ಬಿಜೆಪಿಗೆ ಶಾಕ್ ಕೊಡಲು ಮುಂದಾದ ಪವರ್‌ಸ್ಟಾರ್: ಎನ್‌ಡಿಎ ತೊರೆಯುವ ಸುಳಿವು ನೀಡಿದ ಪವನ್ ಕಲ್ಯಾಣ್- ಇನ್‌ಸೈಡ್ ರಿಪೋರ್ಟ್
ಹೈದರಾಬಾದ್, ಅಕ್ಟೋಬರ್ 05: ಆಂಧ್ರ ಪ್ರದೇಶದ ರಾಜಕಾರಣ ಸ್ಪೋಟಕ ತಿರುವುಗಳನ್ನು ಪಡೆದುಕೊಳ್ಳುತ್ತಿವೆ. ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಬಂಧನದ ನಂತರ ಖ್ಯಾತ ನಟ ಹಾಗೂ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಸಿಎಂ ಜಗನ್ ಮೋಹನ ರೆಡ್ಡಿ ವಿರುದ್ಧ ಕೆಂಡಕಾರುತ್ತಿದ್ದಾರೆ. ಈಗ ಚಂದ್ರಬಾಬು ನಾಯ್ಡು ಅವರ ಟಿಡಿಪಿಗೆ ಬೆಂಬಲ ನೀಡಲು ಎನ್‌ಡಿಎ ಮೈತ್ರಿಕೂಟವನ್ನು ತೊರೆಯಲು ಮುಂದಾಗಿದ್ದಾರೆ.
ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷವನ್ನು ಬೆಂಬಲಿಸುವ ಸಲುವಾಗಿ ಪವನ್ ಕಲ್ಯಾಣ್ ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ತೊರೆಯಲು ಮುಂದಾಗಬಹುದು ಎಂದು ಹೇಳಲಾಗುತ್ತಿದೆ. ಬುಧವಾರ ಸಂಜೆ ನಡೆದ ರ್ಯಾಲಿಯಲ್ಲಿ ಈ ಸುಳಿವನ್ನು ಸ್ವತಃ ಪವನ್ ಕಲ್ಯಾಣ್ ಅವರೇ ನೀಡಿದ್ದಾರೆ.

ಮುಂಬರುವ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಗೆ ಪವಣ್ ಕಲ್ಯಾಣ್ ಅವರು ಈಗಾಗಲೇ ತಯಾರಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾಲ್ಕನೇ ಹಂತದ ವಾರಾಹಿ ಯಾತ್ರೆಯ ಪ್ರಚಾರದ ಅಂಗವಾಗಿ ಕೃಷ್ಣಾ ಜಿಲ್ಲೆಯ ಪೆಡನಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ಅವರು ಈ ಘೋಷಣೆ ಮಾಡಿದ್ದಾರೆ.
'ಎನ್‌ಡಿಎ ಮೈತ್ರಿಕೂಟದಿಂದ ಹೊರಬರಲು ನನಗೆ ಕಷ್ಟವಾಗಿದೆ. ಆದರೆ, ಟಿಡಿಪಿಯೊಂದಿಗೆ ನೂರು ಪ್ರತಿಶತದಷ್ಟು ಮೈತ್ರಿ ಹೊಂದಲು ನಾನು ಬಯಸುತ್ತೇನೆ. ಟಿಡಿಪಿಯನ್ನು ದುರ್ಬಲವೆಂದು ಗ್ರಹಿಸಲಾಗುತ್ತಿದೆ. ಕಷ್ಟದ ಸಮಯದಲ್ಲಿ ನಾನು ಅದರ ಬೆಂಬಲಕ್ಕೆ ನಿಲ್ಲುತ್ತೇನೆ' ಎಂದು ಹೇಳಿದ್ದಾರೆ.
ನಾನು ರಾಜ್ಯದ ಜನರ ಬಗ್ಗೆ ಯೋಚಿಸಿದ್ದೇನೆ. ಅವರಿಗೆ ಟಿಡಿಪಿ ಮತ್ತು ಜನಸೇನೆಯ ಮೈತ್ರಿ ಬೇಕಿದೆ. ಟಿಡಿಕೆಗೆ ಅನುಭವವಿದೆ. ಜನಸೇನೆಗೆ ಹೋರಾಟದ ಮನೋಭಾವವಿದೆ. ಈ ಎರಡು ಸಂಯೋಜನೆಗಳು ಜಗನ್ ಅವರನ್ನು ರಾಜ್ಯದಿಂದ ಓಡಿಸಲು ಸಹಾಯ ಮಾಡುತ್ತವೆ ಎಂದು ಪವನ್ ಕಲ್ಯಾಣ್ ತಿಳಿಸಿದ್ದಾರೆ.
ನಾಲ್ಕನೇ ಹಂತದ ವಾರಾಹಿ ಯಾತ್ರೆಯು ಮಚಲಿಪಟ್ಟಣ, ಪೇಡನ ಮೂಲಕ ಸಾಗಿ ಅಕ್ಟೋಬರ್ 5 ರಂದು ಕೈಕಲೂರಿನಲ್ಲಿ ಕೊನೆಗೊಳ್ಳಲಿದೆ.
ಕೌಶಲ್ಯಾಭಿವೃದ್ಧಿ ನಿಗಮದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ರಾಜಮಂಡ್ರಿ ಕೇಂದ್ರ ಕಾರಾಗೃಹದಲ್ಲಿರುವ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾದ ನಂತರ ಪವನ್ ಕಲ್ಯಾಣ್ ಅವರು ಟಿಡಿಪಿಯೊಂದಿಗೆ ಮೈತ್ರಿಯನ್ನು ಘೋಷಿಸಿದರು.
ಚಂದ್ರಬಾಬು ನಾಯ್ಡು ಅವರು ಪ್ರಸ್ತುತ ಸುಪ್ರೀಂ ಕೋರ್ಟ್ ಸೇರಿದಂತೆ ದೇಶದ ವಿವಿಧ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಜಗನ್ ಅವರ ಪಕ್ಷ ಎನ್‌ಡಿಎ ಮೈತ್ರಿಕೂಟ ಸೇರ್ಪಡೆಗೊಳ್ಳುವ ಬಗ್ಗೆ ವರದಿಯಾಗಿದೆ. ಈಗಾಗಲೇ ಬಿಜೆಪಿ ಹೈಕಮಾಂಡ್ ಜೊತೆ ಜಗನ್ ಅವರು ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications