ಮಹಿಳೆಯರ ‘ಸಿಗರೇಟ್’ ಕಹಾನಿ, ‘ಧಮ್’ ವಿಷಯಕ್ಕೆ ಬೆಂಕಿ ಹಚ್ಚಿದ ಭೂಪ!
ಸಿಗರೇಟ್ ಸೇವನೆಯು ಆರೋಗ್ಯಕ್ಕೆ ಹಾನಿಕರ, ಇದನ್ನ ಚಿಕ್ಕವರಿದ್ದಾಗಿಂದ ನಾವು & ನೀವು ಕೇಳ್ತಾನೆ ಇದ್ದೀವಿ. ಇನ್ನ ಭಾರತದ 'ಧಮ್' ವಿಷಯಕ್ಕೆ ಬಂದ್ರೆ ಪುರುಷರೇ ಇಲ್ಲಿ ಮುಂದೆ ಅಂತಾ ಹೇಳಲಾಗಿತ್ತು. ಆದ್ರೆ ಮಹಿಳೆಯರು ಕೂಡ ಸಿಗರೇಟ್ ಚಟಕ್ಕೆ ಬಲಿಯಾಗುತ್ತಿದ್ದಾರೆ. ಹೀಗಿದ್ದಾಗ ಇಲ್ಲೊಬ್ಬ ಕಿರಾತಕ ಮಹಿಳೆಯರು ಸಿಗರೇಟ್ ಹೊಡಿತಾರೆ ಅಂತಾ ಒಂದು ಟೀ ಅಂಗಡಿಗೆ ಬೆಂಕಿ ಹಚ್ಚಿದ್ದಾನೆ!
ಹೌದು, ಇಂತಹ ವಿಲಕ್ಷಣ ಮತ್ತು ವಿಚಿತ್ರ ಘಟನೆ ನಡೆದಿದಿದ್ದು ಮಧ್ಯಪ್ರದೇಶದಲ್ಲಿ. ಹೀಗೆ ಬೆಂಕಿ ಹಚ್ಚಿ ಅಂಗಡಿ ನಾಶ ಮಾಡಿರುವ ವ್ಯಕ್ತಿ ಟೆಲಿಕಾಂ ಇಲಾಖೆಯ ನಿವೃತ್ತ ಉದ್ಯೋಗಿ. ಮಧ್ಯಪ್ರದೇಶ ರಾಜಧಾನಿ ಇಂದೋರ್‌ನ ನಿವಾಸಿಯಾದ ಈ ವ್ಯಕ್ತಿ, ಕೆಲವು ಸಮಯದಿಂದ ಟೀ ಅಂಗಡಿ ಒಂದರಲ್ಲಿ ಮಹಿಳೆಯರು ಸಿಗರೇಟ್ ಸೇದುವ ವಿಚಾರದ ಬಗ್ಗೆಯೇ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದ ಎನ್ನಲಾಗಿದೆ. ಪದೇ ಪದೆ ಟೀ ಅಂಗಡಿಯಲ್ಲಿ ಮಹಿಳೆಯರ ಗುಂಪು ಸಿಗರೇಟ್ ಸೇದುವುದನ್ನ ನೋಡಿ ರೊಚ್ಚಿಗೆದ್ದಿದ್ದಾನೆ. ಈ ಕೋಪಕ್ಕೆ ಭೂಪ ರಾತ್ರೋರಾತ್ರಿ ಮಾಡಿದ್ದೇನು ಗೊತ್ತಾ?

ಎಲ್ಲರೂ ಮಲಗಿದ್ದಾಗ ಪೆಟ್ರೋಲ್ ಸುರಿದು...
