ಸಂಸತ್‌ನ 83 ಉದ್ಯೋಗಿಗಳಲ್ಲಿ ಕೊರೊನಾ ವೈರಸ್ ಪಾಸಿಟಿವ್
ನವದೆಹಲಿ, ಸೆಪ್ಟೆಂಬರ್ 25: ಪ್ರಸಕ್ತ ಸಾಲಿನ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆ ಕಾರ್ಯಾಲಯದ 1500 ಉದ್ಯೋಗಿಗಳ ಪೈಕಿ 83 ಮಂದಿ ಉದ್ಯೋಗಿಗಳಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಾಣಿಸಿಕೊಂಡಿದೆ.
ಸೆ. 7ರಂದು ಸಂಸತ್ ಆವರಣದಲ್ಲಿ ಪರೀಕ್ಷೆ ಶಿಬಿರ ಆಯೋಜಿಸಲಾಗಿತ್ತು. ಇದಾಗಿ ಒಂದು ವಾರದ ಬಳಿಕ ಸೆ. 14ರಂದು ಸಂಸತ್ ಅಧಿವೇಶನ ಪ್ರಾರಂಭವಾಗಿತ್ತು. ಸೆ. 7ಕ್ಕೂ ಮುನ್ನ ರಾಜ್ಯಸಭೆಯ 25 ಉದ್ಯೋಗಿಗಳಲ್ಲಿ ಮಾತ್ರ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿತ್ತು. ಆದರೆ ಸಂಸತ್ ಅಧಿವೇಶನ ಶುರುವಾದ ಬಳಿಕ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಎಂಟೇ ದಿನದಲ್ಲಿ ಏರಿಕೆಯಾಗಿದೆ.
ಅಧಿವೇಶನದ ಸಂದರ್ಭದಲ್ಲಿ ಸಂಸತ್ ಭವನದ ಒಳಗೆ ಬರುವ ಮಾಧ್ಯಮದ ಪ್ರತಿನಿಧಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಕೋವಿಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿತ್ತು.

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಮತ್ತು ಇತರೆ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು, ಕೊರೊನಾ ಸೋಂಕಿಗೆ ಒಳಗಾದ ಎಲ್ಲ 83 ಉದ್ಯೋಗಿಗಳಿಗೆ ಎಲ್ಲ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಆಡಳಿತ ವಿಭಾಗಕ್ಕೆ ಸೂಚನೆ ನೀಡಿದರು.
ಸಂಸತ್ ಅಧಿವೇಶನ ಪ್ರಾರಂಭವಾದ ಬಳಿಕ ರಾಜ್ಯಸಭೆ ಹಾಗೂ ಲೋಕಸಭೆಯ 30ಕ್ಕೂ ಹೆಚ್ಚು ಸಂಸದರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿದೆ.












Click it and Unblock the Notifications