ಸೌರ ವಿದ್ಯುತ್ ಟೆಂಡರ್ ಪ್ರಕರಣದಲ್ಲಿ ಆದಾನಿ ಗ್ರೂಪ್ ವಿರುದ್ಧದ ಸ್ಪರ್ಧಾತ್ಮಕ ವಿರೋಧಿ ಆರೋಪಗಳನ್ನು ವಜಾಗೊಳಿಸಿದ ಸಿಸಿಐ
Adani Group: ಭಾರತೀಯ ಸ್ಪರ್ಧಾತ್ಮಕ ಆಯೋಗ(CCI)ವು, ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಮತ್ತು ಸಂಬಂಧಿತ ಕಂಪನಿಗಳ ವಿರುದ್ಧ ಕೇಳಿಬಂದಿದ್ದ ಮಾರುಕಟ್ಟೆ ಪ್ರಾಬಲ್ಯದ ದುರುಪಯೋಗ ಮತ್ತು ಸ್ಪರ್ಧಾತ್ಮಕ ವಿರೋಧಿ ಚಟುವಟಿಕೆಗಳ ಆರೋಪಗಳನ್ನು ವಜಾಗೊಳಿಸಿದೆ. ಸೌರಶಕ್ತಿ ಟೆಂಡರ್‌ಗೆ ಸಂಬಂಧಿಸಿದ ಈ ಪ್ರಕರಣದಲ್ಲಿ, ಯಾವುದೇ ಪ್ರಾಥಮಿಕ ಪುರಾವೆಗಳು ಲಭ್ಯವಿಲ್ಲದ ಕಾರಣ ಈ ತೀರ್ಪು ನೀಡಲಾಗಿದೆ ಎಂದು ತಿಳಿಸಿದೆ.
ದೆಹಲಿಯ ರವಿ ಶರ್ಮಾ ಎಂಬುವವರು ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್, ಗೌತಮ್ ಅದಾನಿ, ಅಜುರೆ ಪವರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಭಾರತೀಯ ಸೌರಶಕ್ತಿ ನಿಗಮ (SECI) ಹಾಗೂ ವಿವಿಧ ರಾಜ್ಯಗಳ ವಿದ್ಯುತ್ ವಿತರಣಾ ಕಂಪನಿಗಳು ಮತ್ತು ಸರ್ಕಾರಿ ಸಂಸ್ಥೆಗಳ ವಿರುದ್ಧ ಈ ದೂರನ್ನು ದಾಖಲಿಸಿದ್ದರು. 2019ರಲ್ಲಿ SECI ಹೊರಡಿಸಿದ್ದ 7 ಗಿಗಾವಾ ಟ್ಸಾಮರ್ಥ್ಯದ ಸೌರ ವಿದ್ಯುತ್ ಯೋಜನೆ ಮತ್ತು ಉತ್ಪಾದನಾ ಸಾಮರ್ಥ್ಯಕ್ಕೆ ಸಂಬಂಧಿಸಿದ ಟೆಂಡರ್ ಅನ್ನು, ಅದಾನಿ ಗ್ರೂಪ್ ಮತ್ತು ಅಜುರೆ ಪವರ್‌ನಂತಹ ದೊಡ್ಡ ಕಂಪನಿಗಳಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ ಎಂದು ಆರೋಪಿಸಿದ್ದರು. ಇದಲ್ಲದೆ, ಈ ಬಿಡ್ಡಿಂಗ್ ಈ ಟೆಂಡರ್ ಪ್ರಕ್ರಿಯೆಯು ಸಣ್ಣ ಕಂಪನಿಗಳು ಭಾಗವಹಿಸದಂತೆ ತಡೆಯುವ ಮೂಲಕ ಮುಕ್ತ ಮಾರುಕಟ್ಟೆ ಸ್ಪರ್ಧೆಯನ್ನು ನಿರ್ಬಂಧಿಸಿದೆ ಎಂದು ದೂರುದಾರರು ವಾದಿಸಿದ್ದರು. ಯೋಜನೆಯ ಸಾಮರ್ಥ್ಯಗಳನ್ನು ವರ್ಗಾವಣೆ ಮಾಡಲು ಈ ಪ್ರಕ್ರಿಯೆಯು ಅವಕಾಶ ನೀಡಿತು. ಇದು ಅಂತಿಮವಾಗಿ ಅದಾನಿ ಸಂಸ್ಥೆಗಳ ಪರವಾಗಿ ಯೋಜನೆಗಳು ಕ್ರೋಢೀಕರಣಗೊಳ್ಳಲು ದಾರಿ ಮಾಡಿಕೊಟ್ಟಿತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ದೂರುದಾರರಾದ ರವಿ ಶರ್ಮಾ ಅವರು ಅದಾನಿ ಸಮೂಹದ ವಿರುದ್ಧ ಮಾರುಕಟ್ಟೆ ಪ್ರಾಬಲ್ಯ ಮತ್ತು ಅಕ್ರಮಗಳ ಬಗ್ಗೆ ಹಲವು ಮಹತ್ವದ ಅಂಶಗಳನ್ನು ಪ್ರಸ್ತಾಪಿಸಿದ್ದರು. ಅದಾನಿ ಸಮೂಹವು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ತನ್ನ ಬಲವಾದ ಮಾರುಕಟ್ಟೆ ಸ್ಥಾನವನ್ನು ಬಳಸಿಕೊಂಡು, ಸಣ್ಣ ಕಂಪನಿಗಳು ಸ್ಪರ್ಧೆಯಲ್ಲಿ ಭಾಗವಹಿಸದಂತೆ ತಡೆದಿದೆ ಎಂದು ಆರೋಪಿಸಲಾಗಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ಬಿಡ್ಡಿಂಗ್ ನಿಯಮಗಳನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳುವ ಮೂಲಕ ಅಥವಾ ಕುತಂತ್ರದ ಮೂಲಕ ಟೆಂಡರ್ ಪಡೆಯಲಾಗಿದೆ ಎಂದು ಆರೋಪ ಮಾಡಿದ್ದರು. ಅಲ್ಲದೆ, ಅಮೆರಿಕದ ನ್ಯಾಯಾಂಗ ಇಲಾಖೆ ಮತ್ತು ಸೆಕ್ಯುರಿಟೀಸ್ ಎಂಡ್ ಎಕ್ಸ್ಚೇಂಜ್ ಕಮಿಷನ್ (SEC) ನಡೆಸಿದ ತನಿಖೆಗಳನ್ನು ಉಲ್ಲೇಖಿಸಿದ್ದರು.
ಕಂಪನಿಗಳು ರಹಸ್ಯವಾಗಿ ಒಪ್ಪಂದ ಮಾಡಿಕೊಂಡು ಮಾರುಕಟ್ಟೆಯನ್ನು ನಿಯಂತ್ರಿಸುತ್ತಿವೆ ಎಂಬ ಆರೋಪಕ್ಕೆ ಸಾಕ್ಷ್ಯವಿಲ್ಲ. ಟೆಂಡರ್ ಪ್ರಕ್ರಿಯೆಯಲ್ಲಿ ಅಥವಾ ಬಿಡ್ಡಿಂಗ್‌ನಲ್ಲಿ ಅಕ್ರಮ ಎಸಗಲಾಗಿದೆ ಎಂಬುದಕ್ಕೆ ಪುರಾವೆಗಳಿಲ್ಲ. ಅದಾನಿ ಸಮೂಹವು ತನ್ನ ಮಾರುಕಟ್ಟೆ ಸ್ಥಾನವನ್ನು ಅಸಮರ್ಪಕವಾಗಿ ಬಳಸಿಕೊಂಡಿದೆ ಎಂಬ ವಾದವನ್ನು ಆಯೋಗವು ತಳ್ಳಿಹಾಕಿದೆ.
