8th Pay Commission: 8ನೇ ವೇತನ ಆಯೋಗ, ಕೇಂದ್ರ ಸರ್ಕಾರಿ ನೌಕರರಿಗೆ ನಿರಾಸೆ
ನವದೆಹಲಿ, ಮಾರ್ಚ್ 31: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 8ನೇ ವೇತನ ಆಯೋಗ ರಚನೆ ಮಾಡುವುದಾಗಿ ಹೇಳಿದೆ. ಆದರೆ ವೇತನ ಆಯೋಗದ ಅವಧಿಯನ್ನು ಇನ್ನೂ ಸಹ ತೀರ್ಮಾನ ಮಾಡಿಲ್ಲ. ಈ ಕುರಿತು ಏಪ್ರಿಲ್‌ನಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂಬ ಮಾಹಿತಿ ಇದೆ. ಕೇಂದ್ರ ಸರ್ಕಾರಿ ನೌಕರರು ವೇತನ, ಪಿಂಚಣಿ ಮತ್ತು ಭತ್ಯೆ ವೇತನ ಆಯೋಗದ ವರದಿ ಬಳಿಕ ಎಷ್ಟು ಪರಿಷ್ಕರಣೆ ಆಗಲಿದೆ ಎಂದು ಕಾಯುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರಿ ನೌಕರರಿಗೆ ನಿರಾಸೆ ಮೂಡಿಸುವ ಸುದ್ದಿಯೊಂದು ಇದ್ದು, 8ನೇ ವೇತನ ಆಯೋಗದ ಶಿಫಾರಸು 2027ರಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರ 8ನೇ ವೇತನ ಆಯೋಗವನ್ನು ಯಾವಾಗ ರಚನೆ ಮಾಡಲಿದೆ?, ವರದಿಯನ್ನು ಯಾವಾಗ ಸ್ವೀಕಾರ ಮಾಡಲಿದೆ?, ಆಯೋಗದ ಅವಧಿ ಏನು?, ಯಾವಾಗ ಸರ್ಕಾರ ವರದಿಯ ಶಿಫಾರಸು ಜಾರಿಗೊಳಿಸಲಿದೆ ಎಂದು ಚರ್ಚೆಗಳು ಸಾಗಿವೆ. ಜನವರಿ 1, 2026ರಿಂದಲೇ ಆಯೋಗದ ಅವಧಿ ಜಾರಿಗೆ ಬಂದರೂ ಸಹ ವೇತನ ಪರಿಷ್ಕರಣೆ 2027ಕ್ಕೆ ಸಿಗಲಿದೆ ಎಂಬುದು ಸದ್ಯದ ಸುದ್ದಿ.

ಸರ್ಕಾರ 8ನೇ ವೇತನ ಆಯೋಗ ರಚನೆ ಮಾಡಿದ ಬಳಿಕ 15 ರಿಂದ 18 ತಿಂಗಳಿನಲ್ಲಿ ಆಯೋಗ ವರದಿಯನ್ನು ತಯಾರು ಮಾಡಲಿದೆ. ಪೂರ್ಣ ವರದಿ ನೀಡುವ ಮೊದಲು ಆಯೋಗ ಮಧ್ಯಂತರ ವರದಿಯನ್ನು ಸಲ್ಲಿಕೆ ಮಾಡಬಹುದು. 2026ರ ಅಂತ್ಯದಲ್ಲಿ ಆಯೋಗ ಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡುವ ನಿರೀಕ್ಷೆ ಇದೆ.
ಆಯೋಗ ರಚನೆಗೆ ಅನುಮೋದನೆ: ಬಜೆಟ್ ಮಂಡನೆಗೂ ಮೊದಲು ಅಂದರೆ 2025ರ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಕೇಂದ್ರ ಸರ್ಕಾರದ ಎಲ್ಲ ನೌಕರರಿಗೂ 8ನೇ ವೇತನ ಆಯೋಗ ರಚನೆಗೆ ಅನುಮೋದನೆ ನೀಡಿತ್ತು.
