Manipur Violence: ರಕ್ಷಣಾ ಸಿಬ್ಬಂದಿ ವೇಷ ಹಾಕಿದ್ದ ಐವರು ಅಂದರ್!
ಇಂಫಾಲ್: ಗಿರಿಗಳ ನಾಡು ಮಣಿಪುರ ಹಿಂಸಾಚಾರ ಹಿಡಿತಕ್ಕೆ ಸಿಗುತ್ತಿಲ್ಲ. ಭಾಗಶಃ ರಾಜ್ಯ ಹಿಂಸೆಗೆ ನಲುಗಿ ಹೋಗಿದ್ದು ಜನ ಜೀವ ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ಎದುರಾಗಿದೆ. ಹೀಗಿದ್ದಾಗಲೇ ಪೊಲೀಸರ ರೀತಿ ವೇಷ ಹಾಕಿಕೊಂಡು ಹೋಗುತ್ತಿದ್ದ ಐವರು ಕಿರಾತಕರನ್ನು ಬಂಧಿಸಲಾಗಿದೆ. ಇನ್ನೂ ಆತಂಕದ ವಿಚಾರ ಏನೆಂದರೆ ಬಂಧಿತ 5 ಆರೋಪಿಗಳ ಕೈಯಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ ಸಿಕ್ಕಿದ್ದು, ಆರೋಪಿಗಳ ವಿಚಾರಣೆ ತೀವ್ರವಾಗಿದೆ.
ಪೊಲೀಸರ ಸಮವಸ್ತ್ರ ಧರಿಸಿದ್ದ ಕಿರಾತಕರು ಮಣಿಪುರದಲ್ಲಿ ಸುಲಿಗೆ & ಬೆದರಿಕೆ ಸೇರಿದಂತೆ ಹಲವು ದುಷ್ಕೃತ್ಯ ನಡೆಸಿದ ಆರೋಪ ಕೇಳಿಬಂದಿತ್ತು. ಹೀಗಾಗಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಐವರನ್ನು ಬಲೆಗೆ ಬೀಳಿಸಿದ್ದಾರೆ. ಜೊತೆಗೆ ಆರೋಪಿಗಳನ್ನ ಕೋರ್ಟ್ ಎದುರು ಹಾಜರುಪಡಿಸಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಆದ್ರೆ ಈ ಆರೋಪಿಗಳಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಸಿಕ್ಕಿದ್ದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿ ತನಕ ಸಿಕ್ಕಿಲ್ಲ. ಮತ್ತೊಂದು ಕಡೆ ಇವರ ಬಂಧನ ಖಂಡಿಸಿ ಮಣಿಪುರ ಮತ್ತೆ ಧಗಧಗಿಸುತ್ತಿದೆ.

ಪೊಲೀಸ್ ಠಾಣೆ ಎದುರು ಉಗ್ರ ಹೋರಾಟ
ಐವರು ಆರೋಪಿಗಳನ್ನ ಬಂಧಿಸಿದ ಕಾರಣ ಮಣಿಪುರದ ವಿವಿಧೆಡೆ ಹಿಂಸೆ ಮತ್ತೆ ಹೆಚ್ಚಾಗಿ, ಪೊಲೀಸ್ ಠಾಣೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ಮಣಿಪುರ ಪೂರ್ವ ಜಿಲ್ಲೆಯ ಪೊರೊಂಪತ್ ಠಾಣೆ ಎದುರು ಜಮಾಯಿಸಿ ಉಗ್ರ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪರಿಸ್ಥಿತಿ ಕೈಮೀರಿದ್ದು ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಕೂಡ ಪ್ರಯೋಗಿಸಲಾಯಿತು. ಆದರೆ ಈ ವೇಳೆ ರಕ್ಷಣಾ ಸಿಬ್ಬಂದಿ ಸೇರಿ ಕೆಲವರಿಗೆ ಗಾಯವಾಗಿದೆ. ಈ ಕಾರಣಕ್ಕೆ ಸ್ಥಿತಿ ಸೂಕ್ಷ್ಮವಾಗಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.
5(five) Persons Arrested with Sophisticated Weapons:
— Manipur Police (@manipur_police) September 17, 2023
There have been reports of extortion threats, misuse of police uniform and impersonation by armed miscreants. In view of this, Manipur Police has been making all out efforts to curb the same.
In one such operation, on…
ಸಾವಿರ ಸಾವಿರ ಮನೆ ಭಸ್ಮ
ಕಳೆದ 4 ತಿಂಗಳಲ್ಲಿ ಮಣಿಪುರ ಹಿಂಸಾಚಾರ ಒಟ್ಟು 175 ಜನರನ್ನ ಬಲಿ ಪಡೆದಿದೆ. 1108 ಜನ ಗಾಯಗೊಂಡಿದ್ದು, 32 ಜನ ಕಾಣೆಯಾಗಿದ್ದಾರೆ. ಪರಿಶಿಷ್ಟ ಪಂಗಡ ಮೀಸಲಾತಿ ವಿಚಾರವಾಗಿ ಮೈತೇಯಿ ಮತ್ತು ಕುಕಿ ಸಮುದಾಯದ ನಡುವೆ ಹಿಂಸಾಚಾರ ಭುಗಿಲೆದ್ದು. ಹಿಂಸೆ ಜೋರಾಗಿ ಕಂಡ ಕಂಡ ಮನೆಗೆ ಬೆಂಕಿ ಇಟ್ಟಿದ್ದರು ಕ್ರೂರಿಗಳು. ಹೀಗೆ ಬರೋಬ್ಬರಿ 4,786 ಮನೆ ಈ ರೀತಿ ಬೂದಿಯಾಗಿ ಹೋಗಿವೆ. ಇದರ ಜೊತೆಗೆ ಅದೆಷ್ಟೋ ಶವಗಳ ಗುರುತು ಕೂಡ ಸಿಗುತ್ತಿಲ್ಲ.
ಹಾಗೇ 386 ಧಾರ್ಮಿಕ ಕಟ್ಟಡಗಳನ್ನ ಧ್ವಂಸಗೊಳಿಸಲಾಗಿದೆ. ಮಣಿಪುರದಲ್ಲಿ ಈಗಲೂ ಭಯ ಮತ್ತು ಬೇಸರದ ವಾತಾವರಣ ಆವರಿಸಿದೆ. ಈವರೆಗೆ ಹಿಂಸೆ ನಡೆಸುತ್ತಿದ್ದವರ ಕೈಯಿಂದ 1359 ಬಂದೂಕುಗಳು ಮತ್ತು 15,050 ಮದ್ದುಗುಂಡು ವಶಕ್ಕೆ ಪಡೆಯಲಾಗಿದೆ. ಇಷ್ಟಾದರೂ ಅಲ್ಲಿ ಶಾಂತಿ ನೆಲೆಸುತ್ತಿಲ್ಲ, ಈಗ ಕೇವಲ ಐವರು ಆರೋಪಿಗಳನ್ನ ಬಂಧಿಸಿದ್ದಕ್ಕೆ ಪೊಲೀಸ್ ಠಾಣೆ ಎದುರೇ ಪ್ರತಿಭಟನೆ ಮಾಡುವಷ್ಟು ಕೈಮೀರಿ ಹೋಗಿದೆ ಮಣಿಪುರದ ಪರಿಸ್ಥಿತಿ.

