Adani Group: ಅದಾನಿ ಕಂಪನಿಯಿಂದ ₹1,000 ಕೋಟಿಯ ಮೂರನೇ ಎನ್‌ಸಿಡಿ ವಿತರಣೆ, 8.9% ಲಾಭಾಂಶ
ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (AEL) ತನ್ನ ಮೂರನೇ ಸಾರ್ವಜನಿಕ ಪರಿವರ್ತಿಸಲಾಗದ ಡಿಬೆಂಚರ್‌ಗಳ (NCD) ವಿತರಣೆಯನ್ನು ಆರಂಭಿಸುವುದಾಗಿ ಘೋಷಿಸಿದೆ. ಅದನ್ನು 2026 ಜನವರಿ 6ರಂದು ಆರಂಭ ಮಾಡುವುದಾಗಿ ತಿಳಿಸಿದ್ದು, ಅದು ಜನವರಿ 19ರಂದು ಕೊನೆಗೊಳ್ಳಲಿದೆ. ಈ ಎನ್‌ಸಿಡಿಗಳು ವಾರ್ಷಿಕವಾಗಿ ಗರಿಷ್ಠ ಶೇಕಡಾ 8.90 ವರೆಗೆ ಪರಿಣಾಮಕಾರಿ ಫಲಿತಾಂಶಗಳನ್ನು ನೀಡಲಿವೆ.
ಈ ಎನ್‌ಸಿಡಿಗಳಿಗೆ ಐಸಿಆರ್‌ಎ (ICRA) ಕಂಪನಿ ಮತ್ತು ಸಿಎಆರ್‌ಇ (CARE) ರೇಟಿಂಗ್ಸ್ ಲಿಮಿಟೆಡ್ ಸಂಸ್ಥೆಗಳು 'ಎಎ-' ರೇಟಿಂಗ್‌ನ್ನು 'ಸ್ಥಿರ' ಔಟ್‌ಲುಕ್‌ನೊಂದಿಗೆ ನೀಡಿವೆ. ಈ ರೇಟಿಂಗ್ ಹೊಂದಿರುವ ಭದ್ರತೆಗಳು ಹಣಕಾಸು ಬಾಧ್ಯತೆಗಳನ್ನು ಸಕಾಲಕ್ಕೆ ಪೂರೈಸಲಿದ್ದು, ಸುರಕ್ಷತೆ ಹೊಂದಿವೆ ಎಂದು ಕಂಪನಿ ತಿಳಿಸಿದೆ. ಇಂಥದ್ದೆ ರೇಟಿಂಗ್ ಹೊಂದಿರುವ ಇತರ ಎನ್‌ಸಿಡಿಗಳು ಹಾಗೂ ಸ್ಥಿರ ಠೇವಣಿಗಳೊಂದಿಗೆ ಹೋಲಿಸಿದರೆ, ಈಗಿನ ಎನ್‌ಸಿಡಿಗಳು ಸ್ಪರ್ಧಾತ್ಮಕ ಇಳುವರಿ ಕೊಡಲಿವೆ.

ಒಟ್ಟು 1,000 ಕೋಟಿ ಮೊತ್ತದ ಎನ್‌ಸಿಡಿ ಸಂಚಿಕೆಯಲ್ಲಿ 500 ಕೋಟಿ ರೂಪಾಯಿ ಮೂಲ ವಿತರಣೆ ಮತ್ತು ಹೆಚ್ಚುವರಿ ರೂಪಾಯಿ 500 ಕೋಟಿ ವರೆಗಿನ 'ಗ್ರೀನ್ ಶೂ' ಆಯ್ಕೆಯನ್ನು ಒಳಗೊಂಡಿದೆ. ಈ ಎನ್‌ಸಿಡಿಗಳನ್ನು ಬಿಎಸ್ಇ ಹಾಗೂ ಎನ್‌ಎಸ್‌ಇ ಷೇರುಪೇಟೆಗಳಲ್ಲಿ ಪಟ್ಟಿ ಮಾಡಲು ಪ್ರಸ್ತಾಪಿಸಲಾಗಿದೆ. ಹಂಚಿಕೆ 'ಮೊದಲು ಬಂದವರಿಗೆ ಮೊದಲು ಸೇವೆ' ಆಧಾರದ ಮೇಲೆ ನಡೆಯಲಿದೆ.
