Aadani: ಮುಂದ್ರಾದ ಅದಾನಿ ಪಬ್ಲಿಕ್ ಸ್ಕೂಲ್ ರಜತ ಮಹೋತ್ಸವ: ಮಹತ್ವದ ಮಾಹಿತಿ ಹಂಚಿಕೊಂಡ ಪ್ರೀತಿ ಅದಾನಿ
Aadani: ಮುಂದ್ರಾದ ಅದಾನಿ ಪಬ್ಲಿಕ್ ಸ್ಕೂಲ್ 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಭಾನುವಾರ ಅತ್ಯಂತ ವೈಭವದಿಂದ ರಜತ ಮಹೋತ್ಸವವನ್ನು ಆಚರಿಸಲಾಯಿತು. ಕಚ್ ಪ್ರಾಂತ್ಯದ ಶೈಕ್ಷಣಿಕ ಅಭಿವೃದ್ಧಿ ಮತ್ತು ಸಮುದಾಯದ ಪ್ರಗತಿಯಲ್ಲಿ ಈ ಸಂಸ್ಥೆಯು ಕಳೆದ ಎರಡು ದಶಕಗಳಿಂದ ಮಹತ್ತರ ಪಾತ್ರ ವಹಿಸಿದೆ. 2001ರಲ್ಲಿ ಚಿಕ್ಕದಾಗಿ ಆರಂಭವಾದ ಈ ಶಾಲೆಯು ಇಂದು ಅತ್ಯುತ್ತಮ ಶೈಕ್ಷಣಿಕ ಗುಣಮಟ್ಟದೊಂದಿಗೆ ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಯಾಗಿ ಬೆಳೆದು ನಿಂತಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಶಾಲೆಯ ಹಳೆಯ ವಿದ್ಯಾರ್ಥಿಗಳು, ಈಗಿನ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ತಜ್ಞರು ಹಾಗೂ ಅನೇಕ ಗಣ್ಯರು ಭಾಗವಹಿಸಿದ್ದರು.
ಈ ಕಾರ್ಯಕ್ರಮದ ನೇತೃತ್ವವನ್ನು ಅದಾನಿ ಫೌಂಡೇಶನ್‌ನ ಅಧ್ಯಕ್ಷರಾದ ಡಾ.ಪ್ರೀತಿ ಅದಾನಿ ಅವರು ವಹಿಸಿದ್ದರು. ಒಂದು ಸಣ್ಣ ಗುರಿಯೊಂದಿಗೆ ಆರಂಭವಾದ ಈ ಶಾಲೆ, ಇಂದು ಈ ಭಾಗದ ಪ್ರಮುಖ ಸಿಬಿಎಸ್‌ಇ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದು ನಿಂತಿದೆ ಸ್ಮರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, "ಅದಾನಿ ಪಬ್ಲಿಕ್ ಸ್ಕೂಲ್ ಕೇವಲ ಒಂದು ಶಿಕ್ಷಣ ಸಂಸ್ಥೆಯಲ್ಲ, ಇದು ಪ್ರೀತಿ ಮತ್ತು ನಂಬಿಕೆಯಿಂದ ಇಷ್ಟು ವರ್ಷಗಳ ಕಾಲ ಪೋಷಿಸಿ ಬೆಳೆಸಿದ ನಮ್ಮ ಮೊದಲ ಮಗುವಿನಂತೆ," ಎಂದು ಭಾವುಕರಾಗಿ ಹೇಳಿದರು.

ದೂರದ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕೆಂಬ ಸರಳ ಕನಸಿನೊಂದಿಗೆ ಈ ಶಾಲೆಯು ಆರಂಭವಾಯಿತು ಎಂದು ಅವರು ಹೇಳಿದರು. ಗುಜರಾತ್ ಭೂಕಂಪದಂತಹ ಭೀಕರ ಸವಾಲುಗಳ ನಡುವೆಯೂ ಈ ಶಾಲೆಯನ್ನು ನಿರ್ಮಿಸಲಾಯಿತು. ಈ ನೈಸರ್ಗಿಕ ವಿಕೋಪವೇ ಯೋಜನೆಯನ್ನು ಶೀಘ್ರವಾಗಿ ಕಾರ್ಯಗತಗೊಳಿಸಲು ಪ್ರೇರಣೆಯಾಯಿತು ಎಂದು ಅವರು ನೆನಪಿಸಿಕೊಂಡರು. ಸಂಕಷ್ಟದ ಸಮಯದಲ್ಲಿ ಧೈರ್ಯ, ಸ್ಥಿತಿಸ್ಥಾಪಕತ್ವ ಮತ್ತು ತಂಡದ ಕೆಲಸ ಎಷ್ಟು ಮುಖ್ಯ ಎಂಬುದನ್ನು ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.
ಬಳಿಕ ಮಾತನಾಡಿದ ಅದಾನಿ ಸಮೂಹದ ಅಧ್ಯಕ್ಷರಾದ ಗೌತಮ್ ಅದಾನಿ ಅವರು, "ಈ 25 ವರ್ಷಗಳ ಪಯಣವು ಕೇವಲ ಒಂದು ಸಂಸ್ಥೆಯ ಆಚರಣೆಯಲ್ಲ. ಇದು ಪೋಷಿಸಿದ ಸಾವಿರಾರು ಕನಸುಗಳ ಮತ್ತು ರೂಪಿಸಿದ ಭವಿಷ್ಯದ ಸಂಭ್ರಮವಾಗಿದೆ," ಎಂದು ತಿಳಿಸಿದರು. ಮುಂದುವರಿದು ಮಾತನಾಡಿದ ಅವರು, "ಇಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಯೂ ಆತ್ಮವಿಶ್ವಾಸ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಮತ್ತು ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡುವ ಹಂಬಲದೊಂದಿಗೆ ಇಲ್ಲಿಂದ ಹೊರಹೊಮ್ಮಲಿ," ಎಂದು ಹಾರೈಸಿದರು.
