Bihar: ದುರ್ಗಾಪೂಜಾ ವೇಳೆ ನೂಕುನುಗ್ಗಲು, ಕಾಲ್ತುಳಿತ- 5 ವರ್ಷದ ಬಾಲಕ ಸೇರಿದಂತೆ 3 ಸಾವು!
ಪಾಟ್ನಾ ಅಕ್ಟೋಬರ್ 24: ದುರ್ಗಾಪೂಜೆಯ ಸಮಯದಲ್ಲಿ ಕಾಲ್ತುಳಿತದಿಂದಾಗಿ 5 ವರ್ಷದ ಬಾಲಕ ಸೇರಿದಂತೆ ಮೂವರು ಸಾವನ್ನಪ್ಪಿದ ದುರ್ಘಟನೆ ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ. ಸೋಮವಾರ ತಡರಾತ್ರಿ ರಾಜ ದಳದ ಬಡಾವಣೆಯ ದುರ್ಗಾಪೂಜೆಯ ಮಂಟಪದಲ್ಲಿ ಈ ಘಟನೆ ನಡೆದಿದೆ.
ದುರ್ಗಾ ನವಮಿಯಂದು ಉತ್ಸವದಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲಿ ಸೇರಿದ್ದರು. ಈ ವೇಳೆ ನೂಕುನುಗ್ಗಲು ಏರ್ಪಟ್ಟು ಐದು ವರ್ಷದ ಬಾಲಕ ಮತ್ತು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಮಾತ್ರವಲ್ಲದೆ ಹಲವರು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ.

ನವರಾತ್ರಿಯ ಕೊನೆಯ ದಿನ ಅಂದರೆ ನವಮಿಯಂದು ದೇವಿಯ ದೇವಾಲಯಗಳಲ್ಲಿ ದುರ್ಗಾಪೂಜೆಯನ್ನು ವೀಕ್ಷಿಸಲು ಅಪಾರ ಜನಸ್ತೋಮ ಗೋಪಾಲ್‌ಗಂಜ್‌ನ ದುರ್ಗಾಪೂಜಾ ಮಂಟಪದಲ್ಲಿ ನೆರದಿತ್ತು. ಈ ವೇಳೆ ಕಾಲ್ತುಳಿತದಿಂದ ಮೂವರು ಸಾವನ್ನಪ್ಪಿದವರಲ್ಲಿ ಇಬ್ಬರು ಮಹಿಳೆಯರು ಮತ್ತು ಒಂದು ಮಗು ಸೇರಿದೆ ಎಂದು ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಿಕ್ಕಿರಿದ ಸಂಭ್ರಮದ ನಡುವೆ ಮಗು ಕೆಳಗೆ ಬಿದ್ದಿದೆ. ಅವನನ್ನು ಉಳಿಸುವ ಪ್ರಯತ್ನದಲ್ಲಿ ಇಬ್ಬರು ಮಹಿಳೆಯರು ಸಹ ಕೆಳಗೆ ಬಿದ್ದಿದ್ದಾರೆ. ಜನ ಸಾಗರದ ನಡುವೆ ಎದ್ದೇಳಲು ಸಾಧ್ಯವಾಗದೆ ಅವರು ದುರಂತ ಸಾವು ಕಂಡಿದ್ದಾರೆ.
Bihar | Three people including two women and a child were killed during a stampede in a puja pandal in Gopalganj. The magistrate and police force are present at the spot: Gopalganj Police pic.twitter.com/Bc5YM0RGtZ
— ANI (@ANI) October 23, 2023
ಈ ಬಗ್ಗೆ ಗೋಪಾಲ್‌ಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ನವಲ್ ಕಿಶೋರ್ ಚೌಧರಿ ಅವರು ಮಾಹಿತಿ ನೀಡಿದರು. 'ದುರ್ಗಾ ನವಮಿಯಾಗಿರುವುದರಿಂದ ರಾಜ್ಯದಲ್ಲಿ ಹಲವಾರು ಪಂಗಡಗಳು ಸೇರಿ ಅದ್ದೂರಿಯಾಗಿ ದುರ್ಗಾ ಪೂಜೆಯನ್ನು ನೆರವೇರಿಸುತ್ತಾರೆ. ಜನಜಂಗುಳಿಯಿಂದಾಗಿ ಮಗುವೊಂದು ಬಿದ್ದಿದ್ದು, ಮಗುವನ್ನು ರಕ್ಷಿಸಲು ಯತ್ನಿಸಿದ ಇಬ್ಬರು ಮಹಿಳೆಯರು ಕೂಡ ಬಿದ್ದು ಮೇಲೇಳಲಾಗದೆ ಸಾವನ್ನಪ್ಪಿದ್ದಾರೆ. ಅವರನ್ನು ಕೇವಲ 200 ಮೀಟರ್ ದೂರದಲ್ಲಿರುವ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟಾಗಲೇ ಅವರ ಪ್ರಾಣಬಿಟ್ಟಿದ್ದರು' ಎಂದು ಹೇಳಿದರು.

ನಾವು ಸ್ಥಳದಲ್ಲಿಯೇ ಇದ್ದೇವೆ ಮತ್ತು ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಚೌಧರಿ ಸುದ್ದಿಗಾರರಿಗೆ ತಿಳಿಸಿದರು. ಮಗು ಕೆಳಗೆ ಬಿದ್ದಾಗ ಪ್ರಸಾದ ಸ್ವೀಕರಿಸಲು ಭಕ್ತರು ಸಾಲುಗಟ್ಟಿ ನಿಂತಿದ್ದರು ಮತ್ತು ಇಬ್ಬರು ವೃದ್ಧ ಮಹಿಳೆಯರು ಆತನನ್ನು ನಜ್ಜುಗುಜ್ಜಾಗದಂತೆ ರಕ್ಷಿಸಲು ಕೆಳಗೆ ಬಾಗಿ ನಿಂತಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಸ್ವರ್ಣ ಪ್ರಭಾತ್ ತಿಳಿಸಿದ್ದಾರೆ.
ಈ ಗಲಾಟೆಯಲ್ಲಿ 13 ಮಹಿಳೆಯರು ಮತ್ತು ಮಗುವಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಮಗು ಮತ್ತು ಇಬ್ಬರು ವೃದ್ಧ ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಉಳಿದವರು ಅಪಾಯದಿಂದ ಪಾರಾಗಿದ್ದಾರೆ ಎಂದು ಎಸ್ಪಿ ಹೇಳಿದರು. ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಘಟನೆಯ ಸ್ಥಳದ ಸುತ್ತಮುತ್ತಲಿನ ಪ್ರದೇಶವನ್ನು ಮುಚ್ಚಲಾಗಿದೆ ಎಂದು ಅವರು ಹೇಳಿದರು.












Click it and Unblock the Notifications