ಕಣ್ಣೂರಿನಲ್ಲಿ ಮಚ್ಚಿನಿಂದ ಕೊಚ್ಚಿ ಎಬಿವಿಪಿ ಕಾರ್ಯಕರ್ತನ ಕೊಲೆ
ಕಣ್ಣೂರು, ಜನವರಿ 19: ಮುಸುಕುಧಾರಿ ಅಪರಿಚಿತ ವ್ಯಕ್ತಿಗಳು ಕಣ್ಣೂರಿನ ಪೆರವೂರ್ ನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ಕಾರ್ಯಕರ್ತನನ್ನು ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.
ಸಾವಿಗೀಡಾದ ವ್ಯಕ್ತಿಯನ್ನು ಪೆರವೂರ್ ಸರಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿ ಶ್ಯಾಮ್ ಪ್ರಸಾದ್ (24) ಎಂದು ಗುರುತಿಸಲಾಗಿದೆ.
ಶ್ಯಾಮ್ ಇಲ್ಲಿನ ಕನ್ನವಂ ನಿವಾಸಿಯಾಗಿದ್ದು, ಆತನ ಮೇಲೆ ಪೆರವೂರ್ ಪೊಲೀಸ್ ವ್ಯಾಪ್ತಿಯ ಕೊಮ್ಮೆರಿಯಲ್ಲಿ ದಾಳಿ ಮಾಡಿ ಕೊಲೆ ಮಾಡಲಾಗಿದೆ. ಸಂಜೆ 5 ಗಂಟೆ 30 ನಿಮಿಷ ಸುಮಾರಿಗೆ ಈ ಘಟನೆ ನಡೆದಿದೆ.

ಹತ್ಯೆಗೀಡಾದ ಶ್ಯಾಮ್ ಬೈಕ್ ನಲ್ಲಿ ತೆರಳುತ್ತಿದ್ದಾಗ ಮೂವರು ಮುಸುಕುಧಾರಿಗಳು ಕೊಮ್ಮೆರಿ ಮೇಕೆ ಫಾರ್ಮ್ ಬಳಿ ದಾಳಿ ನಡೆಸಿದ್ದಾರೆ.
ಈ ಸಂದರ್ಭ ಶ್ಯಾಮ್ ಜೀವ ಉಳಿಸಕೊಳ್ಳಲು ಓಡಿ ಹೋಗಿ ಹತ್ತಿರದ ಮನೆಯ ಕಂಪೌಂಡ್ ಪ್ರವೇಶಿಸಿದ್ದಾನೆ. ಆದರೆ ಮಾರಕಾಸ್ತ್ರಗಳಿಂದ ಆತನನ್ನು ಬೆನ್ನಟ್ಟಿದ ಮುಸುಕುಧಾರಿಗಳು ಮನೆಯ ವರಾಂಡದಲ್ಲೇ ಮಾರಕಾಸ್ತ್ರಗಳಿಂದ ಗಂಭೀರ ಹಲ್ಲೆ ನಡೆಸಿದ್ದಾರೆ. ತಕ್ಷಣ ಶ್ಯಾಮ್ ನನ್ನು ತಲಶೆರಿ ಸರಕಾರಿ ಆಸ್ಪತ್ರೆಯತ್ತ ಕೊಂಡೊಯ್ಯಲಾಯಿತಾದರೂ ದಾರಿ ಮಧ್ಯದಲ್ಲೇ ಅಸು ನೀಗಿದ್ದಾನೆ.












Click it and Unblock the Notifications