ಮಧ್ಯಪ್ರದೇಶದಲ್ಲಿ ದಲಿತರಿಗೆ ಮಲ ತಿನ್ನಿಸಿ ಹೀನ ಕೃತ್ಯ: 7 ಮಂದಿ ಬಂಧನ, ಆರೋಪಿಗಳ ಮನೆ ನೆಲಸಮ
ಭೋಪಾಲ್, ಜುಲೈ. 07: ಇಬ್ಬರು ದಲಿತ ಯುವಕರಿಗೆ ಬಲವಂತವಾಗಿ ಮಲ ತಿನ್ನಿಸಿ ಹೀನ ಕೃತ್ಯ ಎಸಗಿದ್ದ ಆರೋಪದ ಮೇಲೆ ಮಧ್ಯಪ್ರದೇಶದ ಶಿವಪುರಿ ಆಡಳಿತವು ಒಂದು ಕುಟುಂಬದ ಏಳು ಸದಸ್ಯರನ್ನು ಬಂಧಿಸಿದೆ. ಇದಲ್ಲದೆ ಆರೋಪಿಗಳ ಮನೆಗಳನ್ನು ಕೆಡವಿದೆ ಎಂದು ವರದಿಯಾಗಿದೆ. ದಲಿತ ಯುವಕರು ಆರೋಪಿಗಳ ಮನೆಯ ಯುವತಿಯೊಂದಿಗೆ ಮಾತನಾಡ ಕಾರಣ ಅಮಾನವೀಯ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 30 ರಂದು ಶಿವಪುರಿ ಜಿಲ್ಲೆಯ ವರ್ಖಾಡಿ ಗ್ರಾಮದಲ್ಲಿ ದಲಿತ ವ್ಯಕ್ತಿಯ ಮೇಲೆ ದೌರ್ಜನ್ಯ ನಡೆದಿತ್ತು, ಆದರೆ ವಿಡಿಯೋ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ. ಶಿವಪುರಿ ಪೊಲೀಸ್ ಅಧೀಕ್ಷಕ (ಎಸ್‌ಪಿ) ರಘುವಂಶ್ ಸಿಂಗ್ ಭಡೋರಿಯಾ ಪ್ರಕಾರ, ರಾಜ್ಯದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರ ನಿರ್ದೇಶನದ ಮೇರೆಗೆ ಕುಟುಂಬದ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಯನ್ನು ಹಾಕಲು ಆದೇಶಿಸಿದ್ದಾರೆ.

"23 ಮತ್ತು 24 ವರ್ಷದ ಇಬ್ಬರು ಯುವಕರು ಆರೋಪಿಯ ಕುಟುಂಬದ 26 ವರ್ಷದ ಯುವತಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದರು ಎಂದು ವರದಿಯಾಗಿದೆ. ಈ ವಿಷಯ ತಿಳಿದ ಮನೆಯವರು ಯುವತಿಯನ್ನು ವರ್ಖಾಡಿ ಗ್ರಾಮದಲ್ಲಿರುವ ಇಬ್ಬರನ್ನು ತಮ್ಮ ಮನೆಗೆ ಕರೆ ತರುವಂತೆ ತಿಳಿಸಿದ್ದಾರೆ. ಜೂನ್ 30 ರಂದು ಇಬ್ಬರು ಬಂದಾಗ ಮನೆಯವರು ಅಮಾನುಷವಾಗಿ ಥಳಿಸಿದ್ದಾರೆ. ಆರೋಪಿಗಳು ದಲಿತರ ಮುಖಕ್ಕೆ ಕಪ್ಪು ಬಣ್ಣ ಬಳಿದು, ಮಲವನ್ನು ತಿನ್ನುವಂತೆ ಒತ್ತಾಯಿಸಿದ್ದಾರೆ. ಅವರಿಗೆ ಚಪ್ಪಲಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ" ಎಂದು ಎಸ್‌ಪಿ ರಘುವಂಶ್ ಸಿಂಗ್ ಭಡೋರಿಯಾ ಹೇಳಿದ್ದಾರೆ.