ಇಡೀ ಇಂದೋರ್ ನಗರದಲ್ಲಿ ಎಲ್ಲರೂ ಸಿಹಿ ನಿದ್ದೆಗೆ ಜಾರಿದ್ದಾಗ, ಮಹಿಳೆಯರು ಸಿಗರೇಟ್ ಸೇದುತ್ತಿದ್ದ ಅಂಗಡಿಗೆ ಈ ಕಿರಾತಕ ಬೆಂಕಿ ಹಚ್ಚಿದ್ದಾನೆ. ಅಂಗಡಿ ಮಾಲೀಕ ನೆಮ್ಮದಿಯಾಗಿ ಮನೆಯಲ್ಲಿ ಮಲಗಿದ್ದರೆ, ಇತ್ತ ಆತನ ಅಂಗಡಿಗೆ ರಾತ್ರಿ ಕಗ್ಗತ್ತಲಿನಲ್ಲೇ ಪೆಟ್ರೋಲ್ ಸುರಿದ ಬೆಂಕಿ ಹಚ್ಚಿದ್ದಾನೆ ಆರೋಪಿ. ವಿಷಯ ತಿಳಿದು ಟೀ ಅಂಗಡಿ ಮಾಲೀಕ ಓಡೋಡಿ ಬಂದು ನೋಡಿದರೆ ಅಷ್ಟೊತ್ತಿಗೆ ಅಂಗಡಿ ಪೂರ್ತಿ ಭಸ್ಮವಾಗಿ ಹೋಗಿತ್ತು. ಇನ್ನೇನು ಮಾಡೋದು ಅಂತಾ ಮಾಲೀಕ ಅಳುತ್ತಾ ಸುಟ್ಟುಹೋದ ತನ್ನ ಟೀ ಅಂಗಡಿ ಮುಂದೆ ಕೂತು ಅತಿದ್ದಾನೆ ಅಷ್ಟೇ.
ಪೊಲೀಸರಿಗೆ ಶಾಕ್ ಕೊಟ್ಟ ಕಿರಾತಕ!
ಘಟನೆ ಬಗ್ಗೆ ತನಿಖೆ ಆರಂಭಿಸಿದ ಇಂದೋರ್ ನಗರದ ಲಸುಡಿಯಾ ಠಾಣೆ ಪೊಲೀಸರಿಗೂ ಮೊದಲಿಗೆ ಸಿಕ್ಕಾಪಟ್ಟೆ ತೆಲೆಕೆಟ್ಟು ಹೋಗಿತ್ತು. ಕೊನೆಗೆ ಟೀ ಅಂಗಡಿ ಮಾಲೀಕನಿಗೆ ಇರುವ ಶತ್ರುಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಆದರೆ ಟೀ ಅಂಗಡಿ ಮಾಲೀಕನಿಗೆ ಆ ರೀತಿ ಶತ್ರು ಪಡೆ ಇರಲಿಲ್ಲ. ಕೊನೆಗೆ ಸುತ್ತಮುತ್ತ ಇರುವ ಸಿಸಿ ಕ್ಯಾಮೆರಾಗಳನ್ನು ತೆಗೆದು ನೋಡಿದಾಗ ಈ ಕಿರಾತಕನ ಕೈವಾಡ ಗೊತ್ತಾಗಿದೆ. ತಕ್ಷಣ ತಡ ಮಾಡದೆ ಆರೋಪಿ ಕೈಗೆ ಬೇಡಿ ಹಾಕಿ, ಎತ್ತಾಕೊಂಡು ಬಂದಿದ್ದಾರೆ. ಆಗಲೇ ನೋಡಿ ಬಯಲಾಗಿದ್ದು ಭಯಾನಕ ಸಂಗತಿ.

ವಿಚಾರಣೆ ವೇಳೆ ಆರೋಪಿ ಹೇಳಿದ್ದೇನು?
ಇನ್ನು ವಿಚಾರಣೆ ಆರಂಭಿಸಿದಾಗ ಆರೋಪಿ ಭಯಾನಕ ವಿಚಾರ ಬಾಯಿ ಬಿಟ್ಟಿದ್ದಾನೆಂದು, ಇಂದೋರ್‌ನ ಹೆಚ್ಚುವರಿ ಡಿಸಿಪಿ ರಾಜೇಶ್ ದಂಡೋಟಿಯಾ ಹೇಳಿದ್ದಾರೆ. ಟೀ ಅಂಗಡಿಯ ಒಳಗೆ ಮಹಿಳೆಯರು ಸಿಗರೇಟ್ ಸೇದುವುದನ್ನು ನೋಡಿದ್ದೆ. ಇದೇ ಕಾರಣಕ್ಕೆ ನನಗೆ ಕೋಪ ಇತ್ತು, ಆ ಹಿನ್ನೆಲೆ ಅಂಗಡಿಯ ಮೇಲೆ ದಾಳಿ ಮಾಡಿ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದೀನಿ ಎಂದಿದ್ದಾನೆ ಆರೋಪಿ. ಪೊಲೀಸರು ಈ ಸುದ್ದಿ ಕೇಳಿ ಬೆಚ್ಚಿಬಿದ್ದಿದ್ದಾರೆ. ಇವನು ಯಾರೋ ಸೈಕ್ ಇರಬೇಕು ಅಂದುಕೊಂಡಿದ್ದಾರೆ.
