Pahalgam Terrorist Attack: ಅಟ್ಟಾರಿ ಗಡಿ ಮೂಲಕ 272 ಪಾಕಿಸ್ತಾನಿಯರು ವಾಪಸ್
ನವದೆಹಲಿ, ಏಪ್ರಿಲ್ 28: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿದೆ. ಪಾಕಿಸ್ತಾನ ವಿರುದ್ಧ ಹಲವು ರಾಜತಾಂತ್ರಿಕ ಕ್ರಮಗಳನ್ನು ಭಾರತ ಘೋಷಣೆ ಮಾಡಿದೆ. ಇದರಲ್ಲಿ ಪ್ರಮುಖವಾಗಿ ಸಾರ್ಕ್ ವೀಸಾ ಅಡಿ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನದ ಪ್ರಜೆಗಳು ದೇಶ ಬಿಟ್ಟು ತೆರಳಲು ಗಡುವು ನೀಡಿದೆ. ಪಂಜಾಬ್‌ನ ಅಟ್ಟಾರಿ-ವಾಘಾ ಗಡಿ ಮೂಲಕ ಪಾಕಿಸ್ತಾನದ ಪ್ರಜೆಗಳು ವಾಪಸ್ ಆಗುತ್ತಿದ್ದು, ಸಂಬಂಧಿಕರು ಅವರನ್ನು ಕಣ್ಣೀರಿನ ಮೂಲಕ ಬೀಳ್ಕೊಡುತ್ತಿದ್ದಾರೆ.
ಮಾಹಿತಿಗಳ ಪ್ರಕಾರ ಭಾನುವಾರ ಅಟ್ಟಾರಿ-ವಾಘಾ ಗಡಿ ಮೂಲಕ ಸಾರ್ಕ್ ವೀಸಾ ಅಡಿ ಭಾರತಕ್ಕೆ ಆಗಮಿಸಿದ್ದ ಪಾಕಿಸ್ತಾನದ 272 ಪ್ರಜೆಗಳು ದೇಶ ಬಿಟ್ಟು ಹೋಗಿದ್ದಾರೆ. ಸಾರ್ಕ್ ವೀಸಾ ಅಡಿ ಭಾರತಕ್ಕೆ ಆಗಮಿಸಿದ ಪಾಕಿಸ್ತಾನ ಪ್ರಜೆಗಳು ದೇಶ ಬಿಟ್ಟು ತೆರಳಲು ವಿಧಿಸಿದ್ದ ಗಡುವು ಅಂತ್ಯಗೊಂಡಿದೆ, ನೂರಾರು ಮಂದಿ ಪಾಕಿಸ್ತಾನಕ್ಕೆ ವಾಪಸ್ ಹೋಗಿದ್ದಾರೆ.

ಭಾರತ ಪಾಕಿಸ್ತಾನದಲ್ಲಿರುವ ರಾಜತಾಂತ್ರಿಕ ಅಧಿಕಾರಿಗಳ ಸಂಖ್ಯೆಯನ್ನು ಸಹ ಕಡಿತ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿತ್ತು. ಪಾಕಿಸ್ತಾನದಿಂದ 629 ಭಾರತೀಯರು, 13 ರಾಜತಾಂತ್ರಿಕ ಅಧಿಕಾರಿಗಳು ಇದುವರೆಗೂ ಪಂಜಾಬ್‌ನ ಅಂತರಾಷ್ಟ್ರೀಯ ಗಡಿ ಮೂಲಕ ದೇಶಕ್ಕೆ ವಾಪಸ್ ಆಗಿದ್ದಾರೆ.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದರು. ಈ ದಾಳಿ ಬಳಿಕ ಭಾರತ ಸಾರ್ಕ್ ವೀಸಾ ಅಡಿ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನದ ಪ್ರಜೆಗಳು ದೇಶ ಬಿಟ್ಟು ಹೋಗಬೇಕು ಎಂದು ನೋಟಿಸ್ ನೀಡಿತ್ತು.
ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಾರ್ಕ್ ವೀಸಾ ಅಡಿ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನದ ಪ್ರಜೆಗಳು ಭಾರತ ಬಿಟ್ಟು ಹೋಗಲು ಏಪ್ರಿಲ್ 26ರ ಗಡುವು ನೀಡಿತ್ತು. ಅಲ್ಲದೇ ಪಾಕಿಸ್ತಾನದ ಜನರು ವೈದ್ಯಕೀಯ ವೀಸಾ ಅಡಿ ದೇಶಕ್ಕೆ ಬಂದಿದ್ದರೆ ದೇಶ ತೊರೆಯಲು ಏಪ್ರಿಲ್ 29ರ ಗಡುವು ನೀಡಲಾಗಿದೆ.