ಆದರೆ ಮಹಿಳೆಗೆ ಕಿರುಕುಳ ನೀಡಿದ್ದಕ್ಕಾಗಿ ಮತ್ತು ಅನುಚಿತವಾಗಿ ಸ್ಪರ್ಶಿಸಿದ್ದಕ್ಕಾಗಿ ಇಬ್ಬರು ಯುವಕರನ್ನು ಥಳಿಸಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ. ತನಿಖೆಯ ಸಂದರ್ಭದಲ್ಲಿ ಕುಟುಂಬದವರ ಹೇಳಿಕೆಗಳು ಸುಳ್ಳು ಎಂದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಆರೋಪಿಗಳು ತಮ್ಮನ್ನು ಲೈಂಗಿಕ ಕಿರುಕುಳದ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ಆರೋಪಿಗಳ ಕುಟುಂಬದ ವಿರುದ್ಧ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 294 (ಅಶ್ಲೀಲ ಭಾಷೆ ಬಳಸಿ), 506 (ಕ್ರಿಮಿನಲ್ ಬೆದರಿಕೆ), 328 (ವಿಷದಿಂದ ನೋವುಂಟುಮಾಡುವುದು), 342 (ತಪ್ಪಾದ ಬಂಧನ), ಭಾರತೀಯ ದಂಡ ಸಂಹಿತೆಯ 147 (ಗಲಭೆ), 355 (ವ್ಯಕ್ತಿಯನ್ನು ಅವಮಾನಿಸುವ ಆಕ್ರಮಣ) ಮತ್ತು 270 (ಮಾರಣಾಂತಿಕ ಕೃತ್ಯ) ಮತ್ತು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಾದ ಅಜ್ಮತ್ ಖಾನ್, ವಕೀಲ್ ಖಾನ್, ಆರಿಫ್ ಖಾನ್, ಶಾಹಿದ್ ಖಾನ್, ಇಸ್ಲಾಂ ಖಾನ್, ರಹೀಶಾ ಬಾನೋ ಮತ್ತು ಸೈನಾ ಬಾನೊ ಅವರನ್ನು ಬುಧವಾರ ಬಂಧಿಸಿ ಗುರುವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಜೈಲಿಗೆ ಕಳುಹಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಅರಣ್ಯ, ಪೊಲೀಸ್ ಮತ್ತು ಜಿಲ್ಲಾಡಳಿತದ ಜಂಟಿ ತಂಡವು ಅರಣ್ಯ ಭೂಮಿಯಲ್ಲಿ ಮನೆ ನಿರ್ಮಿಸಲಾಗಿದೆ ಎಂಬ ಕಾರಣಕ್ಕಾಗಿ ಕುಟುಂಬದ ಮೂರು ಮನೆಗಳನ್ನು ಭಾಗಶಃ ನೆಲಸಮಗೊಳಿಸಿತು.
"ಮೂರು ಜನರು (ಕುಟುಂಬದ ಸದಸ್ಯರು) ಸುಮಾರು ಮೂರು ಹೆಕ್ಟೇರ್ ಅರಣ್ಯ ಭೂಮಿಯನ್ನು ಅತಿಕ್ರಮಿಸಿದ್ದಾರೆ. ಅವರ ವಿರುದ್ಧ ಸೆಪ್ಟೆಂಬರ್ 19, 2022 ರಂದು ಪ್ರಕರಣ ದಾಖಲಿಸಲಾಗಿದೆ. ವಿಭಾಗೀಯ ಅರಣ್ಯಾಧಿಕಾರಿ ಅತಿಕ್ರಮಣವನ್ನು ತೆಗೆದುಹಾಕಲು ಆದೇಶಿಸಿದ್ದರು. ಸ್ವಯಂಪ್ರೇರಿತವಾಗಿ ಒತ್ತುವರಿ ತೆರವು ಮಾಡುವಂತೆ ತಿಳಿಸಿದ್ದರೂ ಅವರು ಕ್ರಮಕೈಗೊಳ್ಳಲಿಲ್ಲ" ಎಂದು ಅರಣ್ಯ ಉಪವಿಭಾಗಾಧಿಕಾರಿ ಎಲ್ವಿನ್ ವರ್ಮನ್ ತಿಳಿಸಿದ್ದಾರೆ.












Click it and Unblock the Notifications