400 ಲೀಟರ್ ಹಾಲು, ₹5 ಲಕ್ಷ ನಾಣ್ಯಗಳಿಂದ ಅಭ್ಯರ್ಥಿಗೆ ಅಭಿಷೇಕ, ವಿಡಿಯೋ ವೈರಲ್
ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ದೇವರ ಮೂರ್ತಿಗೆ ಕ್ಷೀರಾಭಿಷೇಕ ಮಾಡಲಾಗುತ್ತೆ. ಇನ್ನು ಕೆಲ ಅಂದಾಭಿಮಾನಿಗಳು ತಮ್ಮ ನೆಚ್ಚಿನ ನಟರ ಕಟೌಟ್‌ಗಳಿಗೆ ಹಾಲಿನಿಂದ ಅಭಿಷೇಕ ಮಾಡುವುದನ್ನು ನೋಡಿರುತ್ತೀರಿ. ಈಗ ಇದೇ ಪ್ರವೃತ್ತಿ ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟಿದೆ. ಚುನಾವಣೆಗೆ ನಿಂತಿರುವ ಅಭ್ಯರ್ಥಿಯೊಬ್ಬರಿಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 400 ಲೀಟರ್ ಹಾಲಿನಿಂದ ಅಭಿಷೇಕ ಮಾಡಲಾಗಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಬಿಹಾರ ವಿಧಾನಸಭೆ ಚುನಾವಣಾ ರಂಗೇರಿದ್ದು, ಭೋಜ್‌ಪುರಿ ಗಾಯಕ ಮತ್ತು ಚಲನಚಿತ್ರ ನಟ ಖೇಸರಿ ಲಾಲ್ ಯಾದವ್ ಆರ್‌ಜೆಡಿ ಅಭ್ಯರ್ಥಿಯಾಗಿ ಕಣಲಿದ್ದಾರೆ. ಛಪ್ರಾ (ಸರನ್) ಕ್ಷೇತ್ರದ ಆರ್‌ಜೆಡಿ ಅಭ್ಯರ್ಥಿ ಖೇಸರಿ ಲಾಲ್ ಯಾದವ್ ಶುಕ್ರವಾರ ಪ್ರಚಾರಕ್ಕೆ ಹೋದಾಗ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಆದರೆ ಇದು ಹೂಮಾಲೆ ಅಥವಾ ಹೂಗುಚ್ಛಗಳೊಂದಿಗೆ ಅಲ್ಲ. ಬದಲಾಗಿ ಹಲವಾರು ಬಕೆಟ್ ಹಾಲಿನೊಂದಿಗೆ ಸ್ನಾನ ಮಾಡಿಸಿದ್ದಾರೆ.

5 ಲಕ್ಷ ನಾಣ್ಯಗಳಿಂದ ತುಲಾಭಾರ
ಈ ವೈರಲ್ ಆಗಿರುವ ವಿಡಿಯೋದಲ್ಲಿ, ಆರ್‌ಜೆಡಿ ಅಭ್ಯರ್ಥಿ ಖೇಸರಿ ಲಾಲ್ ಯಾದವ್ ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಸುಮಾರು 12 ಬಕೆಟ್‌ಗಳನ್ನು ಹಾಕಬಹುದಾದ ದೊಡ್ಡ ಪಾತ್ರೆಯಿಂದ ಅವರ ಮೇಲೆ ಹಾಲು ಸುರಿಯುತ್ತಿರುವುದನ್ನು ಕಾಣಬಹುದು. ಕೇವಲ ಹಾಲು ಮಾತ್ರವಲ್ಲ, ನಂತರ ಅವರನ್ನು ಬರೋಬ್ಬರಿ 5 ಲಕ್ಷ ರೂಪಾಯಿಯಷ್ಟು ಮೌಲ್ಯದ ನಾಣ್ಯಗಳಿಂದ ತುಲಾಭಾರ ಮಾಡಲಾಗಿದೆ.
ಬಿಹಾರದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಿಂಚುತ್ತಿರುವ ಭೋಜ್‌ಪುರಿ ನಟ ಖೇಸರೀ ಲಾಲ್ ಯಾದವ್‌ನ ಹೆಸರು ತೀವ್ರವಾಗಿ ಚರ್ಚೆಯಲ್ಲಿದೆ. ರಾಷ್ಟ್ರೀಯ ಜನತಾ ದಳದಿಂದ (ಆರ್‌ಜೆಡಿ) ಛಪರ ಕ್ಷೇತ್ರದಿಂದ ಅವರು ಸ್ಪರ್ಧಿಸುತ್ತಿದ್ದಾರೆ. ಬಿಳಿ ಕುರ್ತಾ ಮತ್ತು ಹಸಿರು ಬಣ್ಣದ ವಸ್ತ್ರದಲ್ಲಿದ್ದರು. ಈ ವೇಳೆ ಅವರ ಬೆಂಬಲಿಗರು ಹರ್ಷೋದ್ಗಾರ ಮಾಡಿ ಜೈಕಾರ ಹಾಕಿದರು. ಖೇಸರಿ ಅವರ ಮೇಲೆ ಸುಮಾರು 400 ಲೀಟರ್ ಹಾಲು ಸುರಿಯಲಾಗಿದೆ ಎಂದು ವರದಿಯಾಗಿದೆ.

ಖೇಸರಿ ನಮ್ಮ ಸಹೋದರ. ನಾವು ಅವರಿಗೆ ಹಾಲಿನ ಸ್ನಾನ ಮಾಡಿದ ರೀತಿಯಲ್ಲಿಯೇ, ಅವರು ಛಪ್ರಾ ಜನರಿಗೆ ಸಹ ಮಾಡುತ್ತಾರೆ ಎಂದು ನಮಗೆ ತಿಳಿದಿದೆ. ಅವರು ಅಧಿಕಾರಕ್ಕೆ ಬಂದರೆ ನಾವು ಅಭಿವೃದ್ಧಿ ಹೊಂದುತ್ತೇವೆ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಇದರು ಜನರ ಪ್ರೀತಿ ಮತ್ತು ಭಾವನೆ ಎಂದು ಆರ್‌ಜೆಡಿ ರಾಜ್ಯ ವಕ್ತಾರ ಚಿತ್ರಂಜನ್ ಗಗನ್ ಹೇಳಿದ್ದಾರೆ. ಕೆಲವರು ಇಂತಹ ಉತ್ತಮ ಹಾಲನ್ನು ಹಾಳು ಮಾಡಬಾರದಿತ್ತು ಎಂದು ಟೀಕೆಗಳು ಕೇಳಿಬಂದಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಅವರು, ಈ ಹಾಲನ್ನು ಮಾರುಕಟ್ಟೆಯಿಂದ ಖರೀದಿಸಿಲ್ಲ. ಬದಲಾಗಿ, ರೈತರು ಅದನ್ನು ತಾವೇ ಸಂಗ್ರಹಿಸಿ ಅಭಿಷೇಕ ಮಾಡಿದ್ದಾರೆ ಎಂದು ಹೇಳಿದ್ದಾರೆ.












Click it and Unblock the Notifications