ಭಾರತದ ವಿದ್ಯುತ್ ಉತ್ಪಾದನಾ ಮಾರುಕಟ್ಟೆಯು ಅತ್ಯಂತ ವೈವಿಧ್ಯಮಯ ಮತ್ತು ಸ್ಪರ್ಧಾತ್ಮಕವಾಗಿದೆ ಎಂದು ಭಾರತೀಯ ಸ್ಪರ್ಧಾತ್ಮಕ ಆಯೋಗ (CCI) ಗಮನಿಸಿದೆ. ಈ ಕ್ಷೇತ್ರದಲ್ಲಿ ಕೇವಲ ಒಂದು ಅಥವಾ ಎರಡು ಕಂಪನಿಗಳ ಬದಲಾಗಿ, ಅನೇಕ ಸರ್ಕಾರಿ ಮತ್ತು ಖಾಸಗಿ ವಲಯದ ಬಲಿಷ್ಠ ಸಂಸ್ಥೆಗಳು ಸಕ್ರಿಯವಾಗಿವೆ ಎಂದು ಆಯೋಗ ತಿಳಿಸಿದೆ. ಉದಾಹರಣೆಯಾಗಿ NTPC ಲಿಮಿಟೆಡ್ (ಸರ್ಕಾರಿ ಸ್ವಾಮ್ಯದ ಸಂಸ್ಥೆ), ಟಾಟಾ ಪವರ್ ಕಂಪನಿ ಲಿಮಿಟೆಡ್ (ಖಾಸಗಿ ವಲಯ), JSW ಎನರ್ಜಿ ಲಿಮಿಟೆಡ್ (ಖಾಸಗಿ ವಲಯ), ಸುಜ್ಲಾನ್ ಎನರ್ಜಿ ಲಿಮಿಟೆಡ್ (ಖಾಸಗಿ ವಲಯ) ಹೆಸರುಗಳನ್ನು ಉಲ್ಲೇಖಿಸಿದೆ. ಈ ರೀತಿಯ ಸ್ಪರ್ಧಾತ್ಮಕ ಪರಿಸ್ಥಿತಿಯಲ್ಲಿ, ಯಾವುದೇ ಒಂದು ಕಂಪನಿಯು ಮಾರುಕಟ್ಟೆಯನ್ನು ತನ್ನ ಇಚ್ಛೆಯಂತೆ ನಿಯಂತ್ರಿಸಲು ಸಾಧ್ಯವಿಲ್ಲ. ಆದ್ದರಿಂದ, ಅದಾನಿ ಸಮೂಹವು ಭಾರತೀಯ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಮಾರುಕಟ್ಟೆಯನ್ನು ಆಳುವ ಅಥವಾ ನಿಯಂತ್ರಿಸುವಂತಹ ಸ್ಥಿತಿಯಲ್ಲಿಲ್ಲ ಎಂದು ಆಯೋಗವು ಅಭಿಪ್ರಾಯಪಟ್ಟಿದೆ.
ಟೆಂಡರ್ ಕರೆಯುವ ಸಂಸ್ಥೆಯು ತನ್ನ ಅಗತ್ಯತೆಗಳಿಗೆ ಅನುಗುಣವಾಗಿ ಅರ್ಹತಾ ಮಾನದಂಡಗಳು ಮತ್ತು ತಾಂತ್ರಿಕ ಷರತ್ತುಗಳನ್ನು ನಿಗದಿಪಡಿಸುವ ವಿವೇಚನಾಧಿಕಾರವನ್ನು ಹೊಂದಿದೆ. ಟೆಂಡರ್‌ನ ಷರತ್ತುಗಳು ಕೇವಲ ದೊಡ್ಡ ಕಂಪನಿಗಳಿಗೆ ಮಾತ್ರ ಪೂರಕವಾಗಿವೆ ಅಥವಾ ಸಣ್ಣ ಕಂಪನಿಗಳ ಭಾಗವಹಿಸುವಿಕೆಯನ್ನು ಸೀಮಿತಗೊಳಿಸುತ್ತವೆ ಎಂಬ ಕಾರಣಕ್ಕೆ ಅದನ್ನು ಸ್ಪರ್ಧಾತ್ಮಕ ವಿರೋಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ದೊಡ್ಡ ಮಟ್ಟದ ಯೋಜನೆಗಳನ್ನು (ಉದಾಹರಣೆಗೆ 7 GW ಸಾಮರ್ಥ್ಯದ ಯೋಜನೆ) ಪೂರ್ಣಗೊಳಿಸಲು ಬೇಕಾದ ತಾಂತ್ರಿಕ ಮತ್ತು ಆರ್ಥಿಕ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಇಂತಹ ಷರತ್ತುಗಳನ್ನು ವಿಧಿಸುವುದು ಸಹಜ ಪ್ರಕ್ರಿಯೆಯಾಗಿದೆ ಎಂದು ಆಯೋಗ ಹೇಳಿದೆ.
