Tamil Nadu: ತಮಿಳುನಾಡಿನ ಕೃಷ್ಣಗಿರಿ ಪಟಾಕಿ ಗೋದಾಮಿನಲ್ಲಿ ಭೀಕರ ಸ್ಫೋಟ- 8 ಮಂದಿ ಸಾವು, ಹಲವರಿಗೆ ಗಾಯ
ಕೃಷ್ಣಗಿರಿ, ಜುಲೈ 29: ತಮಿಳುನಾಡಿನ ಕೃಷ್ಣಗಿರಿಯಲ್ಲಿರುವ ಪಟಾಕಿ ಗೋದಾಮಿನಲ್ಲಿ ಸೋಮವಾರ ಬೆಳಗ್ಗೆ ಭೀಕರ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು, ಹದಿಮೂರು ಜನರು ಗಾಯಗೊಂಡಿರುವುದು ದೃಢಪಟ್ಟಿದೆ.
ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ ಗಾಯಾಳುಗಳನ್ನು ರಕ್ಷಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಂದಾಯ ಇಲಾಖೆಯ ಮೂಲಗಳ ಪ್ರಕಾರ, ಸ್ಫೋಟಗೊಂಡಿರುವ ಪಟಾಕಿ ಗೋದಾಮು ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ 46 ವರ್ಷದ ರವಿ ಎಂಬುವವರಿಗೆ ಸೇರಿದೆ. ಪಟಾಕಿ ತಯಾರಿಕೆಯಲ್ಲಿ ಬಳಸಲಾಗುವ ಬಾಷ್ಪಶೀಲ ರಾಸಾಯನಿಕಗಳನ್ನು ಈ ಗೋದಾಮಿನಲ್ಲಿ ಸಂಗ್ರಹಿಸಲಾಗಿತ್ತು.
ಗೋದಾಮಿನಲ್ಲಿ ನಡೆದಿರುವ ಸ್ಫೋಟಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದಿಲ್ಲ.
ಮೃತರನ್ನು ರವಿ (46), ರುತೀಶ್ (21), ರಿತಿಗಾ (19), ಇಬ್ರಾಹಿಂ ಕೈಯುಲ್ಲಾ (21) ಮತ್ತು ಇಮ್ರಾನ್ (18) ಎಂದು ಗುರುತಿಸಲಾಗಿದೆ. ಇನ್ನೂ ಮೂವರ ಗುರುತು ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಮೂಲಗಳು, ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ಬೆಳಗ್ಗೆ 10 ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿ ಪರಿಹಾರ ಕ್ರಮಗಳನ್ನು ಆರಂಭಿಸಿದ್ದಾರೆ. ಬೆಂಕಿ ನಂದಿಸಲು ನಾಲ್ಕು ಅಗ್ನಿಶಾಮಕ ವಾಹನಗಳನ್ನು ತರಲಾಯಿತು ಎಂದು ಹೇಳಿವೆ.
'ಸ್ಫೋಟವು ತೀವ್ರ ಸ್ವರೂಪದ್ದಾಗಿದೆ. ನಾವು ಅವಶೇಷಗಳನ್ನು ತೆರವುಗೊಳಿಸಲು 5 ಮೂವರ್‌ಗಳನ್ನು ಬಳಸಬೇಕಾಗಿ ಬಂದಿತು. ಇದುವರೆಗೆ 13 ಜನರನ್ನು ಚಿಕಿತ್ಸೆಗಾಗಿ ಕೃಷ್ಣಗಿರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಮುಂದಿನ ಕ್ರಮ ಕೈಗೊಳ್ಳಲಾಗುವುದು. ವಿವರಗಳನ್ನು ನಂತರ ಬಹಿರಂಗಪಡಿಸಲಾಗುವುದು' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಸೂಚನೆ ಪಡೆದ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮುಖ್ಯಮಂತ್ರಿಗಳು ಮೃತರ ಕುಟುಂಬಕ್ಕೆ ತಲಾ 3 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದರು. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜನರಿಗೆ 1 ಲಕ್ಷ ರೂಪಾಯಿ ನೆರವು ನೀಡಲಾಗುವುದು ಎಂದು ಹೇಳಿದರು. ಸಣ್ಣಪುಟ್ಟ ಗಾಯಗಳಾದವರಿಗೆ ತಲಾ 50 ಸಾವಿರ ರೂ.ಗಳ ನೆರವು ನೀಡಲಾಗುವುದು ಎಂದಿದ್ದಾರೆ.












Click it and Unblock the Notifications