Delhi Election: ಸೋಲು ಸ್ವೀಕರಿಸಿದ್ದೇವೆ; ದೆಹಲಿ ಸೋಲಿಗೆ ರಾಹುಲ್ ಗಾಂಧಿ ಹೇಳಿದ್ದೇನು?
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದರೆ, ಎಎಪಿ ದಶಕಗಳ ಆಡಳಿತ ಅಂತ್ಯವಾಗಿದೆ. ಇನ್ನು ಕಾಂಗ್ರೆಸ್ ಇಲ್ಲಿ ಲೆಕ್ಕಕ್ಕೇ ಇಲ್ಲ ಎನ್ನುವಂತಾಗಿದೆ. ಕಾಂಗ್ರೆಸ್ ದೆಹಲಿಯಲ್ಲಿ ಒಂದೇ ಒಂದು ಸ್ಥಾನವನ್ನು ಕೂಡ ಗೆಲ್ಲಲು ಸಾಧ್ಯವಾಗಿಲ್ಲ, ದೇಶದ ಹಳೆಯ, ದೊಡ್ಡ ಪಕ್ಷವೊಂದಕ್ಕೆ ಮತದಾರ ಈ ರೀತಿ ಸೋಲುಣಿಸಿದ್ದಾನೆ.
ಹೀನಾಯ ಸೋಲಿನ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ದೆಹಲಿ ಜನ ನೀಡಿರುವ ಆದೇಶವನ್ನು ನಮ್ರವಾಗಿ ಸ್ವೀಕರಿಸುತ್ತೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮತದಾರರಿಗೆ ಧನ್ಯವಾದ ತಿಳಿಸಿದ ಅವರು, ಕಾಂಗ್ರೆಸ್ ದೆಹಲಿಯ ಪ್ರಗತಿ ಮತ್ತು ಇಲ್ಲಿನ ಜನರ ಹಕ್ಕುಗಳಿಗಾಗಿ ಹೋರಾಟ ಮುಂದುವರೆಸುತ್ತದೆ ಎಂದು ಹೇಳಿದರು.

ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಗಾಂಧಿ. ದೆಹಲಿ ಕಾಂಗ್ರೆಸ್ ಕಾರ್ಯಕರ್ತರ ಸಮರ್ಪಣೆ ಮತ್ತು ಮತದಾರರ ಬೆಂಬಲಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಬೆಲೆ ಏರಿಕೆ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರೆಯುತ್ತದೆ. ದೆಹಲಿಯ ಜನರ ಹಕ್ಕುಗಳಿಗೆ ನಾವು ಹೋರಾಟ ಮುಂದುವರೆಸುತ್ತೇವೆ ಎಂದಿದ್ದಾರೆ.
70 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದರೆ, ಎಎಪಿ 22 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಕಾಂಗ್ರೆಸ್ ಯಾವುದೇ ಸ್ಥಾನ ಗಳಿಸದೇ ಹೀನಾಯ ಸೋಲನುಭವಿಸಿತು. 2015, 2020 ಮತ್ತು 2025 ರಲ್ಲಿ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ ಒಂದೂ ಸ್ಥಾನ ಗೆಲ್ಲದೆ ಹ್ಯಾಟ್ರಿಕ್ ಸಾಧನೆ ಮಾಡಿದೆ.
ಮಿತ್ರ ಪಕ್ಷಗಳ ಕದನ, ಬಿಜೆಪಿಗೆ ಲಾಭ
ಕಳೆದ ಲೋಕಸಭಾ ಚುನಾವಣೆಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ಇಂಡಿಯಾ ಒಕ್ಕೂಟದ ಅಡಿ ಸ್ಪರ್ಧೆ ಮಾಡಿದ್ದವು, ಆದರೆ ಬಿಜೆಪಿ ದೆಹಲಿಯ ಎಲ್ಲಾ 7 ಸಂಸದ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇಷ್ಟಾದರೂ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಬುದ್ದಿ ಕಲಿಯಲಿಲ್ಲ, ಅದರಲ್ಲೂ ಎಎಪಿ ಅತಿಯಾದ ವಿಶ್ವಾಸದಿಂದಲೇ ಸ್ಪರ್ಧೆಗೆ ಮುಂದಾಗಿತ್ತು.
ಎಎಪಿ ಮತ್ತು ಕಾಂಗ್ರೆಸ್ ಪ್ರತ್ಯೇಕ ಅಭ್ಯರ್ಥಿಗಳನ್ನು ನಿಲ್ಲಿಸಿದ್ದು ಹಲವು ಕ್ಷೇತ್ರಗಳಲ್ಲಿ ಬಿಜೆಪಿ ವರದಾನಯಾಯಿತು. ಎಎಪಿಗೆ ಬರಬೇಕಿದ್ದ ಮತಗಳು ಕಾಂಗ್ರೆಸ್ ಪಾಲಾದವು, ಕಾಂಗ್ರೆಸ್ ಒಂದೇ ಒಂದು ಸ್ಥಾನದಲ್ಲಿ ಗೆಲ್ಲದೇ ಇದ್ದರೂ ಹಲವು ಕ್ಷೇತ್ರಗಳಲ್ಲಿ ಎಎಪಿ ಅಭ್ಯರ್ಥಿಗಳ ಗೆಲುವಿಗೆ ಅಡ್ಡಿಯಾಗಿರುವುದು ಮಾತ್ರ ನಿಜ.
ಗೆದ್ದೇ ಗೆಲ್ಲುತ್ತೇವೆ ಎನ್ನುವ ಅತಿಯಾದ ವಿಶ್ವಾಸದಲ್ಲಿದ್ದ ಅರವಿಂದ್ ಕೇಜ್ರಿವಾಲ್ ಅವರೇ ಬಿಜೆಪಿ ಅಭ್ಯರ್ಥಿ ಎದುರು ಸೋಲು ಕಂಡಿದ್ದಾರೆ. ಇನ್ನು ಕಾಂಗ್ರೆಸ್ ಇಲ್ಲಿ ಕಳೆದುಕೊಳ್ಳುವುದಕ್ಕೆ ಏನೂ ಇರಲಿಲ್ಲ. ಆದರೆ ಬಿಜೆಪಿಗೆ ಮಾತ್ರ ರಾಷ್ಟ್ರ ರಾಜಧಾನಿ ಸಿಕ್ಕಿದೆ.












Click it and Unblock the Notifications