ಮೋದಿ ವಿರುದ್ದ ತೀರಾ ಕೆಳಮಟ್ಟದ ಪದ ಬಳಸಿದ ಕಾಂಗ್ರೆಸ್ ಸಂಸದ
ನವದೆಹಲಿ, ಜೂನ್ 24: ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧುರಿ, ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ದ ಕೆಟ್ಟ ಪದವನ್ನು ಬಳಸಿ, ಆಮೇಲೆ, ನನ್ನ ಹಿಂದಿ ಅಷ್ಟಾಗಿ ಸರಿಯಿಲ್ಲ ಎಂದು ನುಣುಚಿ ಕೊಂಡಿದ್ದಾರೆ.
ಪಶ್ಚಿಮ ಬಂಗಾಳದ ಬೆಹ್ರಾಂಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ಅಧೀರ್ ರಂಜನ್, ಲೋಕಸಭೆಯಲ್ಲಿ ಮಾತನಾಡುತ್ತಾ ಮೋದಿಯನ್ನು 'ಗಂಧೀ ನಾಲೀ' (ಕೊಳಕು ಚರಂಡಿ) ಎನ್ನುವ ತೀರಾ ಕೆಳಮಟ್ಟದ ಪದವನ್ನು ಬಳಸಿ ಟೀಕಿಸಿದ್ದಾರೆ.
ಕಾಂಗ್ರೆಸ್ ಸಂಸದನ ಈ ಪದಬಳಕೆಗೆ ಸ್ಪೀಕರ್ ಕೂಡಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಧೀರ್ ರಂಜನ್, ಮೋದಿ ವಿರುದ್ದ ಈ ಪದ ಬಳಸುತ್ತಿದ್ದಂತೆಯೇ, ಬಿಜೆಪಿ ಸಂಸದರು ತೀವ್ರ ವಿರೋಧ ವ್ಯಕ್ತಪಡಿಸಿದರು.

ತನ್ನ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗುತ್ತಿದ್ದಂತೆಯೇ, ನನ್ನ ಪದ ಬಳಕೆಯ ಉದ್ದೇಶ ಅದಲ್ಲ. ನಾಲೀ ಅಂದರೆ ಕಾಲುವೆ, ಅದನ್ನು ತಲೆಯಲ್ಲಿ ಇಟ್ಟುಕೊಂಡು ಆ ಪದವನ್ನು ಬಳಸಿದ್ದೇನೆಯೇ ಹೊರತು, ಉದ್ದೇಶಪೂರ್ವಕವಲ್ಲ ಎಂದು ಹೇಳಿದ್ದಾರೆ.
ನನಗೆ ಹಿಂದಿ ಅಷ್ಟಾಗಿ ಬರುವುದಿಲ್ಲ, ನಾನು ಬಳಸಿದ ಪದವನ್ನು ಯಾರೂ ಅಪಾರ್ಥ ಮಾಡಿಕೊಳ್ಳಬೇಡಿ. ನಾನು ಬೇಕಿದ್ದಲ್ಲಿ ಪ್ರಧಾನಿಯ ಕ್ಷಮೆಯಾಚಿಸುತ್ತೇನೆಂದು ಅಧೀರ್ ರಂಜನ್ ಚೌಧುರಿ ಹೇಳಿದ್ದಾರೆ.
ಗಂಧೀ ನಾಲೀಕಾ ಕೀಡಾ, ಭಸ್ಮಾಸುರ, ಸೈತಾನ್.. ಈ ರೀತಿಯ ಹಲವು ಪದಗಳನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರು, ನರೇಂದ್ರ ಮೋದಿ ವಿರುದ್ದ ಬಳಸಿದ್ದರು.












Click it and Unblock the Notifications