ಮುಂಗಾರು ಋತುವಿನಲ್ಲಿ ಮೃತಪಟ್ಟವರು 2,391 ಜನ
ನವದೆಹಲಿ, ನವೆಂಬರ್ 19 : ಈ ವರ್ಷದ ಮುಂಗಾರು ಋತುವಿನಲ್ಲಿ 2,391 ಜನರು ಮೃತಪಟ್ಟಿದ್ದಾರೆ. 2019ನೇ ಸಾಲಿನ ಮುಂಗಾರು ಋತುವಿನಲ್ಲಿ ದೇಶದಲ್ಲಿ ವಾಡಿಕೆಗಿಂತ ಶೇ 10ರಷ್ಟು ಹೆಚ್ಚು ಮಳೆಯಾಗಿದೆ.
ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಮಂಗಳವಾರ ಲೋಕಸಭೆಗೆ ಲಿಖಿತ ಉತ್ತರ ನೀಡಿದರು. ಈ ವರ್ಷದ ಮುಂಗಾರು ಋತುವಿನಲ್ಲಿ 2,391ಜನರು ಮೃತಪಟ್ಟಿದ್ದಾರೆ. 8 ಲಕ್ಷ ಮನೆಗಳಿಗೆ ಹಾನಿಯಾಗಿದೆ ಎಂದು ಹೇಳಿದರು.
ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಳೆಯಾದಾಗ 176 ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜನೆ ಮಾಡಲಾಗಿತ್ತು. ಈ ತಂಡಗಳು 98,962 ಜನರನ್ನು ರಕ್ಷಣೆ ಮಾಡಿವೆ. 23,869 ಜನರಿಗೆ ತುರ್ತು ವೈದ್ಯಕೀಯ ನೆರವು ನೀಡಲಾಗಿದೆ.

"15,729 ಪ್ರಾಣಿಗಳು ಮೃತಪಟ್ಟಿವೆ. 63.975 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಪ್ರವಾಹದಿಂದಾಗಿ ಹಾನಿಯಾಗಿದೆ" ಎಂದು ನಿತ್ಯಾನಂದ ರೈ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ.
ಜೂನ್ 1 ರಿಂದ ಸೆಪ್ಟೆಂಬರ್ 30ರ ತನಕ ದೇಶದಲ್ಲಿ ಮುಂಗಾರು ಋತು ಚಾಲ್ತಿಯಲ್ಲಿ ಇರುತ್ತದೆ. ಈ ಅವಧಿಯಲ್ಲಿ ಸುರಿಯುವ ಮಳೆಯ ಪ್ರಮಾಣದ ಮೇಲೆ ದೇಶದಲ್ಲಿ ಎಷ್ಟು ಮಳೆಯಾಗಿದೆ ಎಂದು ಲೆಕ್ಕಾಚಾರ ಹಾಕಲಾಗುತ್ತದೆ.
ಈ ವರ್ಷದ ಮುಂಗಾರು ಋತುವಿನಲ್ಲಿ ದೇಶದಲ್ಲಿ ಶೇ 10ರಷ್ಟು ಹೆಚ್ಚು ಮಳೆಯಾಗಿದೆ. ದೇಶದ 4 ರಾಜ್ಯಗಳಲ್ಲಿ ಮಳೆಯ ಕೊರತೆ ಉಂಟಾಗಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ಹೇಳಿತ್ತು.
ಮುಂಗಾರು ಋತುವಿನಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಅತ್ಯಧಿಕ ಮಳೆಯಾಗಿದೆ. ವಾಡಿಕೆಗಿಂತ ಶೇ 32ರಷ್ಟು ಮಳೆಯಾಗಿತ್ತು. 11 ರಾಜ್ಯದಲ್ಲಿ ಹೆಚ್ಚು ಮಳೆಯಾಗಿದೆ. ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ದೆಹಲಿ, ಮಣಿಪುರದಲ್ಲಿ ಮಳೆಯ ಕೊರತೆ ಉಂಟಾಗಿತ್ತು.












Click it and Unblock the Notifications