Haryana Assembly Election 2024: ನಮ್ಮ ಬೆಂಬಲವಿಲ್ಲದೆ ಸರ್ಕಾರ ರಚನೆ ಅಸಾಧ್ಯ ಎಂದ ಆಪ್
ಹರಿಯಾಣದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (ಎಎಪಿ) ಸೇರಿದಂತೆ ಹಲವು ಪಕ್ಷಗಳು ಭರ್ಜರಿ ಚುನಾವಣಾ ಪ್ರಚಾರದಲ್ಲಿ ತೊಡಗಿವೆ. ಆದರೆ, ಈ ಚುನಾವಣೆಯಲ್ಲಿ ಯಾವ ಪಕ್ಷ ಗೆಲುವು ಸಾಧಿಸಿದರೂ ನಮ್ಮ ಬೆಂಬಲವಿಲ್ಲದೆ ಹರಿಯಾಣದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರಲು ಚಾನ್ಸೇ ಇಲ್ಲ? ಎನ್ನುತ್ತಿದೆ ಆಮ್ ಆದ್ಮಿ ಪಕ್ಷ.
ಈ ಬಗ್ಗೆ ಮಾತನಾಡಿರುವ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್, ನಮ್ಮ ಪಕ್ಷದ ಬೆಂಬಲವಿಲ್ಲದೆ ಹರಿಯಾಣದಲ್ಲಿ ಮುಂದಿನ ಸರ್ಕಾರ ರಚನೆಯಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಎಎಪಿ ಬೆಂಬಲವಿಲ್ಲದೆ ಹರಿಯಾಣದಲ್ಲಿ ಮುಂದಿನ ಸರ್ಕಾರ ರಚನೆಯಾಗುವುದಿಲ್ಲ. ನಮ್ಮ ಪಕ್ಷವು ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯ ರಾಜಕೀಯದಲ್ಲಿ ನಂಬಿಕೆ ಹೊಂದಿದೆ. ನಾವು ರಾಜಕೀಯದಲ್ಲಿರುವುದೇ ಜನರಿಗಾಗಿ ಎಂದಿದ್ದಾರೆ.

ನಾವು ಅರವಿಂದ್ ಕೇಜ್ರಿವಾಲ್ ಅವರ 5 ಗ್ಯಾರಂಟಿಗಳನ್ನು ಜನರಿಗಾಗಿ ನೀಡಿದ್ದೇವೆ. ಹರಿಯಾಣದಲ್ಲಿ ಮುಂದೆ ನಮ್ಮದೇ ಸರ್ಕಾರ ರಚನೆಯಾಗಲಿದೆ. ಹರಿಯಾಣದ ಮನೆಮಗನಾದ ಅರವಿಂದ್ ಕೇಜ್ರಿವಾಲ್ ಅವರ ಕೈಯಲ್ಲೇ ಈ ರಾಜ್ಯದ ರಿಮೋಟ್ ಕಂಟ್ರೋಲ್ ಇದೆ. ನಾವು ನುಡಿದಂತೆ ಭರವಸೆಗಳನ್ನು ಈಡೇರಿಸುತ್ತೇವೆ. ಹರಿಯಾಣದಲ್ಲಿ ಬಿಜೆಪಿ ನಿರ್ಣಾಮವಾಗಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಹರಿಯಾಣ ಚುನಾವಣೆಯ ಬಗ್ಗೆ ಮಾತನಾಡಿರುವ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಕೂಡ ತಮ್ಮ ಪಕ್ಷದ ಬೆಂಬಲವಿಲ್ಲದೆ ಹರಿಯಾಣದಲ್ಲಿ ಮುಂದಿನ ಸರ್ಕಾರವನ್ನು ರಚಿಸಲು ಸಾಧ್ಯವಿಲ್ಲ ಎಂದಿದ್ದರು. ಎಎಪಿಗೆ ಎಷ್ಟು ಸೀಟುಗಳು ಬರುತ್ತಿವೆ ಎಂದು ಇಲ್ಲಿಗೆ ಬಂದ ಮೇಲೆ ನಾನು ಲೆಕ್ಕ ಹಾಕಿದ್ದೇನೆ ಎಂದಿದ್ದಾರೆ.