ಒಟ್ನಲ್ಲಿ ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ ಮಾತ್ರವಲ್ಲ ಯಾಮಾರಿದರೆ ಜೀವವನ್ನೇ ತೆಗೆದುಬಿಡುತ್ತೆ. ಅದರಲ್ಲೂ ಮಹಿಳೆಯರು ಸಿಗರೇಟು ಸೇವನೆ ಮಾಡುವುದರಿಂದ, ಹಲವು ಸಮಸ್ಯೆ ಎದುರಾಗುತ್ತದೆ. ಇದೇ ಕಾರಣಕ್ಕೆ ರೊಚ್ಚಿಗೆದ್ದ ವ್ಯಕ್ತಿ ಟೀ ಅಂಗಡಿಗೆ ಬೆಂಕಿಯನ್ನು ಹಚ್ಚಿದ್ದಾನೆ. ಆದರೆ ಸಾವಿರದ ಆಸೆಗೆ, ಲಕ್ಷ ಕಳೆದುಕೊಂಡಿದ್ದಾನೆ ಟೀ ಅಂಗಡಿ ಮಾಲೀಕ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಯನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಈತನ ಈ ಕೃತ್ಯಕ್ಕೆ ಪ್ರೇರಣೆ ಯಾರು? ಎಂಬ ಬಗ್ಗೆಯು ಈಗ ತನಿಖೆ ನಡೆಯುತ್ತಿದೆ.

ಜೀವ ತೆಗೆಯುತ್ತೆ ಸಿಗರೇಟು ಚಟ
ಮಹಿಳೆಯರು ಸಿಗರೇಟು ಸೇದುವುದು ಒಂದು ಕಾಲಕ್ಕೆ, ವಿದೇಶಕ್ಕೆ ಮಾತ್ರ ಮೀಸಲಾಗಿತ್ತು. ಆದ್ರೆ ಭಾರತದಲ್ಲೂ ಈ ಚಟ ವೇಗವಾಗಿ ಹರಡುತ್ತಿದೆ. ಇನ್ನು ಭಾರತದಲ್ಲಿ ಮಹಿಳೆಯರು ಸಿಗರೇಟ್ ಸೇದುವ ವಿಚಾರಕ್ಕೆ ವಿರೋಧವೂ ಇದೆ. ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲಿ ಕೂಡ ವಿರೋಧ ಇದೆ. ಇಷ್ಟಾದರೂ ಸಿಗರೇಟು ಚಟಕ್ಕೆ ಭಾರಿ ದೊಡ್ಡ ಸಂಖ್ಯೆಯ ಯುವ ಸಮೂಹ ಬಲಿಯಾಗುತ್ತಿದೆ. ಅದರಲ್ಲೂ ಮಹಿಳೆಯರು ನಾನಾ ಸಮಸ್ಯೆಗಳನ್ನು ಸಿಗರೇಟು ಕಾರಣಕ್ಕೆ ಅನುಭವಿಸುತ್ತಿದ್ದಾರೆ. ಇಷ್ಟಾದರೂ ಸಿಗರೇಟು ಎಂಬ ಭಯಾನಕ ಚಟ ಮಾತ್ರ ವೇಗವಾಗಿ ಹಬ್ಬುತ್ತಿರುವುದು ವಿಪರ್ಯಾಸ.
ಮಹಿಳೆಯರಿಗೆ ಭಾರಿ ಸಮಸ್ಯೆ ಯಾಕೆ?
ಸಿಗರೇಟು ಸೇವನೆ ಪುರುಷರಿಗಿಂತ ಮಹಿಳೆಯರ ಮೇಲೆ ದೊಡ್ಡ ಎಫೆಕ್ಟ್ ಬೀರುತ್ತೆ ಅನ್ನೋ ಮಾತು ಸಂಶೋಧಕರದ್ದು. ಯಾಕಂದ್ರೆ ಒಂದು ಜೀವಕ್ಕೆ ಜನ್ಮ ನೀಡುವ ಶಕ್ತಿ ಇರುವವರಿಗೆ ಸಿಗರೇಟು ಮಾರಕವಾಗುತ್ತದೆ. ಮಹಿಳೆಯರು ಸಿಗರೇಟು ಸೇವನೆ ಮಾಡುವುದರಿಂದ ಹಲವು ರೀತಿಯ ಸಮಸ್ಯೆ ಎದುರಿಸುತ್ತಾರೆ. ಅದರಲ್ಲೂ ಅವರಿಗೆ ಹುಟ್ಟುವ ಮಕ್ಕಳಿಗೂ ಸಮಸ್ಯೆಗಳ ಸಾಗರ ಗಿಫ್ಟ್ ಆಗಿ ಬರುತ್ತೆ. ಇನ್ನು ಎದೆಹಾಲನ್ನೂ ಕುಡಿಸಲು ಆಗಲ್ಲ. ಅಮೆರಿಕದಲ್ಲಿ ಈ ಸಮಸ್ಯೆ ಈಗಾಗಲೇ ದೊಡ್ಡದಾಗಿ ಕಾಡುತ್ತಿದೆ.
