ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಆಪರೇಷನ್ ಕಮಲ' ಭಯ, 44 ಗುಜರಾತ್ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ

By Sachhidananda Acharya
|
Google Oneindia Kannada News

ಅಹಮದಾಬಾದ್/ಬೆಂಗಳೂರು, ಜುಲೈ 28: ರಾಜ್ಯಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿಯ ಆಕ್ರಮಣಕಾರಿ 'ಆಪರೇಷನ್ ಕಮಲ'ಕ್ಕೆ ಬೆದರಿ ಗುಜರಾತಿನ ಅಳಿದುಳಿದ 44 ಕಾಂಗ್ರೆಸ್ ಶಾಸಕರು ಕರ್ನಾಟಕದತ್ತ ಮುಖಮಾಡಿದ್ದಾರೆ. ಈಗಾಗಲೇ ಕಾಂಗ್ರೆಸ್ ಶಾಸಕರು ಅಹಮದಾಬಾದ್ ನಲ್ಲಿ ವಿಮಾನ ಹತ್ತಿದ್ದು ಮಧ್ಯರಾತ್ರಿ ಕರ್ನಾಟಕದಲ್ಲಿ ಬಂದಿಳಿಯಲಿದ್ದಾರೆ.

44 ಶಾಸಕರು ಉಳಿದುಕೊಳ್ಳಲು ಬೆಂಗಳೂರಿನ ಹೊರವಲಯದ ಬಿಡದಿ ಬಳಿಯ 'ಈಗಲ್ಟನ್-ದಿ ಗಾಲ್ಫ್ ರೆಸಾರ್ಟ್'ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕ ಕಾಂಗ್ರೆಸ್ ಸರಕಾರದ ಪ್ರಭಾವಿ ಮಂತ್ರಿ ಡಿ.ಕೆ ಶಿವಕುಮಾರ್ ಗೆ ಈ ಶಾಸಕರ ಮೇಲುಸ್ತುವಾರಿ ನೀಡಲಾಗಿದೆ.

44 Gujarat Congress MLAs leaves for Bengaluru to prevent Joining BJP

ಕಳೆದ ಶುಕ್ರವಾರ ಕಾಂಗ್ರೆಸ್ ಹಿರಿಯ ನಾಯಕ, ಗುಜರಾತ್ ವಿರೋಧ ಪಕ್ಷದ ನಾಯಕ ಶಂಕರ್ ಸಿನ್ಹಾ ವಘೇಲಾ ಕಾಂಗ್ರೆಸ್ ತೊರೆದಿದ್ದರು. ಇದಾದ ಬೆನ್ನಿಗೆ ಅವರ ಪರವಾಗಿದ್ದ 6 ಶಾಸಕರು ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಇದಾದ ನಂತರ ಉಳಿದ ಶಾಸಕರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ತನ್ನ ಎಂಎಲ್ಎಗಳನ್ನು ಕರ್ನಾಟಕದತ್ತ ಕರೆತರಲು ಯೋಜನೆ ರೂಪಿಸಿತ್ತು.

ಈ ಕುರಿತು ಹೇಳಿಕೆ ನೀಡಿರುವ ಗುಜರಾತ್ ಕಾಂಗ್ರೆಸ್ ಶಾಸಕ ಶೈಲೇಶ್ ಪರ್ಮಾರ್, "ಬಿಜೆಪಿಯ ಯೋಜನೆ ಯಶಸ್ವಿಯಾಗಬಾರದು ಎಂಬ ಕಾರಣಕ್ಕೆ ನಾವು 44 ಕಾಂಗ್ರೆಸ್ ಶಾಸಕರು ಗುಜರಾತ್ ಬಿಟ್ಟು ಬೆಂಗಳೂರಿನತ್ತ ಹೊರಟಿದ್ದೇವೆ. ತನ್ನ ಸೋಲನ್ನು ಮುಚ್ಚಿಕೊಳ್ಳಲು ಬಿಜೆಪಿ ಪಕ್ಷದವರು ಕಾಂಗ್ರೆಸ್ ಶಾಸಕರಿಗೆ ಹಣದ ಆಸೆ ತೋರಿಸಿ, ಪೊಲೀಸರಿಂದ ಒತ್ತಡ ಹಾಕಿಸಿ ರಾಜೀನಾಮೆ ಕೊಡಿಸುತ್ತಿದೆ," ಎಂದು ದೂರಿದ್ದಾರೆ.


ಅಮಿತ್ ಶಾ-ಅಹ್ಮದ್ ಪಟೇಲ್ ಫೈಟ್

ಸೋನಿಯಾ ಗಾಂಧಿ ಆಪ್ತ ಕಾರ್ಯದರ್ಶಿ ಅಹ್ಮದ್ ಪಟೇಲ್ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬದ್ಧ ವೈರಿಗಳು. ಈ ಹಿಂದೆ 2010ರಲ್ಲಿ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ಬಂಧಿತರಾಗಿದ್ದರು. ಇದರ ಹಿಂದೆ ಸ್ವತಃ ಅಹ್ಮದ್ ಪಟೇಲ್ ಇದ್ದರು ಎಂದು ಶಾ ಅಂದುಕೊಂಡಿದ್ದಾರೆ. ಇದಕ್ಕಾಗಿ ಸೇಡು ತೀರಿಸಿಕೊಳ್ಳಲು ಶಾ ಕಾದು ಕುಳಿತಿದ್ದರು.

