Manish Sisodia: 17 ತಿಂಗಳ ಬಳಿಕ ಜೈಲಿನಿಂದ ಹೊರಬಂದ ಎಎಪಿ ನಾಯಕ ಮನೀಶ್ ಸಿಸೋಡಿಯಾ ಹೇಳಿದ್ದೇನು?
ಆಮ್ ಅದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ 17 ತಿಂಗಳ ಜೈಲುವಾಸದ ಬಳಿಕ ಶುಕ್ರವಾರ ಬಿಡುಗಡೆಯಾಗಿದ್ದು ಪಕ್ಷದ ನಾಯಕರು, ಕಾರ್ಯಕರ್ತರಲ್ಲಿ ಹರ್ಷ ತಂದಿದೆ. ಮದ್ಯ ನೀತಿ ಹಗರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಬಳಿಕ ಸಂಹೆ ತಿಹಾರ್ ಜೈಲಿನಿಂದ ಮನೀಶ್ ಸಿಸೋಡಿಯಾ ಅವರನ್ನು ಬಿಡುಗಡೆ ಮಾಡಲಾಗಿದೆ. ಜೈಲಿನ ಬಳಿಕ ಸಾವಿರಾರು ಕಾರ್ಯಕರ್ತರು ಹಾಜರಾಗಿ ನಾಯಕನನ್ನು ಸ್ವಾಗತಿಸಿದರು.
ಶಿಕ್ಷಣ ಖಾತೆ ಸೇರಿ ಹಲವು ಖಾತೆಗಳ ಜವಾಬ್ದಾರಿ ವಹಿಸಿಕೊಂಡಿದ್ದ ಮನೀಶ್ ಸಿಸೋಡಿಯಾ, ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಜೈಲು ಸೇರಿದ್ದರು. 17 ತಿಂಗಳ ಸೆರೆವಾಸದ ಬಳಿಕ ಬಿಡುಗಡೆಯಾಗಿದ್ದು, ಮಳೆಯ ನಡುವೆಯೂ ಸಂಭ್ರಮದ ಸ್ವಾಗತ ಸಿಕ್ಕಿದೆ. ಮಳೆಯ ನಡುವೆಯೂ ಮನೀಶ್ ಸಿಸೋಡಿಯಾ ಭಾಷಣ ಮಾಡಿದರು.

ಅಂಬೇಡ್ಕರ್ ಸ್ಮರಿಸಿದ ಸಿಸೋಡಿಯಾ
ಜೈಲಿನಿಂದ ಹೊರಬಂದ ಬಳಿಕ ಮಾತನಾಡಿದ ಮನೀಶ್ ಸಿಸೋಡಿಯಾ, "ಬೆಳಗ್ಗೆ ನ್ಯಾಯಾಲಯದ ಆದೇಶ ಬಂದಾಗಿನಿಂದ ನನ್ನ ದೇಹದ ಪ್ರತಿ ಕಣ ಕೂಡ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಋಣಿಯಾಗಿದೆ. ಅವರ ಋಣವನ್ನು ಹೇಗೆ ತೀರಿಸುತ್ತೇನೆ ಎಂದು ಗೊತ್ತಿಲ್ಲ" ಎಮದರು.
ಜನರ ಪ್ರೀತಿ, ದೇವರ ಆಶೀರ್ವಾದ ಮತ್ತು ಸತ್ಯದ ಶಕ್ತಿಯಿಂದಾಗಿ ನಾನು ಜೈಲಿನಿಂದ ಹೊರಬಂದಿದ್ದೇನೆ ಎಲ್ಲಕ್ಕಿಂತ ಮುಖ್ಯವಾಗಿ ಬಾಬಾಸಾಹೇಬರ ಕನಸು, ಯಾವುದೇ ಸರ್ವಾಧಿಕಾರಿ ಸರ್ಕಾರ ಅಧಿಕಾರಕ್ಕೆ ಬಂದರೆ ಮತ್ತು ಸರ್ವಾಧಿಕಾರಿ ಕಾನೂನುಗಳನ್ನು ರಚಿಸುವ ಮೂಲಕ ವಿರೋಧ ಪಕ್ಷದ ನಾಯಕರನ್ನು ಕಂಬಿ ಹಿಂದೆ ಹಾಕಿದರೆ, ಆಗ ಈ ದೇಶದ ಸಂವಿಧಾನ ಅವರನ್ನು ರಕ್ಷಿಸುತ್ತದೆ ಎಂದಿದ್ದರು, ಅದು ಈಗ ಸಾಬೀತಾಗಿದೆ ಎಂದರು.
ಕೇಜ್ರಿವಾಲ್ ಕೂಡ ಹೊರಬರುತ್ತಾರೆ
ಸಂವಿಧಾನದ ಶಕ್ತಿಯೊಂದಿಗೆ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಜೈಲಿನಿಂದ ಹೊರಬರುತ್ತಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದರು. ಜೈಲಿನಿಂದ ಹೊರಬಂದ ಬಳಿಕ ಅವರು ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ತೆರಳಿದರು.
ಮನೀಶ್ ಸಿಸೋಡಿಯಾ ಅವರ ಎಂಟನೇ ಮೇಲ್ಮನವಿಯನ್ನು ಪರಿಗಣಿಸಿ ಜಾಮೀನು ನೀಡಲಾಗಿದೆ. ಕಳೆದ ವರ್ಷ ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯನ್ನು ಭೇಟಿ ಮಾಡಲು ಅವಕಾಶ ನೀಡಲಾಗಿತ್ತು.
ಮಾರ್ಚ್‌ನಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಬಂಧಿಸಿದ್ದವು. ಜಾರಿ ನಿರ್ದೇಶನಾಲಯ ದಾಖಲಿಸಿದ ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಕ್ಕಿದ್ದರೂ ಸಿಬಿಐ ಪ್ರಕರಣದಲ್ಲಿ ಅವರಿಗೆ ಜಾಮೀನು ನಿರಾಕರಿಸಲಾಗಿದೆ.
ಮನೀಶ್ ಸಿಸೋಡಿಯಾ ಅವರಿಗೆ ಜಾಮೀನು ಸಿಕ್ಕಿರುವುದಕ್ಕೆ ಎಎಪಿ ಸಂತಸ ವ್ಯಕ್ತಪಡಿಸಿದ್ದು ಇದು ಸತ್ಯಕ್ಕೆ ಸಿಕ್ಕ ಗೆಲುವು ಎಂದು ಹೇಳಿದೆ. ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ, "ದೆಹಲಿ ಶಿಕ್ಷಣ ಕ್ರಾಂತಿಯ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ಜಾಮೀನು ಸಿಕ್ಕಿದ್ದರಿಂದ ಇಡೀ ದೇಶಕ್ಕೆ ಸಂತೋಷವಾಗಿದೆ" ಎಂದಿದ್ದಾರೆ.












Click it and Unblock the Notifications