ಬಾಲಿವುಡ್ ನಟ ಸುನಿಲ್ ಶೆಟ್ಟಿಗೆ ಪಿತೃವಿಯೋಗ
ದೀರ್ಘಕಾಲದಿಂದ ವಯೋಸಹಜ ದೈಹಿಕ ಸಮಸ್ಯೆಗಳಿಂದ ನರಳುತ್ತಿದ್ದ ಸುನಿಲ್ ಶೆಟ್ಟಿ ತಂದೆ ವೀರಪ್ಪ ಶೆಟ್ಟಿ; ಮುಂಬೈನ ಬ್ರೀಜ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನ
ಮುಂಬೈ, ಮಾರ್ಚ್ 1: ಬಾಲಿವುಡ್ ನಟ ಸುನಿಲ್ ಶೆಟ್ಟಿಯವರ ತಂದೆ ವೀರಪ್ಪ ಶೆಟ್ಟಿ (93) ಬುಧವಾರ ನಿಧನರಾಗಿದ್ದಾರೆ. ವಯೋ ಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಮುಂಬೈನಲ್ಲಿ ಇಹಲೋಕ ತ್ಯಜಿಸಿದರು.
ತುಂಬಾ ದಿನಗಳಿಂದಲೂ ಹಲವಾರು ದೈಹಿಕ ಸಮಸ್ಯೆಗಳಿಂದ ನರಳುತ್ತಿದ್ದ ಅವರನ್ನು ಮುಂಬೈನ ಬ್ರೀಜ್ ಕ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುಂಬಾ ದಿನಗಳಿಂದ ಅಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಅವರು, ಗುರುವಾರ ನಿಧನರಾಗಿದ್ದಾರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ವೀರಪ್ಪ ಅವರು, ತಮ್ಮ ಪತ್ನಿ, ಮಗ ಸುನಿಲ್ ಶೆಟ್ಟಿ ಹಾಗೂ ಮಗಳು ಸುಜಾತಾ ಅವರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಬುಧವಾರ ನಡೆಯಲಿದೆ ಎಂದು ಸುನಿಲ್ ಶೆಟ್ಟಿ ಕುಟುಂಬದ ಮೂಲಗಳು ಹೇಳಿವೆ.
2013ರಲ್ಲಿ ವೀರಪ್ಪ ಶೆಟ್ಟಿಯವರು ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಆಗ, ಅವರ ಚಿಕಿತ್ಸೆಗಾಗಿ ದಕ್ಷಿಣ ಮುಂಬೈನಲ್ಲಿರುವ ಅವರ ನಿವಾಸದಲ್ಲಿನ ವೀರಪ್ಪ ಅವರ ಕೊಠಡಿಯನ್ನು ಸಂಪೂರ್ಣವಾಗಿ ಐಸಿಯು ಆಗಿ ಪರಿವರ್ತಿಸಿದ್ದ ಸುನಿಲ್ ಶೆಟ್ಟಿ ತಂದೆಯ ಶುಶ್ರೂಷೆಯಲ್ಲಿ ತೊಡಗಿಸಿಕೊಂಡರು.

ಅಲ್ಲಿಂದ ಮೂರು ವರ್ಷಗಳ ಕಾಲ ತಂದೆಯ ಸೇವೆಯನ್ನು ಮಾಡಿದ ಅವರು, ಯಾವುದೇ ಚಿತ್ರಗಳನ್ನೂ ಒಪ್ಪಿಕೊಳ್ಳದೇ ಹಿಂದೆ ಸರಿದಿದ್ದರು. ಆಗೊಮ್ಮೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಅವರು, ತಮ್ಮ ತಂದೆ ತಮ್ಮ ಪಾಲಿಗೆ ಹೀರೋ ಆಗಿದ್ದು, ಅವರ ಸೇವೆಯೇ ತಮ್ಮ ಪರಮ ಗುರಿಯೆಂದು ತಿಳಿಸಿದ್ದರು.












Click it and Unblock the Notifications