ಕೇಂದ್ರ ಸರ್ಕಾರದ ಮಾಹಿತಿಯಂತೆ 1947 ರಿಂದ 7 ವೇತನ ಆಯೋಗಗಳನ್ನು ರಚಿಸಲಾಗಿದೆ, ಕೊನೆಯ ಆಯೋಗದ ವರದಿಯನ್ನು 2016ರಲ್ಲಿ ಅನುಷ್ಠಾನಕ್ಕೆ ತರಲಾಗಿತ್ತು. ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗ ರಚನೆ ಸಂಪ್ರದಾಯ ಪಾಲನೆ ಮಾಡಿದರೆ 2026ರ ಜನವರಿಯಿಂದ 8ನೇ ವೇತನ ಆಯೋಗದ ಅವಧಿ ಪ್ರಾರಂಭವಾಗಬೇಕಿದೆ.
2026-27ನೇ ಸಾಲಿನ ಬಜೆಟ್‌ನಲ್ಲಿ 8ನೇ ವೇತನ ಆಯೋಗದ ವರದಿ ಜಾರಿಗೆ ಅನುದಾನವನ್ನು ಮೀಸಲಿಟ್ಟು 2027ರಲ್ಲಿ ಆಯೋಗದ ವರದಿಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂಬ ಮಾಹಿತಿ ಇದೆ. ಆಗ ಎಷ್ಟು ತಿಂಗಳ ಮುಂಚಿತ ವೇತನ, ಭತ್ಯೆ, ಪಿಂಚಣಿ ಏರಿಕೆಯನ್ನು ಸರ್ಕಾರ ಜಾರಿಗೊಳಿಸಲಿದೆ? ಎಂಬುದು ಪ್ರಶ್ನೆಯಾಗಿದೆ.
ಮಾಹಿತಿಯಂತೆ ಏಪ್ರಿಲ್‌ನಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ 8ನೇ ವೇತನ ಆಯೋಗದ ಅವಧಿ, ನಿಬಂಧನೆಗಳನ್ನು ಅನುಮೋದಿಸಲಾಗುತ್ತದೆ. ಇದು ಸರ್ಕಾರ ಆಯೋಗವನ್ನು ರಚಿಸುವ ಅಂತಿಮ ಪ್ರಕ್ರಿಯೆಯಾಗಿದೆ. ಸಂಪುಟದಿಂದ ಅನುಮೋದನೆ ಸಿಕ್ಕ ಬಳಿಕ ಅಧಿಕೃತ ಅಧಿಸೂಚನೆ ಹೊರಡಿಸಲಾಗುತ್ತದೆ. ಆಯೋಗವು 2025ರ ಏಪ್ರಿಲ್‌ನಿಂದ ತನ್ನ ಕೆಲಸವನ್ನು ಪ್ರಾರಂಭಿಸಲಿದೆ.
ಜನವರಿ 16, 2025ರ ಸಚಿವ ಸಂಪುಟ ಸಭೆಯಲ್ಲಿ 8ನೇ ವೇತನ ಆಯೋಗ ರಚನೆಯ ಘೋಷಣೆ ಮಾಡಲಾಗಿದೆ. ಆದರೆ ಆಯೋಗದ ಉಲ್ಲೇಖಿತ ನಿಯಮಗಳ (ಟಿಓಆರ್) ಇನ್ನೂ ಅಂತಿಮಗೊಳಿಸಿಲ್ಲ. ವಿವಿಧ ಕಾರ್ಮಿಕ ಸಂಘಟನೆಗಳು ಈಗಾಗಲೇ ಹಣಕಾಸು ಸಚಿವಾಲದ ಕಾರ್ಯದರ್ಶಿಗಳನ್ನು ಭೇಟಿಯಾಗಿ ಟಿಓರ್ ಕುರಿತು ಬೇಗನೇ ತೀರ್ಮಾನ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿವೆ.
ಲೋಕಸಭೆ ಅಧಿವೇಶನದಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್, "ಕೇಂದ್ರ ಸರ್ಕಾರ 8ನೇ ವೇತನ ಆಯೋಗ ರಚನೆ ಮಾಡಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ" ಎಂದು ಹೇಳಿದ್ದರು.












Click it and Unblock the Notifications