ಹರಿಯಾಣದಲ್ಲಿ ಎಎಪಿ ಬೆಂಬಲವಿಲ್ಲದೆ ಮುಂದಿನ ಸರ್ಕಾರ ರಚನೆ ಸಾಧ್ಯವಿಲ್ಲ ಎಂಬ ಲೆಕ್ಕಾಚಾರ ನಮಗೆ ಗೊತ್ತಿದೆ. ಇಡೀ ಹರಿಯಾಣದಲ್ಲೇ ನಾವು ಗೆಲ್ಲಲಿರುವ ಮೊದಲ ಕ್ಷೇತ್ರ ಜಗಧ್ರಿ ಎಂದು ಕೇಜ್ರಿವಾಲ್ ಅವರು ತಮ್ಮ ಪಕ್ಷದ ಅಭ್ಯರ್ಥಿ ಆದರ್ಶ್ ಪಾಲ್ ಪರ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದಾರೆ.
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ನೀವು (ಬಿಜೆಪಿ) ಎಲ್ಲಿಗೆ ಹೋದರೂ ಜನರು ಹಳ್ಳಿಗಳಿಗೆ, ಬೀದಿಗಳಿಗೆ ಪ್ರವೇಶಿಸಲು ನಿಮ್ಮನ್ನು ಬಿಡುವುದಿಲ್ಲ ಎಂದು ತಿಳಿದಿದೆ ಎಂದು ಕಾಲೆಳೆದಿದ್ದಾರೆ. ಸದ್ಯ ಹರಿಯಾಣದಲ್ಲಿ ಶಿಕ್ಷಣದ ಮಾಫಿಯಾ ಮಿತಿಮೀರಿದೆ. ಖಾಸಗಿ ಶಾಲೆಗಳು ದುಬಾರಿ ಶುಲ್ಕ ವಿಧಿಸಿ ಲೂಟಿ ಮಾಡುತ್ತಿವೆ. ದೆಹಲಿಯಲ್ಲಿ ಖಾಸಗಿ ಶಾಲೆಗಳ ದಂಧೆಗಳನ್ನು ನಿಲ್ಲಿಸಿದ್ದೇವೆ. ಅಲ್ಲಿರುವ ಸರ್ಕಾರಿ ಶಾಲೆಗಳ ಸ್ಥಿತಿಯನ್ನು ಸುಧಾರಿಸಿದ್ದೇವೆ. ಹರಿಯಾಣದಲ್ಲೂ ಇದನ್ನು ಎಎಪಿ ಸಾಕಾರಗೊಳಿಸಲಿದೆ ಎಂದು ಕೇಜ್ರಿವಾಲ್ ವಾಗ್ದಾನ ನೀಡಿದ್ದಾರೆ.
ಚುನಾವಣಾ ಪ್ರಕ್ರಿಯೆ ಆರಂಭಕ್ಕೂ ಮುನ್ನ ಕಾಂಗ್ರೆಸ್ ಜೊತೆಗೆ ಮೈತ್ರಿಯಾಗಲು ಆಮ್ ಆದ್ಮಿ ಪಕ್ಷ ಮುಂದಾಗಿತ್ತು. ಆದರೆ ಸೀಟು ಹಂಚಿಕೆ ವಿಚಾರವಾಗಿ ಮಾತುಕತೆ ವಿಫಲವಾಗಿದ್ದರಿಂದ ಮೈತ್ರಿ ಯಶಸ್ವಿಯಾಗಲಿಲ್ಲ. ಹಾಗಾಗಿ ಈ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಏಕಾಂಗಿಯಾಗಿ ಸ್ಪರ್ಧಿಸಲು ಕಣಕ್ಕಿಳಿದಿದೆ. ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 5ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 8ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications