Delhi Election: ಚುನಾವಣೋತ್ತರ ಸಮೀಕ್ಷೆಗಳನ್ನು ತಿರಸ್ಕರಿಸಿದ ಆಮ್ ಆದ್ಮಿ ಪಕ್ಷ
ಬಹು ನಿರೀಕ್ಷಿತ ದೆಹಲಿ ವಿಧಾನಸಭಾ ಚುನಾವಣೆಗೆ ಇಂದು (ಬುಧವಾರ) ಮತದಾನ ನಡೆದಿದೆ. ಮೂರನೇ ಬಾರಿ ಅಧಿಕಾರ ಹಿಡಿಯುವ ಕನಸು ಕಾಣುತ್ತಿದ್ದ ಆಮ್ ಆದ್ಮಿ ಪಕ್ಷಕ್ಕೆ ಚುನಾವಣೋತ್ತರ ಸಮೀಕ್ಷೆಗಳು ಆಘಾತ ನೀಡಿವೆ. ಈ ಬಾರಿ ದೆಹಲಿಯಲ್ಲಿ ಬಿಜೆಪಿ ಬಹುಮತ ಪಡೆದು ಸರ್ಕಾರ ರಚಿಸಲಿದೆ ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿದೆ. ಎಎಪಿ ಚುನಾವಣೋತ್ತರ ಸಮೀಕ್ಷೆಗಳನ್ನು ತಿರಸ್ಕರಿಸಿದೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಮತದಾನ ಬುಧವಾರ ಸಂಜೆ ಮುಕ್ತಾಯವಾಗಿದೆ. ಹೆಚ್ಚಿನ ನಿರ್ಗಮನ ಸಮೀಕ್ಷೆಗಳು ಆಮ್ ಆದ್ಮಿ ಪಕ್ಷ ಹಿನ್ನಡೆ ಅನುಭವಿಸಲಿದ್ದು, ಬಿಜೆಪಿ ಬಹುಮತ ಪಡೆಯಲಿದೆ ಎಂದು ಹೇಳಿವೆ. ಸಮೀಕ್ಷೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷ, ಸಮೀಕ್ಷೆ ಮಾಡುವವರು ಎಎಪಿ ಕಾರ್ಯಕ್ಷಮತೆಯನ್ನು ಕಡಿಮೆ ಅಂದಾಜು ಮಾಡಿದ್ದಾರೆ ಎಂದು ಹೇಳಿದೆ.

ಸಮೀಕ್ಷೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಎಪಿಯ ರಾಷ್ಟ್ರೀಯ ವಕ್ತಾರೆ ರೀನಾ ಗುಪ್ತಾ, ಸಮೀಕ್ಷೆಗಳು ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷದ ಸಾಮರ್ಥ್ಯವನ್ನು ಕಡುಮೆ ಅಂದಾಜು ಮಾಡಿವೆ. ಆದರೆ ನಿಜವಾದ ಫಲಿತಾಂಶ ಬಂದಾಗ ಈಗ ಕೊಟ್ಟಿರುವ ಅಂಕಿ ಅಂಶಗಳಿಗಿಂತ ಹೆಚ್ಚಿನ ಸೀಟುಗಳನ್ನು ಗಳಿಸುತ್ತದೆ ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಹಳೆಯ ಸಮೀಕ್ಷೆಗಳ ಉದಾಹರಣೆ
ಈ ಮೊದಲು ಆದ 2013, 2015 ಅಥವಾ 2020ರ ಚುನಾವಣೆ ಸಂದರ್ಭದಲ್ಲಿ ಸಮೀಕ್ಷೆಗಳು ನೀಡಿರುವ ಅಂಕಿ ಅಂಶಗಳಲ್ಲಿ ಎಎಪಿ ಕಡಿಮೆ ಸ್ಥಾನಗಳನ್ನ ಪಡೆಯುತ್ತದೆ ಎಂದೇ ಭವಿಷ್ಯ ನುಡಿಯಲಾಗಿತ್ತು, ಆದರೆ ನಿಜವಾದ ಫಲಿತಾಂಶ ಘೋಷಣೆಯಾದಾಗ ಅವರು ಹೇಳಿದ್ದಕ್ಕೂ ಎಎಪಿ ಪಡೆದಿದ್ದ ಸೀಟುಗಳ ಸಂಖ್ಯೆಗೂ ಭಾರಿ ವ್ಯತ್ಯಾಸವಿತ್ತು ಎಂದು ಗುಪ್ತಾ ತಿಳಿಸಿದ್ದಾರೆ.
ದೆಹಲಿಯ ಜನ ಹೆಚ್ಚಿನ ಸಂಖ್ಯೆಯಲ್ಲಿ ಎಎಪಿಗೆ ಮತ ಹಾಕಿದ್ದಾರೆ. ಈ ಬಾರಿ ಕೂಡ ಎಎಪಿ ಭರ್ಜರಿ ಗೆಲುವು ಸಾಧಿಸಲಿದೆ. ಕೇಜ್ರಿವಾಲ್ ನಾಲ್ಕನೇ ಬಾರಿ ದೆಹಲಿ ಮುಖ್ಯಮಂತ್ರಯಾಗಲಿದ್ದಾರೆ ಎಂದು ಅವರು ಹೇಳಿದರು.
ಮ್ಯಾಟ್ರಿಜ್ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಬಿಜೆಪಿ ನೇತೃತ್ವದ ಎನ್‌ಡಿಎ 35-40 ಸ್ಥಾನಗಳನ್ನು ಪಡೆಯಬಹುದು, ಎಎಪಿ 32 ರಿಂದ 37 ಸ್ಥಾನಗಳನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ. ಕಾಂಗ್ರೆಸ್ ಇಲ್ಲಿ ಲೆಕ್ಕಕ್ಕೇ ಇಲ್ಲ ಎನ್ನುವಂತ ಸ್ಥಿತಿಯಲ್ಲಿದೆ.
ಪೀಪಲ್ಸ್ ಪಲ್ಸ್ ಸಮೀಕ್ಷೆಯು ಎನ್‌ಡಿಎ 51 ರಿಂದ 60 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಮತ್ತು ಎಎಪಿ 10 ರಿಂದ 19 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಿದೆ. ಕಾಂಗ್ರೆಸ್ ಒಂದೂ ಸ್ಥಾನವನ್ನು ಗೆಲ್ಲುವುದಿಲ್ಲ ಎಂದು ತಿಳಿಸಿದೆ.
ಬಹುತೇಕ ಸಮೀಕ್ಷೆಗಳು ಬಿಜೆಪಿ ಪರವಾಗಿದ್ದು, ಎಎಪಿಗೆ ಹಿನ್ನಡೆಯಾಗಲಿದೆ ಎಂದು ಹೇಳಿವೆ. ಆದರೆ ಮತದಾರರ ಮನಸ್ಸಿನಲ್ಲಿ ಏನಿದೆ ಎನ್ನುವುದು ಫೆಬ್ರವರಿ 8ರಂದು ನಡೆಯಲಿರುವ ಮತ ಎಣಿಕೆಯಲ್ಲಿ ತಿಳಿಯಲಿದೆ.












Click it and Unblock the Notifications