"ಗ್ರೀನ್ ಶೂ ಆಪ್ಷನ್" ಅಥವಾ ಸೌರ ವಿದ್ಯುತ್ ಉತ್ಪಾದನೆಯೊಂದಿಗೆ ಉತ್ಪಾದನಾ ಸಾಮರ್ಥ್ಯವನ್ನು ಜೋಡಿಸುವ ನಿಯಮಗಳು ಸ್ಪರ್ಧಾತ್ಮಕ ನಿಯಮಗಳನ್ನು ಉಲ್ಲಂಘಿಸಿವೆ ಎಂಬ ದೂರುಗಳನ್ನು ಸಹ ಆಯೋಗವು ತಿರಸ್ಕರಿಸಿದೆ. ಈ ನಿಬಂಧನೆಗಳು ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರವು ರೂಪಿಸಿದ ನೀತಿಯ ಭಾಗವಾಗಿವೆ. ಇದು ಕೇವಲ ಒಂದು ಕಂಪನಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿಲ್ಲ, ಬದಲಾಗಿ ಭಾರತದಲ್ಲಿ ಸೌರ ಉಪಕರಣಗಳ ಉತ್ಪಾದನೆಯನ್ನು ಹೆಚ್ಚಿಸುವ ಗುರಿ ಹೊಂದಿದೆ. ಇಂತಹ ಟೆಂಡರ್ ಷರತ್ತುಗಳನ್ನು ಈ ಹಿಂದೆ ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗವು ಕೂಡ ಎತ್ತಿಹಿಡಿದಿದೆ ಮತ್ತು ಅವು ಕಾನೂನುಬದ್ಧವಾಗಿವೆ. ದೇಶೀಯವಾಗಿ ಸೌರ ವಿದ್ಯುತ್ ಮತ್ತು ಮಾಡ್ಯೂಲ್‌ಗಳ ತಯಾರಿಕೆಯನ್ನು ಉತ್ತೇಜಿಸಲು ಈ ರೀತಿಯ ಲಿಂಕ್ಡ್ ಟೆಂಡರ್ ಅಗತ್ಯವಾಗಿದೆ ಎಂದು ಸಿಸಿಐ ಅಭಿಪ್ರಾಯಪಟ್ಟಿದೆ.
ಸಾಮರ್ಥ್ಯ ವರ್ಗಾವಣೆಯು ಕಂಪನಿಗಳ ನಡುವಿನ ಅಕ್ರಮ ಒಪ್ಪಂದದಿಂದ ನಡೆದಿದೆ ಎನ್ನಲು ಯಾವುದೇ ಪುರಾವೆಗಳಿಲ್ಲ ಎಂದು ಸಿಸಿಐ ಸ್ಪಷ್ಟಪಡಿಸಿದೆ. ಈ ಮರುಹಂಚಿಕೆ ಪ್ರಕ್ರಿಯೆಯನ್ನು ಸರಿಯಾದ ಕ್ರಮದಲ್ಲಿ ನಡೆಸಲಾಗಿದೆ ಎಂಬ ಭಾರತೀಯ ಸೌರಶಕ್ತಿ ನಿಗಮದ ವಿವರಣೆಯನ್ನು ಆಯೋಗವು ಒಪ್ಪಿಕೊಂಡಿದೆ. ನವೀಕರಿಸಬಹುದಾದ ಇಂಧನ ಗುರಿಗಳನ್ನು ತಲುಪುವ ನಿಟ್ಟಿನಲ್ಲಿ, ಎಲ್ಲಾ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿದ ನಂತರವೇ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಸಿಸಿಐ ಗಮನಿಸಿದೆ.
