ಪಠ್ಯಪುಸ್ತಕದ ಬದಲು ಉಗುರು ಕತ್ತರಿಸಿ ಪಾಠ ಶುರು ಮಾಡಿದ 82 ವರ್ಷದ ಶಿಕ್ಷಕಿ: ಶಾಲೆಯ ಮುಖವೇ ನೋಡದ ಮಕ್ಕಳಿಗೆ ಒಲಿದ ಶಿಕ್ಷಣ

ಶಿಕ್ಷಣಯೆನ್ನುವುದು ಪ್ರತಿಯೊಬ್ಬ ಮಗುವಿನ ಜನ್ಮಸಿದ್ಧ ಹಕ್ಕು. ಆದರೆ ಇಂದಿಗೂ ಎಷ್ಟೋ ಹಳ್ಳಿಗಳಲ್ಲಿ ಶಾಲೆಯ ಮುಖವನ್ನೇ ನೋಡದ ಅದೆಷ್ಟೋ ಮಕ್ಕಳಿದ್ದಾರೆ. ತಮಿಳುನಾಡಿನ ಕೊಡೈಕೆನಾಲ್ ಬಳಿಯ ಕೊಂಬೈ-ಪೆರುಂಗಾಡು ಎಂಬ ಬುಡಕಟ್ಟು ಗ್ರಾಮದ ಮಕ್ಕಳ ಕಥೆಯೂ ಇದೇ ಆಗಿತ್ತು.

ಕೃಷಿ ಕಾರ್ಮಿಕರಾಗಿ ತಮ್ಮ ತಂದೆ ತಾಯಿ ಜೊತೆಗೆ ದುಡಿಯುವುದೇ ತಮ್ಮ ಭವಿಷ್ಯ ಎಂದುಕೊಂಡಿದ್ದ ಈ ಮಕ್ಕಳಿಗೆ ಅಕ್ಷರ ಜ್ಞಾನದ ಜೊತೆಗೆ ಬದುಕುವ ದಾರಿ ತೋರಿಸಿಕೊಟ್ಟವರು ಈ 82 ವರ್ಷದ ಶಿಕ್ಷಕಿ ಪದ್ಮಿನಿ. ಪಠ್ಯಪುಸ್ತಕಗಳಿಗಿಂತ ಮೊದಲು ಉಗುರು ಕತ್ತರಿಸುವ ಮೂಲಕ ಪಾಠ ಶುರುಮಾಡಿದ ಪದ್ಮಿನಿ ಟೀಚರ್ ಅವರ ವಿಭಿನ್ನ ಪ್ರಯತ್ನದ ಫಲವಾಗಿ ಇಂದು 50ಕ್ಕೂ ಹೆಚ್ಚು ಮಕ್ಕಳು ಅಕ್ಷರ ಕಲಿಯುತ್ತಿದ್ದಾರೆ.

82 Year Old Teacher Transforms Tamil Nadu Tribal Village Education Starting With Just Nail Cutters

ಕೊಡೈಕೆನಾಲ್ ಕೊಂಬೈ ಗ್ರಾಮದಲ್ಲಿ ಬದಲಾವಣೆಯ ಗಾಳಿ

ಕೊಡೈಕೆನಾಲ್‌ನಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿರುವ ಕೊಂಬೈ-ಪೆರುಂಗಾಡು ಎಂಬುದು 50-60 ಕುಟುಂಬಗಳು ವಾಸಿಸುವ ಸಣ್ಣ ಬುಡಕಟ್ಟು ಗ್ರಾಮ. ಇಲ್ಲಿನ ಜನ ಜೇನುತುಪ್ಪ ಸಂಗ್ರಹಿಸುವುದು, ಹತ್ತಿ ಕೀಳುವುದು ಮತ್ತು ಕೃಷಿ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಾರೆ. ಈ ಗ್ರಾಮದ ಮಕ್ಕಳು ಕೂಡ ಪೋಷಕರೊಟ್ಟಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರೇ ವಿನಃ ಶಾಲೆಗೆ ಹೋಗಿರಲಿಲ್ಲ.