ಅದಾನಿ ಗ್ರೂಪ್‌ನ ಪ್ರಮುಖ ಸಂಸ್ಥೆಯಾದ ಎಇಎಲ್, 1993ರಲ್ಲಿ ಸ್ಥಾಪನೆಯಾಗಿ, ದೀರ್ಘಕಾಲಿಕ ಹಾಗೂ ಸುಸ್ಥಿರ ಮೂಲಸೌಕರ್ಯ ವ್ಯವಹಾರ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಇದು ಮಾರುಕಟ್ಟೆ ಬಂಡವಾಳೀಕರಣದ ದೃಷ್ಟಿಯಿಂದ ಭಾರತದ ಅತಿದೊಡ್ಡ ಪಟ್ಟಿಗೊಂಡ ವ್ಯಾಪಾರ ಇನ್ಕ್ಯುಬೇಟರ್‌ಗಳಲ್ಲೊಂದಾಗಿದೆ. ಈ ಮೂರನೇ ಸಾರ್ವಜನಿಕ ಎನ್‌ಸಿಡಿ ವಿತರಣೆಯು, ಭಾರತದ ಬಂಡವಾಳ ಮಾರುಕಟ್ಟೆಗಳಲ್ಲಿ ಕಂಪನಿಯ ಹಾಜರಾತಿಯನ್ನು ವಿಸ್ತರಿಸುವ ಮತ್ತೊಂದು ಪ್ರಮುಖ ಹಂತವಾಗಿದೆ.
ಚಿಲ್ಲರೆ ಹೂಡಿಕೆದಾರರಿಗೆ ಬೆಂಬಲ
ಈ ಕುರಿತು ಪ್ರತಿಕ್ರಿಯಿಸಿದ ಅದಾನಿ ಗ್ರೂಪ್‌ನ ಗ್ರೂಪ್ ಸಿಎಫ್‌ಒ ಜುಗೆಶಿಂದರ್ 'ರಾಬಿ' ಸಿಂಗ್, ಚಿಲ್ಲರೆ ಹೂಡಿಕೆದಾರರಿಗೆ ಭಾರತದ ದೀರ್ಘಾವಧಿಯ ಮೂಲ ಸೌಕರ್ಯ ಬೆಳವಣಿಗೆಯಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸುವುದು ನಮ್ಮ ಉದ್ದೇಶ. ನಮ್ಮ ಹಿಂದಿನ ಎನ್‌ಸಿಡಿ ವಿತರಣೆಗಳಿಗೆ ದೊರೆತ ಬಲವಾದ ಪ್ರತಿಕ್ರಿಯೆ, ನಮ್ಮ ಕಾರ್ಯತಂತ್ರ ಹಾಗೂ ಆರ್ಥಿಕ ಶಿಸ್ತಿನ ಮೇಲಿನ ನಂಬಿಕೆಯನ್ನು ಮತ್ತಷ್ಟು ದೃಢಪಡಿಸಿದೆ' ಎಂದು ಹೇಳಿದರು.
ಎಇಎಲ್ ಏರ್‌ಪೋರ್ಟ್, ರಸ್ತೆ ಯೋಜನೆಗಳು, ಡೇಟಾ ಸೆಂಟರ್‌ಗಳು ಹಾಗೂ ಹಸಿರು ಹೈಡ್ರೋಜನ್‌ವರೆಗೆ ಭಾರತದ ಮುಂದಿನ ತಲೆಮಾರಿನ ಮೂಲಸೌಕರ್ಯ ಯೋಜನೆಗಳನ್ನು ರೂಪಿಸಲಿವೆ. ಇತ್ತೀಚಿನ ಬಡ್ಡಿದರ ಕಡಿತಗಳು ಎನ್‌ಸಿಡಿ ಗಳ ಸ್ಥಿರ ಆದಾಯವನ್ನು ಹುಡುಕುತ್ತಿರುವ ಹೂಡಿಕೆದಾರರಿಗೆ ಸೂಕ್ತ ಸಮಯ ತಂದಿದೆ. ಕಳೆದ ವರ್ಷ ಜುಲೈನಲ್ಲಿ ಆರಂಭಿಸಲಾದ ಎಇಎಲ್ 1,000 ಕೋಟಿ ರೂಪಾಯಿ ಮೌಲ್ಯದ ಎರಡನೇ ಎನ್‌ಸಿಡಿ ವಿತರಣೆಯು ಆರಂಭದ ಮೊದಲ ದಿನ ಬರೀ ಮೂರು ಗಂಟೆಗಳಲ್ಲಿ ಸಂಪೂರ್ಣ ಚಂದಾದಾರಿಕೆ ಪಡೆದುಕೊಂಡಿತ್ತು. ಎನ್‌ಬಿಎಫ್‌ಸಿ ಹೊರತಾಗಿ, ಚಿಲ್ಲರೆ ಹೂಡಿಕೆದಾರರಿಗೆ ಸಾಲವನ್ನು ಈ ಖಾಸಗಿ ಕಾರ್ಪೊರೇಟ್ ಸಂಸ್ಥೆ ಎಇಎಲ್ ಒದಗಿಸಿದೆ.
ಸಿಎಆರ್‌ಸಿ ರೇಟಿಂಗ್ಸ್ ಕಂಪನಿ ಕಳೆದ ಡಿಸೆಂಬರ್ 22 ರ ರೇಟಿಂಗ್ ಪತ್ರದಲ್ಲಿ ಈ ಎನ್‌ಸಿಡಿಗಳಿಗೆ 'CARE ಎಎ- ಸ್ಥಿರ' ರೇಟಿಂಗ್ ಕೊಟ್ಟಿದೆ. ಅದೇ ರೀತಿ ಐಸಿಆರ್‌ಎ ಕಂಪನಿಯು ಕಳೆದ ಡಿಸೆಂಬರ್ 20ರಂದು ಸ್ಥಿರ ರೇಟಿಂಗ್ ನೀಡಿದೆ.ಇದೆಲ್ಲ ರೇಟಿಂಗ್‌ಗಳು ಅತ್ಯಂತ ಕಡಿಮೆ ಕ್ರೆಡಿಟ್ ಅಪಾಯ ಹೊಂದಿವೆ. ಸಂಗ್ರಹವಾಗುವ ಮೊತ್ತದಲ್ಲಿ ಕನಿಷ್ಠ ಶೇಕಡಾ 75 ಹಣವನ್ನು ಕಂಪನಿಯು ಈಗಿರುವ ಸಾಲಗಳ ಪೂರ್ವಪಾವತಿ ಅಥವಾ ಮರುಪಾವತಿಗೆ ಬಳಸಿಕೊಳ್ಳುವುದಾಗಿ ತಿಳಿಸಿವೆ. ಬಾಕಿ ಉಳಿಯುವ ಶೇಕಡಾ 25ರಷ್ಟು ಹಣವನ್ನು ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗಾಗಿ ಬಳಸುವ ಚಿಂತನೆಯಲ್ಲಿದೆ.
ಎಇಎಲ್ ಹಲವು ಪ್ರಮುಖ ಯೋಜನೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದೆ. ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು 2025 ಅಕ್ಟೋಬರ್ 8ರಂದು ಉದ್ಘಾಟಿಸಲಾಯಿತು. ಅದರ ಕಾರ್ಯಾಚರಣೆ ಡಿಸೆಂಬರ್ 25ರಿಂದ ಆರಂಭವಾಗಿದೆ. ಗಲ್ ಹಾಗೂ ಅದಾನಿಕಾನೆಕ್ಸ್ ಕಂಪನಿಗಳು ಸಹಕಾರದಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಭಾರತದ ಅತಿದೊಡ್ಡ ಎಐ ಡೇಟಾ ಸೆಂಟರ್ ಕ್ಯಾಂಪಸ್ ಹಾಗೂ ಹಸಿರು ಇಂಧನ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಈಗಾಗಲೇ ಘೋಷಿಸಿವೆ. ಬಿಹಾರದಲ್ಲಿ ಹೈಬ್ರಿಡ್ ವರ್ಷಾಶನ ಮಾದರಿಯಡಿ ಐದು ಹೊಸ ರಸ್ತೆ ಯೋಜನೆಗಳಿಗೆ ಪ್ರಶಂಸೆ, ಪ್ರಶಸ್ತಿಗಳು ಧಕ್ಕಿವೆ.
ಈ ಎನ್‌ಸಿಡಿಗಳು ಮುಂದಿನ 24, 36 ಹಾಗೂ 60 ತಿಂಗಳ ಅವಧಿಗಳಲ್ಲಿ ಲಭ್ಯ ಇರಲಿವೆ. ಒಟ್ಟು ಎಂಟು ಸರಣಿಗಳಲ್ಲಿ ತ್ರೈಮಾಸಿಕ, ವಾರ್ಷಿಕ ಮತ್ತು ಸಂಚಿತ ಬಡ್ಡಿ ಪಾವತಿ ಆಯ್ಕೆ ಹೊಂದಿವೆ. ಪ್ರತಿಯೊಂದು ಎನ್‌ಸಿಡಿಯ ಮುಖಬೆಲೆ 1,000 ರೂ. ಆಗಿದೆ. ಕನಿಷ್ಠ ಅರ್ಜಿ ಗಾತ್ರ 10,000 ರೂ.ನಷ್ಟಾಗಿದೆ ಎಂದು ಕಂಪನಿ ತಿಳಿಸಿವೆ.












Click it and Unblock the Notifications