ವಿವಿಧ ಕಾರಣಕ್ಕೆ ಭಾರತಕ್ಕೆ ಆಗಮಿಸಿದ್ದ ಪಾಕಿಸ್ತಾನದ ಪ್ರಜೆಗಳು ಅಟ್ಟಾರಿ-ವಾಘಾ ಗಡಿ ಮೂಲಕ ಪಾಕಿಸ್ತಾನಕ್ಕೆ ವಾಪಸ್ ಹೋಗುತ್ತಿದ್ದಾರೆ. ಸಾರ್ಕ್ ವೀಸಾ ಅಡಿ ಭಾರತಕ್ಕೆ ಬಂದವರು 1 ವರ್ಷದ ತನಕ ಇಲ್ಲಿ ವಾಸ್ತವ್ಯ ಹೂಡಲು ಅವಕಾಶವಿದೆ. ಆದರೆ ಈಗ ಎರಡೂ ದೇಶಗಳ ನಡುವಿನ ಸಂಬಂಧ ಹಳಸಿರುವ ಕಾರಣಕ್ಕೆ ಸಾರ್ಕ್ ವೀಸಾ ಅಡಿ ಬಂದವರು ತಕ್ಷಣ ವಾಪಸ್ ಆಗಬೇಕು ಎಂದು ಭಾರತ ಸರ್ಕಾರ ಸೂಚನೆ ಕೊಟ್ಟಿದೆ.
9 ವರ್ಷದ ಬಳಿಕ ಭಾರತಕ್ಕೆ ಬಂದಿದ್ದೆವು: ಅಟ್ಟಾರಿ-ವಾಘಾ ಗಡಿ ಬಳಿ ಮಾತನಾಡಿದ ಸರಿತಾ, "ಏಪ್ರಿಲ್ 29ರಂದು ನಡೆಯುವ ವಿವಾಹ ಸಮಾರಂಭಕ್ಕಾಗಿ ನಮ್ಮ ಕುಟುಂಬ ಭಾರತಕ್ಕೆ ಬಂದಿತ್ತು. 9 ವರ್ಷಗಳ ಬಳಿಕ ನಾವು ದೇಶಕ್ಕೆ ಬಂದಿದ್ದೆವು" ಎಂದು ಹೇಳಿದರು.
"ನಮ್ಮ ತಾಯಿ ಭಾರತೀಯ ನಿವಾಸಿ ಅವರು ನಮ್ಮೊಂದಿಗೆ ಪಾಕಿಸ್ತಾನಕ್ಕೆ ಬರಲು ಅನುಮತಿ ನೀಡಿಲ್ಲ" ಎಂದು ಸರಿತಾ ಕಣ್ಣೀರು ಹಾಕಿದರು. ಸರಿತಾ ಅವರ ತಂದೆ, ಸಹೋದರ ಪಾಕಿಸ್ತಾನ ಮೂಲದವರು. ಆದರೆ ತಾಯಿ ಭಾರತದವರು.
ಜೈಸಲ್ಮೇರ್‌ನ ವ್ಯಕ್ತಿಯೊಬ್ಬರು ಪಿಟಿಐ ಜೊತೆ ಮಾತನಾಡಿ, "ಮಾವ, ಚಿಕ್ಕಮ್ಮ ಮತ್ತು ಮಕ್ಕಳನ್ನು ನೋಡಲು 36 ವರ್ಷಗಳ ಬಳಿಕ ಭಾರತಕ್ಕೆ ಬಂದಿದ್ದೆವು. ಆದರೆ ಇಲ್ಲಿ ಇರಲು ಇನ್ನೂ ಸಮಯವಿತ್ತು. ಆದರೆ ಈಗ ಅನಿವಾರ್ಯವಾಗಿ ವಾಪಸ್ ಹೋಗಬೇಕಾಗಿದೆ" ಎಂದು ಹೇಳಿದರು.
ಪಾಕಿಸ್ತಾನ ಪ್ರಜೆಗಳು ದೇಶ ಬಿಟ್ಟು ಹೋಗುತ್ತಿರುವ ಕಾರಣ ಅಟ್ಟಾರಿ-ವಾಘಾ ಗಡಿ ಬಳಿ ಸಾಲು ಸಾಲು ವಾಹನಗಳು ಕಂಡುಬರುತ್ತಿವೆ. ಎಲ್ಲರ ಪಾಸ್‌ಪೋರ್ಟ್, ವೀಸಾ ಪರಿಶೀಲನೆ ಮಾಡಿದ ಬಳಿಕ ಅವರನ್ನು ವಾಪಸ್ ತೆರಳಲು ಅವಕಾಶ ಮಾಡಿಕೊಡಲಾಗುತ್ತಿದೆ.












Click it and Unblock the Notifications