ಲಂಚ ಅಥವಾ ಭ್ರಷ್ಟಾಚಾರದ ಆರೋಪಗಳು ನೇರವಾಗಿ ಮಾರುಕಟ್ಟೆಯ ಪ್ರಾಬಲ್ಯದ ದುರುಪಯೋಗದ ವ್ಯಾಪ್ತಿಗೆ ಬರುವುದಿಲ್ಲ. ಇವುಗಳನ್ನು ವಿಚಾರಣೆ ಮಾಡಲು ಇತರ ಭ್ರಷ್ಟಾಚಾರ ವಿರೋಧಿ ಕಾನೂನುಗಳಿವೆ. ಇಂತಹ ಚಟುವಟಿಕೆಗಳು ಮಾರುಕಟ್ಟೆಯ ಸ್ಪರ್ಧೆಯ ಮೇಲೆ ನೇರವಾದ ಪರಿಣಾಮವನ್ನು ಬೀರಿದಾಗ ಮಾತ್ರ ಸಿಸಿಐ ಮಧ್ಯಪ್ರವೇಶಿಸಲು ಸಾಧ್ಯ. ಕೇವಲ ಭ್ರಷ್ಟಾಚಾರದ ಆರೋಪಗಳಿದ್ದ ಮಾತ್ರಕ್ಕೆ ಒಂದು ಕಂಪನಿಯು ಮಾರುಕಟ್ಟೆಯಲ್ಲಿ ಇತರ ಸ್ಪರ್ಧಿಗಳನ್ನು ಹತ್ತಿಕ್ಕಿದೆ ಎಂದು ತೀರ್ಮಾನಿಸಲು ಸಾಧ್ಯವಿಲ್ಲ. ಮಾರುಕಟ್ಟೆಯಲ್ಲಿ ಮುಕ್ತ ಸ್ಪರ್ಧೆಯನ್ನು ಹೇಗೆ ಕೆಡಿಸಲಾಗಿದೆ ಎಂಬುದಕ್ಕೆ ನಿರ್ದಿಷ್ಟ ಪುರಾವೆಗಳಿರಬೇಕು ಎಂದು ಸಿಸಿಐ ಸ್ಪಷ್ಟಪಡಿಸಿದೆ.
ದೂರುದಾರರು ಸಲ್ಲಿಸಿದ ದೂರುಗಳಲ್ಲಿ ಅದಾನಿ ಸಮೂಹವು ಸ್ಪರ್ಧಾತ್ಮಕ ವಿರೋಧಿ ನಡವಳಿಕೆ ತೋರಿದೆ ಅಥವಾ ಮಾರುಕಟ್ಟೆ ಪ್ರಾಬಲ್ಯವನ್ನು ದುರುಪಯೋಗಪಡಿಸಿಕೊಂಡಿದೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ವಿಶ್ವಾಸಾರ್ಹ ಪುರಾವೆಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ. ಯಾವುದೇ ಮೇಲ್ನೋಟದ ಉಲ್ಲಂಘನೆ ಕಂಡುಬಂದಿಲ್ಲದ ಕಾರಣ, ಪ್ರಕರಣವನ್ನು ತಕ್ಷಣವೇ ಮುಕ್ತಾಯಗೊಳಿಸಲು ಆದೇಶಿಸಿದೆ. ಸ್ಪರ್ಧಾತ್ಮಕ ಕಾಯ್ದೆ, 2002ರ ಸೆಕ್ಷನ್ 26(2) ಅಡಿಯಲ್ಲಿ ಈ ದೂರನ್ನು ವಜಾಗೊಳಿಸಲಾಗಿದೆ.












Click it and Unblock the Notifications