ಫೇಸ್‌ಬುಕ್ ಲಾಟರಿ ಆಸೆಗೆ ಬಿದ್ದು 13 ಲಕ್ಷ ರೂ. ಕಳೆದುಕೊಂಡ ವೃದ್ಧ: ಈಗ ಬ್ರೆಡ್, ನೂಡಲ್ಸ್ ತಿಂದು ಬದುಕುವ ಪರಿಸ್ಥಿತಿ
ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ವಂಚಕರು ಮುಗ್ಧ ಜನರನ್ನ ಬಲೆಗೆ ಬೀಳಿಸಿಕೊಳ್ಳಲು ಹೊಸ ಹೊಸ ತಂತ್ರಗಳನ್ನ ಬಳಸುತ್ತಿದ್ದಾರೆ. ಕಡಿಮೆ ಹೂಡಿಕೆಯಲ್ಲಿ ಲಕ್ಷಾಂತರ ರೂಪಾಯಿ ಗಳಿಸುವ ಆಮಿಷವೊಡ್ಡಿ ಜನರನ್ನ ನಂಬಿಸಿ ಮೋಸ ಮಾಡುವ ಜಾಲಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದೀಗ ಸಿಂಗಾಪುರದಲ್ಲಿ ಇಂತಹದ್ದೇ ಒಂದು ಆಘಾತಕಾರಿ ಘಟನೆ ನಡೆದಿದ್ದು, 71 ವರ್ಷದ ವೃದ್ಧರೊಬ್ಬರು ಫೇಸ್‌ಬುಕ್ ಲಾಟರಿ ಹಗರಣಕ್ಕೆ ಬಲಿಯಾಗಿ ತಮ್ಮ ಇಡೀ ಜೀವನದ ಸಂಪಾದನೆಯನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.
ಹೌದು, ನಿವೃತ್ತಿ ಜೀವನಕ್ಕಾಗಿ ಕೂಡಿಟ್ಟಿದ್ದ 21,688 ಸಿಂಗಾಪುರ್ ಡಾಲರ್ ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಅಂದಾಜು 13.5 ಲಕ್ಷ ರೂಪಾಯಿ ಹಣವನ್ನ ಕಳೆದುಕೊಂಡು ಇದೀಗ ಕೇವಲ ಬ್ರೆಡ್ ಮತ್ತು ಇನ್‌ಸ್ಟಂಟ್ ನೂಡಲ್ಸ್ ತಿಂದು ಬದುಕುವ ಪರಿಸ್ಥಿತಿಗೆ ತಲುಪಿದ್ದಾರೆ.

ಆನ್‌ಲೈನ್ ವಂಚನೆ ಶುರುವಾಗಿದ್ದು ಹೇಗೆ?
ಯಾಂಗ್ ಎಂಬ 71 ವರ್ಷದ ವೃದ್ಧರೇ ಈ ಆನ್‌ಲೈನ್ ವಂಚನೆಗೆ ಒಳಗಾದವರು. ಆಗಸ್ಟ್ ತಿಂಗಳ ಕೊನೆಯಲ್ಲಿ ಯಾಂಗ್ ಅವರು ಫೇಸ್‌ಬುಕ್‌ನಲ್ಲಿ ಲಾಟರಿ ಗೆಲ್ಲುವ ಕುರಿತಾದ ಜಾಹೀರಾತೊಂದನ್ನ ನೋಡಿದ್ದರು. ಆರಂಭದಲ್ಲಿ ಜಾಹೀರಾತಿನಲ್ಲಿದ್ದ ಸಂಖ್ಯೆಗೆ ಕರೆ ಮಾಡಿದಾಗ ಅದು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಆದರೆ ಸೆಪ್ಟೆಂಬರ್ ಆರಂಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮರಳಿ ಕರೆ ಮಾಡಿ, ತಮಗೆ ಸಿಂಗಾಪುರ್ ಪೂಲ್ಸ್ (ಲಾಟರಿ ಸಂಸ್ಥೆ) ಜೊತೆ ಸಂಪರ್ಕವಿದ್ದು, ಲಾಟರಿ ಡ್ರಾ ಆಗುವ ಮುನ್ನವೇ ವಿಜೇತ ಸಂಖ್ಯೆಗಳನ್ನು ನೀಡಬಲ್ಲೆ ಎಂದು ನಂಬಿಸಿದ್ದಾನೆ.
ಮೊದಲ ಬಹುಮಾನದ ಸಂಖ್ಯೆಗೆ S1,988,ಎರಡನೇಬಹುಮಾನಕ್ಕೆS1,688 ಹಾಗೂ ಮೂರನೇ ಬಹುಮಾನದ ಸಂಖ್ಯೆಗೆ S1,388 ಹಣವನ್ನ ಡಿಮ್ಯಾಂಡ್ಮಾಡಿದ್ದ. ಅಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದಾಗ, ಖಾತೆ ನೋಂದಣಿಗೆ S500 ಹಾಗೂ 4D ಲಾಟರಿ ಸಂಖ್ಯೆಗಳಿಗಾಗಿ S$500 ಪಾವತಿಸುವಂತೆ ವಂಚಕರು ಸೂಚಿಸಿದ್ದರು.
