ನರೇಂದ್ರ ಮೋದಿಗೆ ಕೇಜ್ರಿವಾಲ್ 16 ಪ್ರಶ್ನೆಗಳು
ಅಹ್ಮದಾಬಾದ್, ಮಾ.9: ಗುಜರಾತಿನ ಅಭಿವೃದ್ಧಿ ಬಗ್ಗೆ ಸ್ವಯಂ ಸಮೀಕ್ಷೆ ಪ್ರವಾಸ ಅಂತ್ಯಗೊಳಿಸಿರುವ ಜನ ಸಾಮಾನ್ಯರ ಪಕ್ಷದ ಮುಖಂಡ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ 16 ಪ್ರಶ್ನೆಗಳನ್ನು ಮುಂದಿಟ್ಟು ಅವರಿಂದ ಉತ್ತರವನ್ನು ಕೋರಿದ್ದಾರೆ.
ಅನಿಲ ಮತ್ತು ಸೋಲಾರ್ ವಿದ್ಯುತ್ ಬೆಲೆ ನಿಗದಿ, ರೈತರಿಂದ ಭೂಸ್ವಾಧೀನ, ಭ್ರಷ್ಟಾಚಾರ, ರಾಜ್ಯದಲ್ಲಿ ಹದಗೆಟ್ಟಿರುವ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳು ಸೇರಿದಂತೆ ಹಲವಾರು ಮಹತ್ವದ ಪ್ರಶ್ನೆಗಳನ್ನು ಅವರು ಎತ್ತಿದ್ದಾರೆ. ಈ 16 ಪ್ರಶ್ನೆಗಳು ಇಲ್ಲಿವೆ
ಅರವಿಂದ್ ಕೇಜ್ರಿವಾಲ್ ಅವರ ಈ ಪ್ರಶ್ನೆಗಳನ್ನು ಪ್ರಚಾರದ ಸ್ಟಂಟ್ ಎಂದು ಗುಜರಾತ್ ಸರಕಾರ ಬಣ್ಣಿಸಿದೆ. 'ಕೇಜ್ರಿವಾಲ್ ಅವರು ಮಾಡಿರುವುದು ಅತ್ಯಂತ ಕಳಪೆಯಾದ ಪ್ರಚಾರದ ಸ್ಟಂಟ್. ನಮ್ಮನ್ನು ಪ್ರಶ್ನೆ ಮಾಡಲು ಅವರು ಯಾರು? ನಾವು ಆರು ಕೋಟಿ ಗುಜರಾತ್ ಜನರಿಗೆ ಮತ್ತು 125 ಕೋಟಿ ಭಾರತೀಯರಿಗೆ ಮಾತ್ರ ಉತ್ತರಿಸಬೇಕಾಗಿದೆ' ಎಂದು ರಾಜ್ಯದ ಹಣಕಾಸು ಸಚಿವ ಮತ್ತು ಸರಕಾರದ ವಕ್ತಾರ ನಿತಿನ್ ಪಟೇಲ್ ಹೇಳಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸಿಗರು ಕಳೆದ 10 ವರ್ಷಗಳಿಂದ ಇಂತಹ ಆರೋಪ ಮಾಡುತ್ತಲೇ ಬಂದಿದ್ದಾರೆ. ಆದರೆ ರಾಜ್ಯದ ಜನರು ನಮ್ಮ ಮೇಲೆ ವಿಶ್ವಾಸ ಇರಿಸಿದ್ದಾರೆ. ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿ ವಿಫಲರಾದವರು. ನಮ್ಮ ಮುಖ್ಯಮಂತ್ರಿ ಯನ್ನು ಪ್ರಶ್ನಿಸುವ ಹಕ್ಕು ಅವರಿಗೆ ಇಲ್ಲ. ಇದು ಶೇ.35ರಷ್ಟು ಅಂಕ ಪಡೆದ ವಿದ್ಯಾರ್ಥಿಯೊಬ್ಬ ಶೇ.95ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಯ ಸಾಮರ್ಥ್ಯವನ್ನು ಪ್ರಶ್ನಿಸಿದ ಹಾಗಾಯಿತು' ಎಂದು ಅವರು ಲೇವಡಿ ಮಾಡಿದ್ದಾರೆ.
ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಎತ್ತಿರುವ 16 ಪ್ರಶ್ನೆಗಳಿಗೆ 'ಫೋರ್ಸ್ ನಮೋ' ವತಿಯಿಂದ ಉತ್ತರಗಳನ್ನು ಪ್ರಕಟಿಸಲಾಗಿದೆ. ಪ್ರಶ್ನೆಗಳು ಉತ್ತರಗಳನ್ನು ಇಲ್ಲಿ ಓದಿರಿ