ದಿನಕ್ಕೆ 100-200 ರೂಪಾಯಿ ದುಡಿಯುವ ಮಕ್ಕಳು ತಮ್ಮ ಕುಟುಂಬಕ್ಕೆ ಆಸರೆಯಾಗಿದ್ದರು. ಈ ಮಕ್ಕಳಿಗಾಗಿ 'ಸತ್ಯ ಸುರಭಿ' ಶಾಲೆಯ ಸಂಸ್ಥಾಪಕಿ ಪದ್ಮಿನಿ ಅವರು 2024ರಲ್ಲಿ ಶನಿವಾರದ ವಿಶೇಷ ತರಗತಿಗಳನ್ನ ಆರಂಭಿಸಿದರು.

ಅಕ್ಷರಕ್ಕೂ ಮುನ್ನ ಸ್ವಚ್ಛತೆಯ ಪಾಠ

ಬುಡಕಟ್ಟು ಗ್ರಾಮದ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾದಾಗ ಶಿಕ್ಷಕರಿಗೆ ಎದುರಾದ ಮೊದಲ ಸವಾಲು ಮಕ್ಕಳ ಸ್ವಚ್ಛತೆ. ಸ್ನಾನ ಮಾಡದೆ, ಹರಿದ ಬಟ್ಟೆಗಳನ್ನ ಧರಿಸಿಕೊಂಡು ಬರುತ್ತಿದ್ದ ಮಕ್ಕಳಿಗೆ ಅಕ್ಷರಗಳಿಗಿಂತ ಮೊದಲು ನೈರ್ಮಲ್ಯದ ಪಾಠ ಅಗತ್ಯವಿತ್ತು. ಹೀಗಾಗಿ ಶಿಕ್ಷಕರು ಪುಸ್ತಕಗಳ ಬದಲು ನೈಲ್ ಕಟ್ಟರ್ ಹಿಡಿದು ಗ್ರಾಮಕ್ಕೆ ಹೋದರು.

ಮಕ್ಕಳಿಗೆ ಉಗುರು ಕತ್ತರಿಸಿ, ಕೈ ತೊಳೆಯುವುದು ಹೇಗೆ, ಶುಚಿಯಾಗಿ ಬಟ್ಟೆ ಧರಿಸುವುದು ಹೇಗೆ ಎಂಬ ಸ್ವಚ್ಛತೆಯ ಮಹತ್ವವನ್ನು ಮೊದಲು ಕಲಿಸಿಕೊಟ್ಟರು. ಸ್ವಚ್ಛತೆಯ ಜೊತೆಗೆ ಮೊಟ್ಟೆ, ಹಾಲು ಸೇರಿದಂತೆ ಪೌಷ್ಟಿಕ ಆಹಾರವನ್ನು ನೀಡುವ ಮೂಲಕ ಮಕ್ಕಳನ್ನ ಆಕರ್ಷಿಸಿದರು.

ಮನೆ ಬಾಗಿಲಿಗೆ ಬಂದ ಸ್ಕೂಲ್ ಆನ್ ವೀಲ್ಸ್

ಗ್ರಾಮದ ಮಕ್ಕಳಿಗೆ ಪದ್ಮಿನಿ ಅವರು ತಮ್ಮ ಸತ್ಯ ಸುರಭಿ ಶಾಲೆಗೆ ಬರುವಂತೆ ಆಹ್ವಾನ ನೀಡಿದರು. ಆದರೆ ಶಾಲೆಗೆ ಬರಲು ಪ್ರತಿ ತಿಂಗಳು 3000 ರೂಪಾಯಿ ಸಾರಿಗೆ ವೆಚ್ಚ ಭರಿಸಲು ಕೂಲಿ ಮಾಡುವ ಪೋಷಕರಿಗೆ ಸಾಧ್ಯವಿರಲಿಲ್ಲ. ಈ ಸಮಸ್ಯೆಯನ್ನ ಅರಿತ ಪದ್ಮಿನಿ ಅವರು ಸ್ಕೂಲ್ ಆನ್ ವೀಲ್ಸ್ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಶಾಲೆಯನ್ನೇ ಮಕ್ಕಳಿದ್ದಲ್ಲಿಗೆ ತೆಗೆದುಕೊಂಡು ಹೋದರು.