ಸೈಬರ್ ಕ್ರೈಮ್ ಖದೀಮರ ತಂತ್ರ: ನಕಲಿ ಚೆಕ್ ಕಳುಹಿಸಿ ಹಣ ಸುಲಿಗೆ
ವಂಚಕರ ಮಾತನ್ನು ನಂಬಿದ ಯಾಂಗ್, ಹಣ ಪಾವತಿಸಿ ಲಾಟರಿ ಸಂಖ್ಯೆಗಳನ್ನ ಪಡೆದಿದ್ದರು. ಅವರಿಗೆ S$300,000 ಅಂದರೆ ಸುಮಾರು 1.9 ಕೋಟಿ ರೂಪಾಯಿ ಬಹುಮಾನದ ಭರವಸೆ ನೀಡಲಾಗಿತ್ತು. ಆದರೆ ಆ ಸಂಖ್ಯೆಗಳಿಗೆ ಯಾವುದೇ ಬಹುಮಾನ ಬರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ, ಸೈಬರ್ ಕ್ರೈಮ್ ವಂಚಕರು ಹೊಸ ಕಥೆ ಕಟ್ಟಿದ್ದಾರೆ.
ಆ ನಿರ್ದಿಷ್ಟ ಲಾಟರಿ ಸಂಖ್ಯೆಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ಅವು "ಸೋಲ್ಡ್ ಔಟ್" ಆಗಿವೆ, ಒಳಗಿನವರ ಮೂಲಕವೇ ಟಿಕೆಟ್ ಬದಲಾಯಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ನಂಬಿಸಿದ್ದಾರೆ. ಮರುದಿನ ಯಾಂಗ್ ಅವರಿಗೆ ಮೆಸೇಜ್ ಕಳುಹಿಸಿ, ನೀವು ಪ್ರಥಮ ಬಹುಮಾನ ಗೆದ್ದಿದ್ದೀರಿ ಎಂದು ಹೇಳಿ, 1.9 ಕೋಟಿ ರೂಪಾಯಿ ಮೊತ್ತದ ನಕಲಿ ಚೆಕ್‌ನ ಫೋಟೋವನ್ನ ಕಳುಹಿಸಿ ಖುಷಿಪಡಿಸಿದ್ದಾರೆ.
ನಿವೃತ್ತಿ ಉಳಿತಾಯ ಕಳೆದುಕೊಂಡು ಬೀದಿಗೆ ಬಿದ್ದ ವೃದ್ಧ
ಗೆದ್ದಿರುವ ಬಹುಮಾನದ ಹಣವನ್ನು ಪಡೆಯಲು ವಂಚಕರು ಮತ್ತೆ 1.9 ಕೋಟಿ ರೂಪಾಯಿ ಹಣವನ್ನ ವರ್ಗಾಯಿಸುವಂತೆ ಕೇಳಿದ್ದಾರೆ. ಸೆಪ್ಟೆಂಬರ್ 9ರಂದು, ಅಷ್ಟು ದೊಡ್ಡ ಮೊತ್ತವನ್ನು ವರ್ಗಾಯಿಸಿದರೆ ಮನಿ ಲಾಂಡರಿಂಗ್ ಅನುಮಾನ ಬರುತ್ತದೆ ಎಂದು ಹೇಳಿ 'ನಿರ್ವಹಣಾ ಶುಲ್ಕ'ದ ಹೆಸರಿನಲ್ಲಿ ಮತ್ತೆ S$5,850 ಸುಲಿಗೆ ಮಾಡಿದ್ದಾರೆ.
ಎರಡು ದಿನಗಳ ನಂತರ ಮತ್ತೆ S7,840 ಡಿಮ್ಯಾಂಡ್ ಮಾಡಿದ್ದಾರೆ. ಹಣಬಾರದೇ ಇದ್ದಾಗ ಅನುಮಾನಗೊಂಡ ಯಾಂಗ್ ಸೆಪ್ಟೆಂಬರ್ 16ರಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಆಶ್ಚರ್ಯವೆಂದರೆ, ಹೇಗಾದರೂ ಮಾಡಿ ಬಹುಮಾನದ ಹಣ ಕೈಸೇರಲಿ ಎಂಬ ಹತಾಶೆಯಲ್ಲಿ ದೂರು ನೀಡಿದ ಬಳಿಕವೂ ಮತ್ತೆ S3,500 ಹಣವನ್ನ ವಂಚಕರಿಗೆ ವರ್ಗಾಯಿಸಿದ್ದರು.
ಕೊನೆಗೆ ಪತ್ರಿಕೆಗಳಲ್ಲಿ ಇದೇ ರೀತಿಯ ವಂಚನೆಗಳ ಬಗ್ಗೆ ವರದಿಗಳನ್ನು ಓದಿದ ಬಳಿಕವಷ್ಟೇ ತಾವು ಸಂಪೂರ್ಣವಾಗಿ ಮೋಸ ಹೋಗಿರುವುದು ಅವರ ಅರಿವಿಗೆ ಬಂದಿದೆ. ತಾವು ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಕಾಂಟ್ರಾಕ್ಟ್ ಕೂಡ ಮುಗಿದಿರುವುದರಿಂದ ಪ್ರಸ್ತುತ ನಿರುದ್ಯೋಗಿಯಾಗಿರುವ ಯಾಂಗ್, ತಮ್ಮ ಸಂಪೂರ್ಣ ನಿವೃತ್ತಿ ಉಳಿತಾಯ ಕಳೆದುಕೊಂಡು ಕಂಗಾಲಾಗಿದ್ದಾರೆ.
ಕೈಯಲ್ಲಿ ಬಿಡಿಗಾಸೂ ಇಲ್ಲದ ಕಾರಣ ದಿನನಿತ್ಯ ಊಟಕ್ಕೂ ಪರದಾಡುತ್ತಿದ್ದು, ಸದ್ಯ ಸಿಂಗಾಪುರ್ ಪೊಲೀಸರು ಈ ಪ್ರಕರಣದ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ. ಸಾರ್ವಜನಿಕರು ಇಂತಹ ಸಾಮಾಜಿಕ ಜಾಲತಾಣಗಳ ಸುಳ್ಳು ಆಮಿಷಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ.


Click it and Unblock the Notifications