ಮೋದಿಜೀ ಅನಿಲ ಬೆಲೆ ಏರಿಕೆ ಮಾಡುತ್ತೀರಾ?
1.ಯುಪಿಎ ಸರಕಾರ ಈಗಾಗಲೇ ಯೂನಿಟ್ ವೊಂದಕ್ಕೆ 8 ಡಾಲರ್‌ಗೆ ಬೆಲೆ ಏರಿಸಿರುವ ಕೆಜಿ ಬೇಸಿನ್ ನ ಅನಿಲ ಬೆಲೆಯನ್ನು ನೀವು ಪ್ರಧಾನಿಯಾದಲ್ಲಿ ಮತ್ತೆ ಏರಿಕೆ ಮಾಡುವಿರಾ?

ವಿದ್ಯುತ್, ಸೌರ ವಿದ್ಯುತ್ ಖರೀದಿ ಬಗ್ಗೆ
2. ಮಧ್ಯಪ್ರದೇಶ ಮತ್ತು ಕರ್ನಾಟಕ ಸರಕಾರ ಗಳು ಅನುಕ್ರಮವಾಗಿ ಯೂನಿಟ್ ವೊಂದಕ್ಕೆ 7.50 ರೂ. ಹಾಗೂ 5 ರೂ.ಯಂತೆ ಸೌರ ವಿದ್ಯುತ್‌ನ್ನು ಖರೀದಿಸುತ್ತಿರುವಾಗ ನಿಮ್ಮ ಸರಕಾರ ಯೂನಿಟ್‌ಗೆ 13 ರೂ.ನಂತೆ ಯಾಕೆ ವಿದ್ಯುತ್ ಖರೀದಿಸುತ್ತಿದೆ?

ಕೃಷಿ ಬೆಳವಣಿಗೆಯ ದರ ಶೇ.11ರಷ್ಟಿದೆ?
3. ಗುಜರಾತ್ ನಲ್ಲಿ ಕೃಷಿ ಬೆಳವಣಿಗೆಯ ದರ ಶೇ.11ರಷ್ಟಿದೆ ಎಂದು ನೀವು ಹೇಳಿಕೊಳ್ಳುತ್ತಿದ್ದೀರಿ. ಆದರೆ ರಾಜ್ಯ ಸರಕಾರದ ಅಂಕಿಅಂಶಗಳ ಪ್ರಕಾರ ವಾರ್ಷಿಕ ಕೃಷಿ ಬೆಳವಣಿಗೆಯ ದರ ಶೇ.1.18ರಷ್ಟಿದೆ. 2006-07ರಲ್ಲಿ 27,815 ಕೋಟಿ ರೂಪಾಯಿ ಇದ್ದ ಕೃಷಿ ವರಮಾನ 2012-13ರ ಹೊತ್ತಿಗೆ 25,908 ಕೋಟಿ ರೂಪಾಯಿಗೆ ಇಳಿದಿದೆ. ಯಾಕೆ?

ಸಣ್ಣ ಕೈಗಾರಿಕೆಗಳು ಮುಚ್ಚಿವೆ ?
4. ಗುಜರಾತ್ ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲಿ ಮೂರನೆ ಎರಡರಷ್ಟು ಸಣ್ಣ ಕೈಗಾರಿಕೆಗಳು ಮುಚ್ಚಿವೆ. ನಿಮ್ಮ ಸ್ವಂತ ಪಟ್ಟಣ ಮೆಹಸಾನಾದಲ್ಲಿ 187 ಘಟಕಗಳ ಪೈಕಿ 140 ಘಟಕಗಳು ಸ್ಥಗಿತಗೊಂಡಿವೆ. ದೊಡ್ಡ ಕೈಗಾರಿಕೋದ್ಯಮಿಗಳ ಕೈಯಲ್ಲೇ ಕೈಗಾರಿಕೆಗಳ ನಿಯಂತ್ರಣ ಇರಬೇಕೆಂದು ನೀವು ಬಯಸುವಿರಾ?

