Actress Namitha: ಮಧುರೈ ಮೀನಾಕ್ಷಿ ದೇಗುಲ ಪ್ರವೇಶ ವೇಳೆ 'ಹಿಂದೂ' ಎಂಬುದಕ್ಕೆ ಸಾಕ್ಷಿ ಕೇಳಿದರು: ನಟಿ ಆರೋಪ
ಮಧುರೈ, ಆಗಸ್ಟ್ 27: ಬಹುಭಾಷಾ ನಟಿ ನಮಿತಾ ಅವರು ತಮಿಳುನಾಡಿನ ಪ್ರಸಿದ್ಧ ಮಧುರೈ ಮೀನಾಕ್ಷಿ ದೇವಸ್ಥಾನಕ್ಕೆ ತೆರಳಿದಾಗ ಅಹಿತಕರ ಅನುಭವ ಎದುರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಪತಿಯೊಂದಿಗೆ ದೇವಸ್ಥಾನಕ್ಕೆ ತೆರಳಿದ್ದ ವೇಳೆ ನಟಿಯನ್ನು ಒಳಪ್ರವೇಶಿಸದಂತೆ ತಡೆದಿರುವ ಘಟನೆ ನಡೆದಿದೆ. ಈ ಕುರಿತು ಅವರು ಅಸಮಾಧಾನ ಮತ್ತು ಆಕ್ರೋಶ ಹೊರಹಾಕಿದ್ದಾರೆ.
ನಟಿ ನಮಿತಾ ಅವರು ಕ್ರೇಜಿಸ್ಟಾರ್ ರವಿಚಂದ್ರನ್ ಅವರೊಂದಿಗೆ 'ನೀಲಕಂಠ', ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ 'ಇಂದ್ರ' ಕನ್ನಡ ಸಿನಿಮಾ ಸೇರಿದಮತೆ ತಮಿಳು ಹಾಗೂ ತಲುಗಿನಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇವರು ಮಧುರೈ ಮೀನಾಕ್ಷಿ ದೇವಾಲಯಕ್ಕೆ ದರ್ಶನಕ್ಕೆಂದು ತೆರಳಿದಾಗ ನೀವು ಹಿಂದೂನಾ ಎಂದು ಪ್ರವೇಶದ್ವಾರದಲ್ಲಿ ಕುಳಿತಿದ್ದ ದೇಗುಲ ಆಡಳಿತ ಮಂಡಳಿಯ ಸಿಬ್ಬಂದಿ ನನ್ನನ್ನು ತಡೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ನಾನು ಹಿಂದೂ ಎಂದು ತಿಳಿಸಿದರೂ ಸಹ, ನೀವು ಹಿಂದೂ ಧರ್ಮದವರು ಎಂಬುದನ್ನು ಪ್ರಮಾಣ ಪತ್ರ ತೋರಿಸಿ, ಸಾಬೀತು ಪಡಿಸಿ ಎಂದೆಲ್ಲ ಸಿಬ್ಬಂದಿ ಕೇಳಿದ್ದಾರೆ.
ದೇವಸ್ಥಾನ ಸಿಬ್ಬಂದಿ ವಿರುದ್ಧ ನಟಿ ಅಸಮಾಧಾನ
ದೇವಸ್ಥಾನ ಒಳಪ್ರವೇಶಿಸಲು ಬಿಡದಂತೆ ತಡೆ ನೀಡಿದ್ದಾರೆ ಎಂದು ನಟಿ ತಮಗಾದ ಕಹಿ ಅನುಭವ ಕುರಿತು ಹೇಳಿಕೊಂಡಿದ್ದಾರೆ. ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಈವರೆಗೆ ನನ್ನ ಜೀವನದಲ್ಲಿ ಇಂಥಹ ಸನ್ನಿವೇಶ ಎದುರಿಸಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಕೊನೆಗೆ ನಾವು ಹಿಂದೂ ಎಂದು ಸ್ಪಷ್ಟನೆ ನೀಡಿದ ನಂತರವೇ ಹಣೆಗೆ ಕುಂಕುಮ ಹಚ್ಚಿಕೊಂಡ ನಂತರ ನಮ್ಮನ್ನು ದೇವಸ್ಥಾನ ಒಳ ಪ್ರವೇಶಿಸಲು ಅನುಮತಿ ನೀಡಿದರು ಎಂದು ನಟಿ ನಮಿತಾ ತಿಳಿಸಿದ್ದಾರೆ.
ನಟಿ ಆರೋಪಕ್ಕೆ ದೇವಸ್ಥಾನ ಮುಖ್ಯಸ್ಥರು ಹೇಳಿದ್ದೇನು?
ಆದರೆ ಈ ಕುರಿತು ಮಧುರೈ ಮೀನಾಕ್ಷಿ ದೇವಸ್ಥಾನದ ಆಡಳಿತ ಮಂಡಳಿಯು ನಟಿ ನಮಿತಾ ಅವರ ಆರೋಪವನ್ನು ನಿರಾಕರಿಸಿದೆ. ಅಲ್ಲದೇ ನಮೀತಾ ದೇವಾಲಯ ಪ್ರವೇಶಿಸುವಾಗ ಅವರು ಮಾಸ್ಕ್ ಧರಿಸಿದ್ದರು. ಹೀಗಾವಿ ಅವರನ್ನು ತಡೆದು ನೀವು ಹಿಂದೂವಾ? ಎಂದು ಕೇಳಲಾಗಿದೆ. ನಂತರ ಅವರಿಂದ ಸ್ಪಷ್ಟನೆ ಪಡೆದು, ಕುಂಕುಮ ಹಚ್ಚಿ ಅವರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಮುಖ್ಯಸ್ಥರೊಬ್ಬರು ತಿಳಿಸಿದ್ದಾರೆ.












Click it and Unblock the Notifications