ಈ ಸಮಾರಂಭದ ಪ್ರಮುಖ ಆಕರ್ಷಣೆಯೆಂದರೆ, ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ನೂತನ ಒಳಾಂಗಣ ಕ್ರೀಡಾ ಸಂಕೀರ್ಣದ ಉದ್ಘಾಟನೆ. ಇದು ಬ್ಯಾಡ್ಮಿಂಟನ್, ಪಿಕಲ್‌ಬಾಲ್ ಮತ್ತು ಟೇಬಲ್ ಟೆನಿಸ್ ಕ್ರೀಡೆಗಳಿಗೆ ಸುಸಜ್ಜಿತ ವೇದಿಕೆಯನ್ನು ಒದಗಿಸುತ್ತದೆ. ಇದರೊಂದಿಗೆ 558 ಆಸನಗಳ ಸಾಮರ್ಥ್ಯದ ಅತ್ಯಾಧುನಿಕ ಆಡಿಟೋರಿಯಂ ಅನ್ನು ಸಹ ಲೋಕಾರ್ಪಣೆ ಮಾಡಲಾಯಿತು. ಇದು ಕಚ್ ಪ್ರಾಂತ್ಯದಲ್ಲೇ ಅತಿದೊಡ್ಡ ಸಭಾಂಗಣಗಳಲ್ಲಿ ಒಂದೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಸಮಾರಂಭವು ರೋಬೋಟಿಕ್ಸ್ ಸೇರಿದಂತೆ ಹಲವು ವಿಶೇಷ ಪ್ರದರ್ಶನಗಳು, ಕಲಾಕೃತಿಗಳ ಪ್ರದರ್ಶನ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಯಿತು. ಶಾಲೆಯ ಕಳೆದ 25 ವರ್ಷಗಳ ಸುದೀರ್ಘ ಪಯಣವನ್ನು ಸಾರುವ ಸಾಕ್ಷ್ಯಚಿತ್ರವನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ಜೊತೆಗೆ ಶಾಲೆಯ ಪ್ರಮುಖ ಮೈಲಿಗಲ್ಲುಗಳನ್ನು ದಾಖಲಿಸಿದ ಸ್ಮರಣೀಯ 'ಕಾಫಿ ಟೇಬಲ್ ಬುಕ್' ಅನ್ನು ಸಹ ಬಿಡುಗಡೆ ಮಾಡಲಾಯಿತು.
ಕೇವಲ 233 ವಿದ್ಯಾರ್ಥಿಗಳು ಮತ್ತು 27 ಶಿಕ್ಷಕರೊಂದಿಗೆ ಸಣ್ಣ ಮಟ್ಟದಲ್ಲಿ ಆರಂಭವಾದ ಅದಾನಿ ಪಬ್ಲಿಕ್ ಸ್ಕೂಲ್, ಇಂದು 2,300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 100ಕ್ಕೂ ಹೆಚ್ಚು ಶಿಕ್ಷಕರನ್ನು ಹೊಂದಿರುವ ಒಂದು ಬಲಿಷ್ಠ ಶಿಕ್ಷಣ ಸಂಸ್ಥೆಯಾಗಿ ಬೆಳೆದು ನಿಂತಿದೆ. ಶಾಲೆಯ ಈ ಯಶಸ್ಸಿನ ಕಥೆಯನ್ನು ರೂಪಿಸುವಲ್ಲಿ ಶ್ರಮಿಸಿದ ಮಾಜಿ ಮತ್ತು ಪ್ರಸ್ತುತ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರ ಕೊಡುಗೆಯನ್ನು ಡಾ.ಪ್ರೀತಿ ಅದಾನಿ ಅವರು ಈ ಸಂದರ್ಭದಲ್ಲಿ ಮುಕ್ತಕಂಠದಿಂದ ಶ್ಲಾಘಿಸಿದರು.
ಶೈಕ್ಷಣಿಕ ಕ್ಷೇತ್ರ, ಸರ್ಕಾರಿ ಸೇವೆ, ಉದ್ಯಮ, ರಕ್ಷಣೆ, ಕ್ರೀಡೆ ಮತ್ತು ಪ್ರದರ್ಶಕ ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಶಾಲೆಯ ಹಳೆಯ ವಿದ್ಯಾರ್ಥಿಗಳನ್ನು ಸಹ ಅವರು ಶ್ಲಾಘಿಸಿದರು. "ಹಳೆಯ ವಿದ್ಯಾರ್ಥಿಗಳ ಈ ಸಾಧನೆಗಳೇ ಶಾಲೆಯ ಅತಿದೊಡ್ಡ ಪರಂಪರೆ," ಎಂದು ಅವರು ಬಣ್ಣಿಸಿದರು.
ಈ ಸಮಾರಂಭವು ಶಾಲಾ ಗೀತೆಯ ಗಾಯನದೊಂದಿಗೆ ಮುಕ್ತಾಯಗೊಂಡಿತು. ಇದು ಮುಂದಿನ 25 ವರ್ಷಗಳ ಕಾಲ ಬೆಳವಣಿಗೆ, ನಾವೀನ್ಯತೆ ಮತ್ತು ಶೈಕ್ಷಣಿಕ ಶ್ರೇಷ್ಠತೆಯತ್ತ ಸಾಗುವ ಶಾಲೆಯ ನವೀಕೃತ ಬದ್ಧತೆಯನ್ನು ಸಾರಿತು.












Click it and Unblock the Notifications