ಗುಜರಾತ್‌ನಲ್ಲಿ ಭ್ರಷ್ಟಾಚಾರ ನಿವಾರಣೆ
5. ಗುಜರಾತ್‌ನಲ್ಲಿ ಭ್ರಷ್ಟಾಚಾರ ನಿವಾರಣೆ ಮಾಡಿರುವುದಾಗಿ ನೀವು ಹೇಳಿಕೊಂಡಿದ್ದೀರಿ. ಕಂದಾಯ ಅಧಿಕಾರಿ ಯೊಬ್ಬರ ನೇಮಕಕ್ಕೆ 10 ಲಕ್ಷ ರೂಪಾಯಿ ಲಂಚ ಕೇಳುತ್ತಾರೆ ಎಂದು ಜನರು ಹೇಳಿ ಕೊಂಡಿದ್ದಾರೆ.

ಬಾಬು ಬೊಖಾರಿಯಾ, ಪುರುಷೋತ್ತಮ್ ಸೋಲಂಕಿ
6. ನಿಮ್ಮ ಸಚಿವ ಸಂಪುಟದಲ್ಲಿ ಬಾಬು ಬೊಖಾರಿಯಾ ಮತ್ತು ಪುರುಷೋತ್ತಮ್ ಸೋಲಂಕಿಯಂತಹ ವ್ಯಕ್ತಿಗಳು ಇದ್ದಾರೆ. ಯಾಕೆ? ಬೊಖಾರಿಯಾ ಗಣಿ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದವರು. ಸೋಲಂಕಿ 450 ಕೋಟಿ ರೂಪಾಯಿ ಮೊತ್ತದ ಮೀನುಗಾರಿಕೆಯ ಹಗರಣದಲ್ಲಿ ಆರೋಪಿಯಾಗಿದ್ದಾರೆ.

ಸಚಿವ ಸಂಪುಟದಲ್ಲಿ ಅಂಬಾನಿ ಕುಟುಂಬದ ಅಳಿಯ
7. ಅಂಬಾನಿ ಕುಟುಂಬದ ಅಳಿಯ ಎನಿಸಿಕೊಂಡಿರುವ ವ್ಯಕ್ತಿಯನ್ನು ನಿಮ್ಮ ಸಚಿವ ಸಂಪುಟದಲ್ಲಿ ಸೇರಿಸಿಕೊಂಡಿದ್ದೀರಿ. ಯಾಕೆ?

ಕಂದಾಯ ಅಧಿಕಾರಿಗಳ ಹುದ್ದೆ, ನಿರುದ್ಯೋಗ ಸಮಸ್ಯೆ
8. ರಾಜ್ಯದಲ್ಲಿ 1,500 ಕಂದಾಯ ಅಧಿಕಾರಿ ಗಳ ಹುದ್ದೆಗೆ 13 ಲಕ್ಷ ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೆ. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಇಲ್ಲ ಎಂದು ನೀವು ಹೇಗೆ ಹೇಳಿಕೊಳ್ಳುತ್ತೀರಿ?

ನಿಮ್ಮ ಸರಕಾರ ಅವರನ್ನು ಯಾಕೆ ಶೋಷಿಸುತ್ತಿದೆ?
9. ಯುವ ಪದವೀಧರರನ್ನು ಐದು ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ತಿಂಗಳಿಗೆ 5,300 ರೂ. ಸಂಬಳದಲ್ಲಿ ನೇಮಿಸಿಕೊಂಡು ನಿಮ್ಮ ಸರಕಾರ ಅವರನ್ನು ಯಾಕೆ ಶೋಷಿಸುತ್ತಿದೆ?

600 ವಿದ್ಯಾರ್ಥಿಗಳಿಗೆ ಕೇವಲ ಮೂವರು ಶಿಕ್ಷಕ
10. ರಾಜ್ಯದ ಕೆಲವು ಶಾಲೆಗಳಲ್ಲಿ 600 ವಿದ್ಯಾರ್ಥಿಗಳಿಗೆ ಕೇವಲ ಮೂವರು ಶಿಕ್ಷಕರಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ಆರೋಗ್ಯ ಸೇವೆಗಳು ದುಸ್ಥಿತಿಯಲ್ಲಿವೆ
11. ರಾಜ್ಯದಲ್ಲಿ ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳು ದುಸ್ಥಿತಿಯಲ್ಲಿವೆ. ಯಾಕೆ?

ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ
12. ರೈತರಿಗೆ ಸಹಾಯಧನ ಪಾವತಿ ಮತ್ತು ಬೆಂಬಲ ಬೆಲೆ ಪಾವತಿ ಕ್ರಮಗಳನ್ನು ರಾಜ್ಯ ಸರಕಾರ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ಅಂಬಾನಿ ಮತ್ತು ಅದಾನಿಗೆ ಜಮೀನು ನೀಡಲಾಗಿದೆ
13. ಸುಮಾರು ನಾಲ್ಕು ಲಕ್ಷ ರೈತರು ವಿದ್ಯುತ್ ಸಂಪರ್ಕಕ್ಕಾಗಿ ವರ್ಷಗಳಿಂದ ಕಾಯುತ್ತಿದ್ದಾರೆ. ಇಂತಹ ಪರಿಸ್ಥಿತಿ ಇದ್ದರೂ ದಿನದ 24 ಗಂಟೆಯೂ ವಿದ್ಯುತ್ ಲಭ್ಯವಿದೆ ಎಂದು ನೀವು ಯಾಕೆ ಹೇಳಿಕೊಳ್ಳುತ್ತಿದ್ದೀರಿ. ರೈತರ ಭೂಸ್ವಾಧೀನಕ್ಕೆ ನ್ಯಾಯೋಚಿತ ಬೆಲೆ ನೀಡಲಾಗುತ್ತಿಲ್ಲ ಎಂದು ದೂರಲಾಗುತ್ತಿದೆ. ಅದೇ ಹೊತ್ತಿಗೆ ಅಂಬಾನಿ ಮತ್ತು ಅದಾನಿ ಕಂಪೆನಿಗಳಿಗೆ ಚದರ ಮೀಟರ್‌ಗೆ ಒಂದು ರೂಪಾಯಿಯಲ್ಲಿ ಜಮೀನು ನೀಡಲಾಗಿದೆ. ಹೇಗೆ?

ಸರ್ದಾರ್ ಸರೋವರ್ ಅಣೆಕಟ್ಟಿನ ಎತ್ತರ
14. 2005ರಲ್ಲಿ ಸರ್ದಾರ್ ಸರೋವರ್ ಅಣೆಕಟ್ಟಿನ ಎತ್ತರವನ್ನು ಎತ್ತರಿಸಲಾಯಿತು. ಆದರೂ ಕಛ್‌ನ ಜನರಿಗೆ ನೀರು ಕೊಡಲಿಲ್ಲ. ಆದರೆ ಕೈಗಾರಿಕೆಗಳಿಗೆ ಯಥೇಚ್ಛ ನೀರು ಲಭಿಸುತ್ತಿದೆ. ಯಾಕೆ?

ಸಿಖ್ ರೈತರಿಗೆ ನೀಡಿರುವ ಆಶ್ವಾಸನೆ
15. ಕಛ್ ನಲ್ಲಿ ಜಮೀನು ಕಳೆದುಕೊಂಡಿರುವ ಸಿಖ್ ರೈತರಿಗೆ ನೀಡಿರುವ ಆಶ್ವಾಸನೆಯಂತೆ ಅವರ ವಿರುದ್ಧ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಇನ್ನೂ ಯಾಕೆ ವಾಪಸ್ ತೆಗೆದುಕೊಂಡಿಲ್ಲ?

ವಿಮಾನ ಪ್ರಯಾಣದ ಖರ್ಚುವೆಚ್ಚ
16. ನಿಮ್ಮ ಬಳಿ ಎಷ್ಟು ವಿಮಾನಗಳು ಮತ್ತು ಹೆಲಿಕಾಪ್ಟರ್ ಗಳಿವೆ? ಅದರ ಮಾಲಕರು ಯಾರು? ಅವುಗಳಿಗೆ ಬಾಡಿಗೆಯ ರೂಪದಲ್ಲಿ ನೀವೆಷ್ಟು ಪಾವತಿಸುತ್ತೀರಿ, ಇಲ್ಲವೇ ಬೇರೆಯ ವರು ಎಷ್ಟು ಪಾವತಿಸುತ್ತಾರೆ? ನಿಮ್ಮ ವಿಮಾನ ಪ್ರಯಾಣದ ಖರ್ಚುವೆಚ್ಚಗಳನ್ನು ಸಾರ್ವಜನಿಕವಾಗಿ ನೀವು ಯಾಕೆ ಪ್ರಕಟಿಸಬಾರದು?












Click it and Unblock the Notifications