ಎದೆಹಾಲು ಕುಡಿಸಲು ಬಾಡಿಗೆ ತಾಯಿ!
ಅಮೆರಿದಕಲ್ಲಿ ಒಂದು ಜಮಾನದಲ್ಲಿ ಪರಿಸ್ಥಿತಿ ಹೇಗಿತ್ತು ಎಂದರೆ, ಸಿಗರೇಟು ಸೇವಿಸದಿದ್ದರೆ ಆತ ಮನುಷ್ಯನೇ ಅಲ್ಲ ಎಂಬಂತೆ ನೋಡುತ್ತಿದ್ದರು. ಅದರಲ್ಲೂ ಅಮೆರಿಕ ಮಹಿಳೆಯರಿಗೆ ಕೂಡ ಚಟ ಗಿಫ್ಟ್ ಆಗಿ ಬಂತು. ಕೊನೆಗೆ ನೋಡ ನೋಡುತ್ತಲೇ ಲಕ್ಷಾಂತರ ಮಹಿಳೆಯರು ಸಿಗರೇಟು ಚಟಕ್ಕೆ ಅಂಟಿಕೊಂಡರು. ಈಗ ನೋಡಿದರೆ ಆ ಸಮಸ್ಯೆ ದೊಡ್ಡದಾಗಿ ಬೆಳೆದಿದೆ. ಹೀಗಾಗಿ ಅಮೆರಿಕದಲ್ಲಿ ಮಕ್ಕಳಿಗೆ ಜನ್ಮ ನೀಡುವ ಅದೆಷ್ಟೋ ತಾಯಂದಿರುವ ಎದೆಹಾಲು ಕುಡಿಸಲು ಆಗಲ್ಲ. ಯಾಕಂದ್ರೆ ಸಿಗರೇಟು ಸೇದುವ ತಾಯಂದಿರು, ಎದೆಹಾಲು ಕುಡಿಸಲು ಆಗಲ್ಲ. ಅವರಲ್ಲಿ ಎದೆಹಾಲು ವಿಷವಾಗಿ ಬದಲಾಗಿರುತ್ತದೆ. ಹೀಗಾಗಿಯೇ ಬಾಡಿಗೆ ತಾಯಿ ಮೂಲಕ ತಮ್ಮ ಮಕ್ಕಳಿಗೆ ಹಾಲು ಕುಡಿಸುತ್ತಾರಂತೆ.
ಹೀಗೆ ಒಂದು ಸಿಗರೇಟು ಇಡೀ ಮನುಷ್ಯನ ಜೀವನವನ್ನೇ ಹಾಳು ಮಾಡುತ್ತಿದೆ. ಅದ್ರಲ್ಲೂ ಮಹಿಳೆಯರು ಮಾತ್ರವಲ್ಲದೆ, ಪುರುಷರು ಕೂಡ ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗೆ ತಂಬಾಕು ಮನುಷ್ಯನ ಜೀವನವನ್ನ ಸಂಪೂರ್ಣ ಹಾಳು ಮಾಡುತ್ತಿದೆ. ಹೀಗಾಗಿ ಈ ಕುರಿತು ಮತ್ತಷ್ಟು ಜಾಗೃತಿ ಮೂಡಿಸಬೇಕಿದೆ ಎಂಬ ಸಲಹೆ ಕೇಳಿಬಂದಿದೆ. ಆದ್ರೆ ಸರ್ಕಾರ ಈ ಬಗ್ಗೆ ಯಾವ ರೀತಿ ನಿರ್ಧಾರ ಕೈಗೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಒನ್ಸ್ ಅಗೈನ್, ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ!












Click it and Unblock the Notifications