ಇದೀಗ ಬಿಜೆಪಿ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಸರಿಯಾದ ಸಮಯಕ್ಕೆ ಗುಜರಾತ್ ನಿಂದ ಇದೇ ಅಹ್ಮದ್ ಪಟೇಲ್ ಕಾಂಗ್ರೆಸ್ ನಿಂದ ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ಸ್ವತಃ ಅಮಿತ್ ಶಾ, ಸ್ಮೃತಿ ಇರಾನಿ ಹಾಗೂ ನಿನ್ನೆಯಷ್ಟೇ ಬಿಜೆಪಿಗೆ ಸೇರ್ಪಡೆಯಾಗಿರುವ ಬಲ್ವಂತ್ ಸಿನ್ಹಾ ರಜಪೂತ್ ಕಣದಲ್ಲಿದ್ದಾರೆ.

44 Gujarat Congress MLAs leaves for Bengaluru to prevent Joining BJP

ಶಾ ಮತ್ತು ಇರಾನಿ ಗೆಲ್ಲಿಸಲು ಬೇಕಾದಷ್ಟು ಸಂಖ್ಯಾಬಲ ಬಿಜೆಪಿ ಬಳಿಯಲ್ಲಿದೆ. ಅತ್ತ ಅಹ್ಮದ್ ಪಟೇಲ್ ಗೆಲ್ಲಿಸುವಷ್ಟು ಸಂಖ್ಯಾಬಲ ಕಾಂಗ್ರೆಸ್ ಬಳಿಯಲ್ಲೂ ಇದೆ. ಆದರೆ ಗಂಟೆಗೊಂದರಂತೆ ಕಾಂಗ್ರೆಸ್ ವಿಕೆಟ್ ಗಳನ್ನು ಅಮಿತ್ ಶಾ ಉರುಳಿಸುತ್ತಿದ್ದು ಹೇಗಾದರೂ ಮಾಡಿ ಅಹ್ಮದ್ ಪಟೇಲ್ ರನ್ನು ರಾಜ್ಯಸಭೆಗೆ ಕಳುಹಿಸಬಾರದು ಎಂದು ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಈ ಮೂಲಕ ಸೋನಿಯಾ ಆಪ್ತ ಕಾರ್ಯದರ್ಶಿಗೆ ಮುಜುಗರ ತರುವುದು ಶಾ ಯೋಜನೆ.

ಹೀಗಿದ್ದೂ ಶತಾಯ ಗತಾಯ ಅಮಿತ್ ಶಾ ಮುಂದೆ ತಲೆ ಬಗ್ಗಿಸಬಾರದು ಎಂದು ಅಹ್ಮದ್ ಪಟೇಲ್ ಕೂಡಾ ಪಣ ತೊಟ್ಟಿದ್ದು, ಪರಿಣಾಮ ಶಾಸಕರನ್ನು ಕರ್ನಾಟಕಕ್ಕೆ ಕಳುಹಿಸಿದ್ದಾರೆ.

ಇಷ್ಟೆಲ್ಲಾ ಆಗಿಯೂ ಚುನಾವಣೆಯಲ್ಲಿ ಏನಾಗಲಿದೆ ಎಂಬುದಕ್ಕೆ ಆಗಸ್ಟ್ 8ರಂದು ಗುಜರಾತಿನಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆ ಉತ್ತರ ನೀಡಲಿದೆ. ಕಾಂಗ್ರೆಸ್ ನಲ್ಲಿ ಶಂಕರ್ ಸಿನ್ಹಾ ವಘೇಲಾ ಹಿಂಬಾಲಕರು ಸುಮಾರು ಜನರಿದ್ದಾರೆ. ಅವರೆಲ್ಲಾ ಕೈಕೊಟ್ಟರೆ ಅಹ್ಮದ್ ಪಟೇಲ್ ಸೋಲು ಕಟ್ಟಿಟ್ಟ ಬುತ್ತಿ.

ಕ್ರಾಸ್ ವೋಟಿಂಗ್ ತಡೆಯುವುದೇ ಸದ್ಯ ಕಾಂಗ್ರೆಸ್ ನ ಪ್ರಮುಖ ಚಿಂತೆಯಾಗಿದೆ. ಕರ್ನಾಟಕದ ರೆಸಾರ್ಟ್ ರಾಜಕೀಯ ಇದನ್ನು ತಡೆಯುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.

English summary
44 Gujarat Congress MLA’s leave for Bengaluru to prevent them from Joining BJP. Recently 6 Gujarat Congress MLA’s joined BJP after opposition leader Shankersinh Vaghela ‘s resignation to the Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X