ ಬಳಿಕ ಶಿಖಾ ಚೌಧರಿ ಅವರು ಉದ್ಯಮಶೀಲತೆಯತ್ತ ಮುಖ ಮಾಡಿದರು. "ನನ್ನ ಮೊದಲ ಉದ್ಯೋಗದ ನೇಮಕಾತಿ ಪತ್ರಕ್ಕೆ ಭಾರತದ ರಾಷ್ಟ್ರಪತಿಗಳು ಸಹಿ ಮಾಡಿದ್ದರು. ಅದರ ನಂತರ ಬೇರೆ ಯಾವುದೇ ಬಾಸ್ ಕೈಕೆಳಗೆ ಕೆಲಸ ಮಾಡುವುದನ್ನ ನಾನು ಕಲ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಹಾಗಾಗಿ ನಾನೇ ಸ್ವಂತ ಬಾಸ್ ಆಗಲು ನಿರ್ಧರಿಸಿದೆ," ಎಂದು ಅವರು ತಮ್ಮ ಈ ಬದಲಾವಣೆಯ ಹಿಂದಿನ ಆಸಕ್ತಿದಾಯಕ ಕಾರಣವನ್ನ ಬಿಚ್ಚಿಟ್ಟಿದ್ದಾರೆ.
ತಮ್ಮ ಈಆಲೋಚನೆಗೆ ತಕ್ಕಂತೆ ತಮ್ಮ ಸಹೋದರಿಯ ಜೊತೆಗೂಡಿ ಹೊಸ ವ್ಯವಹಾರಕ್ಕೆ ಕೈಹಾಕಿದರು.
ಮುಂಬೈನಲ್ಲಿ ಜೆಸ್ಸಿಯಾಸ್ ಕೆಫೆ ಆರಂಭ
ಶಿಖಾ ಅವರಿಗೆ ಕೆಫೆ ತೆರೆಯುವುದು ಕೇವಲ ಊಟೋಪಚಾರದ ವ್ಯವಹಾರವಾಗಿರಲಿಲ್ಲ. ಬದಲಿಗೆ ಜನರು ಒಟ್ಟುಗೂಡಿ ಬೆರೆಯುವಂತಹ ಒಂದು ಸುಂದರ ತಾಣವನ್ನ ಸೃಷ್ಟಿಸುವುದಾಗಿತ್ತು. ಅಂಧೇರಿಯಲ್ಲಿರುವ 45 ಆಸನಗಳ ಈ ಕೆಫೆಯು ಜಪಾನೀಸ್, ಇಟಾಲಿಯನ್ ಮತ್ತು ಫ್ರೆಂಚ್ ಸೇರಿದಂತೆ ಮಲ್ಟಿ-ಕ್ಯುಸಿನ್ ಖಾದ್ಯಗಳನ್ನ ಇಲ್ಲಿ ನೀಡಲಾಗುತ್ತದೆ.
ಕೇವಲ ಆಹಾರ ಮಾತ್ರವಲ್ಲದೆ, ಕನ್ನಡಿ ಪೇಂಟಿಂಗ್, ಟೋಟ್ ಬ್ಯಾಗ್ ಪೇಂಟಿಂಗ್ ಸೇರಿದಂತೆ ಅನೇಕ ಸಮುದಾಯ ಆಧಾರಿತ ಕಾರ್ಯಾಗಾರಗಳನ್ನ ಆಯೋಜಿಸುವ ಮೂಲಕ ಜೆಸ್ಸಿಯಾಸ್ ಕೆಫೆ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಮಕ್ಕಳೊಂದಿಗೆ ಬರುವ ಪೋಷಕರಿಗೆ ಮುಕ್ತ ಅವಕಾಶ ಕಲ್ಪಿಸಿರುವುದರಿಂದ ಇದು ಜನಪ್ರಿಯ ತಾಣವಾಗಿದೆ.
ವ್ಯವಹಾರಕ್ಕೆ ಶ್ರೀರಕ್ಷೆಯಾದ ಸೇನಾ ಶಿಸ್ತು
ವಾಯುಪಡೆಯಲ್ಲಿ ಲಾಜಿಸ್ಟಿಕ್ಸ್ ನಿರ್ವಹಣೆ ಮಾಡಿದ್ದ ಅನುಭವ ಶಿಖಾ ಅವರಿಗೆ ಕೆಫೆ ನಡೆಸಲು ದೊಡ್ಡ ಮಟ್ಟದಲ್ಲಿ ನೆರವಾಗುತ್ತಿದೆ. ಸೇನೆಯಲ್ಲಿದ್ದಂತೆ ಶಿಸ್ತುಬದ್ಧ ಮತ್ತು ಪ್ರೇರೇಪಿತ ಕೆಲಸಗಾರರನ್ನ ಹೊರಗಿನ ಜಗತ್ತಿನಲ್ಲಿ ಹುಡುಕುವುದು ಆರಂಭದಲ್ಲಿ ಸವಾಲಾಗಿತ್ತು.
ಆದರೆ ತಮ್ಮ ಸಿಬ್ಬಂದಿಗೆ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನ ಕಲಿಸುವ ಮೂಲಕ ಅವರು ಅತ್ಯುತ್ತಮ ತಂಡವನ್ನು ಕಟ್ಟಿದ್ದಾರೆ. ಭವಿಷ್ಯದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಕೆಫೆಗಳನ್ನ ವಿಸ್ತರಿಸುವ ಗುರಿ ಹೊಂದಿರುವ ಶಿಖಾ ಚೌಧರಿ, ಬಿಡುವಿನ ವೇಳೆಯಲ್ಲಿ ಇನ್‌ಸ್ಟಾಗ್ರಾಮ್ ಕಂಟೆಂಟ್ ರಚನೆ, ಹಾಡುಗಾರಿಕೆ ಮತ್ತು ನೃತ್ಯವನ್ನು ಕಲಿಯುತ್ತಾ ಜೀವನದ ಪ್ರತಿ ಹಂತವನ್ನೂ ಸಂಭ್ರಮಿಸುತ್ತಿದ್ದಾರೆ.


Click it and Unblock the Notifications