ಧಾರ್ಮಿಕ ಸ್ಥಳಗಳೇ ಟಾರ್ಗೆಟ್?
ಹಾಗೇ ಇದೇ ವೇಳೆ 5172 ಬೆಂಕಿ ಹಚ್ಚಿದ ಪ್ರಕರಣ ವರದಿಯಾಗಿವೆ. 254 ಚರ್ಚ್ ಸೇರಿದಂತೆ & 132 ದೇವಾಲಯ ಸೇರಿ 386 ಧಾರ್ಮಿಕ ಕಟ್ಟಡ ಧ್ವಂಸಗೊಳಿಸಲಾಗಿದೆ ಎಂದು ಇತ್ತೀಚೆಗಷ್ಟೇ ಮಣಿಪುರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು. ಪರಿಶಿಷ್ಟ ಪಂಗಡ ಮೀಸಲಾತಿ ವಿಚಾರಕ್ಕೆ ಮೈತೇಯಿ & ಕುಕಿ ಸಮುದಾಯದ ನಡುವೆ ಹಿಂಸಾಚಾರ ಭುಗಿಲೆದ್ದ ಬಳಿಕ ಪರಿಸ್ಥಿತಿ ಹಿಡಿತಕ್ಕೆ ಸಿಗುತ್ತಿಲ್ಲ. ಮಣಿಪುರ ಜನಸಂಖ್ಯೆ ಪ್ರಮಾಣದಲ್ಲಿ ಸುಮಾರು 53 ಶೇಕಡಾ ಮೈತೇಯಿ ಜನಾಂಗ ಇದ್ದು, ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ನಾಗಾಗಳು ಮತ್ತು ಕುಕಿಗಳನ್ನ ಒಳಗೊಂಡ ಬುಡಕಟ್ಟು ಜನಾಂಗದವರು ಶೇಕಡಾ 40 ರಷ್ಟು ಇದ್ದಾರೆ.
ಒಟ್ನಲ್ಲಿ ಮಣಿಪುರ ಹಿಂಸಾಚಾರ ವಿಚಾರ ಇಡೀ ದೇಶಕ್ಕೇ ತಲೆನೋವಾಗಿ ಪರಿಣಮಿಸುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಕೂಡ ಅಗತ್ಯ ಕ್ರಮ ಕೈಗೊಂಡಿದೆ. ಇಷ್ಟಾದ್ರೂ ಕಿರಾತಕರ ಕೈಗೆ ಅತ್ಯಾಧುನಿಕ ಅಸ್ತ್ರಗಳು ಹಾಗೂ ಬಂದೂಕು ಕೈಗೆ ಸಿಗುತ್ತಿರುವುದು ಆತಂಕ ಹೆಚ್ಚಿಸಿದೆ. ಈ ಪೈಕಿ ಸಾವಿರಾರು ಜನ ಬೇರೆ ಬೇರೆ ಊರು ಸೇರಿದ್ದರೆ, ಮನೆ ಕಳೆದುಕೊಂಡ ಕುಟಂಬಗಳು ಪರದಾಡುತ್ತಿವೆ. ಮಣಿಪುರ ಸರ್ಕಾರ ಇವರಿಗೆ ನೆರವಿನ ಹಸ್ತ ಚಾಚಿದೆ.












Click it and Unblock the Notifications