Golden Temple: ಸ್ವರ್ಣ ಮಂದಿರ ಆವರಣದಲ್ಲಿ ಭಕ್ತರ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ
ಪಂಜಾಬ್‌ನ ಅಮೃತಸರದ ಸ್ವರ್ಣ ಮಂದಿರ ಆವರಣದಲ್ಲಿ ವ್ಯಕ್ತಿಯೊಬ್ಬ ಕಬ್ಬಿಣದ ರಾಡ್‌ನಿಂದ ಜನರ ಮೇಲೆ ಏಕಾಏಕಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಘಟನೆಯಲ್ಲಿ ಐದು ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಲ್ಲೆ ಮಾಡಿದ ವ್ಯಕ್ತಿಯನ್ನು ಬಂಧಿಸಿದ್ದು ಸ್ವರ್ಣ ಮಂದಿರ ಆವರಣದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಐಎಎನ್‌ಎಸ್ ವರದಿ ಮಾಡಿದೆ.
ಸಮುದಾಯ ಅಡುಗೆಮನೆ ಅಥವಾ ಗುರು ರಾಮ್ ದಾಸ್ ಲಂಗರ್ ಬಳಿ ವ್ಯಕ್ತಿಯೊಬ್ಬ ಏಕಾಏಕಿ ದಾಳಿ ನಡೆಸುತ್ತಿದ್ದಂತೆ ಅಲ್ಲಿದ್ದ ಭಕ್ತರು ಮತ್ತು ಸ್ಥಳೀಯರು ಭಯಭೀತರಾದರು. ಗಾಯಗೊಂಡವರಲ್ಲಿ ಇಬ್ಬರು ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯ (SGPC) ಇಬ್ಬರು ಸೇವಾದಾರರು (ಸ್ವಯಂಸೇವಕರು) ಆಗಿದ್ದಾರೆ ಎಂದು ಗುರುತಿಸಲಾಗಿದೆ. ಗಾಯಾಳುಗಳಲ್ಲಿ ಒಬ್ಬರನ್ನು ಅಮೃತಸರದ ಶ್ರೀ ಗುರು ರಾಮ್ ದಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ದಾಳಿ ಮಾಡಿದವ ಮತ್ತು ಆತನ ಜೊತೆಗಿದ್ದ ಸಹಚರನ್ನು ಪೊಲೀಸರು ಬಂಧಿಸುವ ಮೊದಲು ಸ್ಥಳದಲ್ಲಿದ್ದವರು ಥಳಿಸಿದ್ದಾರೆ. ದಾಳಿಗೆ ಮುನ್ನ ಆರೋಪಿಗಳು ಪ್ರದೇಶವನ್ನು ಸಮೀಕ್ಷೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಮುಖ ಆರೋಪಿ ಆವರಣಕ್ಕೆ ಬಂದ ಬಳಿಕ ಕೆಲ ಸಮಯದ ವಾಪಸ್ ಹೋಗಿ ಮತ್ತೆ ಕಬ್ಬಿಣದ ರಾಡ್ ತೆಗೆದುಕೊಂಡು ಬಂದಿದ್ದಾನೆ. ಬಳಿಕ ಎಸ್‌ಜಿಪಿಸಿ ಸಿಬ್ಬಂದಿ ಮತ್ತು ಮಧ್ಯಪ್ರವೇಶಿಸಲು ಯತ್ನಿಸಿದ ಭಕ್ತರ ಮೇಲೆ ಹಲ್ಲೆ ಮಾಡಿದ್ದಾನೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿ ಸರ್ಮೆಲ್ ಸಿಂಗ್, ಆರೋಪಿಯನ್ನು ಹರಿಯಾಣ ನಿವಾಸಿ ಜುಲ್ಫಾನ್ ಎಂದು ಗುರುತಿಸಲಾಗಿದೆ. ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿದ್ದಾರೆ, ಆತ ಕೂಡ ಗಾಯಗೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಹೀಗೆ ಏಕಾಏಕಿ ದಾಳಿ ಮಾಡಲು ಏನು ಕಾರಣ ಎನ್ನುವುದನ್ನು ತಿಳಿಯಲು ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಹಲ್ಲೆ ಮಾಡಿದವರನ್ನು ಬಂಧಿಸಲಾಗಿದ್ದು ಭಕ್ತರು ಆತಂಕಕ್ಕೆ ಒಳಗಾಗದೇ ಸ್ವರ್ಣ ಮಂದಿರಕ್ಕೆ ಭೇಟಿ ನೀಡಬಹುದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಘಟನೆ ಬಗ್ಗೆ ಸಿಖ್ ಸಮುದಾಯ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದೆ, ಎಸ್‌ಜಿಪಿಸಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಕ್ಕೆ ದೂರು ನೀಡಿದೆ. ಈ ಘಟನೆಯಿಂದ ಭಕ್ತರ ಭದ್ರತೆ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಸ್ವರ್ಣ ಮಂದಿರದ ಪ್ರವೇಶದ್ವಾರದಲ್ಲಿ ಶಿರೋಮಣಿ ಅಕಾಲಿ ದಳದ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಮೇಲೆ ವ್ಯಕ್ತಿಯೊಬ್ಬ ಬಂದೂಕಿನಿಂದ ದಾಳಿ ಮಾಡಿದ್ದ.












Click it and Unblock the Notifications