ಪ್ರತಿ ಶನಿವಾರ ಶಿಕ್ಷಕರು ಪಾಳಿಯ ಆಧಾರದ ಮೇಲೆ ಗ್ರಾಮಕ್ಕೆ ತೆರಳಿ ಪಾಠ ಮಾಡಲಾರಂಭಿಸಿದರು. ಕೇವಲ ಬಾಯಿಪಾಠ ಮಾಡಿಸದೆ, ಪ್ರಾಯೋಗಿಕವಾಗಿ ವಿಜ್ಞಾನ, ಗಣಿತ, ಭೂಗೋಳವನ್ನ ಒಟ್ಟಿಗೆ ಸೇರಿಸಿ ಕಲಿಸುವ ಸಮಗ್ರ ಕಲಿಕೆ ವಿಧಾನವನ್ನ ಅಳವಡಿಸಿಕೊಂಡರು.

ಬುಡಕಟ್ಟು ಮಕ್ಕಳ ಶಿಕ್ಷಣದಲ್ಲಿ ಹೊಸ ಕ್ರಾಂತಿ

ಕಳೆದ ಎರಡು ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಇಂದು ಕೊಂಬೈ ಗ್ರಾಮದ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿದೆ. ಆರಂಭದಲ್ಲಿ 25ರಷ್ಟಿದ್ದ ಮಕ್ಕಳ ಸಂಖ್ಯೆ ಇದೀಗ 50ರ ಗಡಿ ದಾಟಿದೆ. ಇದರಲ್ಲಿ 20-25 ಮಕ್ಕಳು ಈಗ ಪೂರ್ಣಾವಧಿ ವಿದ್ಯಾರ್ಥಿಗಳಾಗಿ ಪ್ರತಿದಿನ ಶಾಲೆಗೆ ಹೋಗುತ್ತಿದ್ದಾರೆ.

ಅಚ್ಚರಿಯ ವಿಚಾರವೆಂದರೆ, ಕೇವಲ ಮಕ್ಕಳಷ್ಟೇ ಅಲ್ಲದೆ ಪೋಷಕರು ಕೂಡ ಈ ತರಗತಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 80 ವರ್ಷದ ವೃದ್ಧರೊಬ್ಬರು ತಮಿಳಿನಲ್ಲಿ ತಮ್ಮ ಹೆಸರನ್ನು ಬರೆಯಲು ಕಲಿತರೆ, ಕೂಲಿ ಕೆಲಸ ಮಾಡುವ ತಾಯಿ ಮಹಾಲಕ್ಷ್ಮಿ ಕೂಡ ಮಕ್ಕಳ ಜೊತೆ ಕುಳಿತು ಮಗ್ಗಿ ಕಲಿಯುತ್ತಿದ್ದಾರೆ.

ಒಟ್ಟಿನಲ್ಲಿ 82 ವರ್ಷದ ಇಳಿವಯಸ್ಸಿನಲ್ಲೂ ಪದ್ಮಿನಿ ಟೀಚರ್ ಅವರ ಸೇವಾ ಮನೋಭಾವ ಮತ್ತು ಶಿಕ್ಷಣದ ಮೇಲಿನ ಒಲವು ಒಂದು ಇಡೀ ಬುಡಕಟ್ಟು ಸಮುದಾಯದ ಭವಿಷ್ಯವನ್ನೇ ಉಜ್ವಲಗೊಳಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+