'ರೆಮಲ್' ಚಂಡಮಾರುತಕ್ಕೆ ಸಿಲುಕಿದ 30ಲಕ್ಷಕ್ಕೂ ಹೆಚ್ಚು ಮಂದಿ: ಸಾವು-ನೋವು, ಮನೆಗಳ ಹಾನಿ, ಅಂಕಿ-ಸಂಖ್ಯೆ ಅಪ್ಡೇಟ್ಸ್
ಬೆಂಗಳೂರು, ಮೇ 28: ಪ್ರಸಕ್ತ 2024 ವರ್ಷ ಮೊದಲ ಚಂಡಮಾರುತವಾದ 'ರೆಮಲ್' ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಕರಾವಳಿಗೆ ಭಾನುವಾರ ರಾತ್ರಿ ಅಪ್ಪಳಿಸಿ ಸೋಮವಾರ ತೀವ್ರತೆ ಕಳೆದುಕೊಂಡಿದೆ. ಹೀಗಿದ್ದರೂ ಈ ರೆಮಲ್ ಮಾಡಿದ ಸಾವು, ನೋವು ಅಷ್ಟಿಷ್ಟಲ್ಲ. ಅಪ್ಪಳಿದ ಕೆಲವೇ ಘಂಟೆಗಳಲ್ಲಿ ಸಾವಿರಾರು ಮನೆಗಳಿಗೆ ಹಾನಿ ಮಾಡಿದೆ. ಲಕ್ಷಾಂತರ ಜನರನ್ನು ಸ್ಥಳಾಂತರ ಮಾಡಲಾಗಿದೆ.
ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ಈ 'ರೆಮಲ್' ವೈಪರಿತ್ಯ ಪ್ರತಿ ಗಂಟೆಗೆ 135 ಕಿಲೋ ಮೀಟರ್ ವೇಗದಲ್ಲಿ ಬಂದು ಭೂಮಿಗೆ ಅಪ್ಪಳಿಸಿದೆ. ಇದರಿಂದ ಸುಮಾರು 30,000 ಮನೆಗಳಿಗೆ ಹಾನಿ ಉಂಟಾಗಿದೆ. ಜನ ಜೀವನ, ಸಂಚಾರ ಅಸ್ತವೆಸ್ತವಾಗಿದೆ. ಬದುಕು ಮತ್ತೆ ಸಹಜ ಸ್ಥಿತಿಗೆ ಬರಲು ವಾರಗಳೇ ಬೇಕಾಗಬಹುದು ಎಂದು ಹೇಳಲಾಗುತ್ತಿದೆ.

ಕಳೆದ ಎರಡು ವಾರಗಳ ಹಿಂದೆ ಬಂಗಾಳಕೊಲ್ಲಿ, ಅಂಡಮಾನ್ ಪ್ರದೇಶದಲ್ಲಿ ಸಣ್ಣ ಪ್ರಮಾಣದಲ್ಲಿದ್ದ ಸುಳಿಗಾಳಿ/ಸ್ಟ್ರಫ್ ನಂತರ ಚಂಡಮಾರುತ ಪರಿಚಲನೆಯಾಗಿ, ಬಳಿಕ ವಾಯುಭಾರ ಕುಸಿತವಾಗಿ ನಂತರ ಕಳೆದ ಶುಕ್ರವಾರ ಸ್ಪಷ್ಟ ಚಂಡಮಾರುತವಾಗಿ 'ರೆಮಲ್' ಆಗಿ ಆರ್ಭಟ ಶುರು ಮಾಡಿತು.
22 ಮಂದಿ ಸಾವು, ಮನೆಗಳಿಗೆ ಹಾನಿ
ಎರಡು ರಾಜ್ಯಗಳ ಕರಾವಳಿ ಭಾಗಕ್ಕೆ ವರ್ಷದ ಮೊದಲ ಚಂಡಮಾರುತ ಬಂದಪ್ಪಳಿಸಿದ್ದರ ಪರಿಣಾಮವಾಗಿ 22 ಜನರು ಮೃತಪಟ್ಟಿದ್ದಾರೆ. ಚಂಡಮಾರುತ ಸೃಷ್ಟಿಸಿ ಬಿರುಗಾಳಿ ಹಾಗೂ ಭಾರೀ ಮಳೆ ಸಿಲುಕಿ 06 ಮಂದಿ ಮೃತಪಟ್ಟಿದ್ದಾರೆ. ಇದೇ ಕಾರಣಕ್ಕಾಗಿ ಬಾಂಗ್ಲಾದೇಶದ 16 ಮಂದಿ ಜೀವ ಬಿಟ್ಟಿದ್ದಾರೆ. ಅವರ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ. ಗಾಳಿ ಮಳೆಗೆ ಮನೆಗಳನ್ನು ಕಳೆದುಕೊಂಡು ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ.
ಸಂಭವನೀಯ ಅವಘಡ ಊಹಿಸಿ ಸರ್ಕಾರ ಮತ್ತು ವಿಪತ್ತು ನಿರ್ವಹಣಾ ತಂಡವು ಎರಡು ರಾಜ್ಯಗಳ ಕರಾವಳಿ ಭಾಗದ ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಗಿದೆ.

ಸಾವಿರಾರು ಮನೆಗಳಿಗೆ ತೀವ್ರ ಹಾನಿ: ಅಂಕಿ ಸಂಖ್ಯೆ
ಪಶ್ಚಿಮ ಬಂಗಾಳದ ಹಲವಡೆ 30 ಸೆಂಟಿ ಮೀಟರ್ ಮಳೆ ಆಗಿದೆ. ಇಲ್ಲಿ ಸುಮಾರು 2500 ಮನೆಗಳು ಪೂರ್ಣವಾಗಿ ಹಾನಿಯಾಗಿವೆ. 27,5000 ಮನೆಗಳು ಭಾಗಶಃ ಹಾನಿಗೀಡಾಗಿವೆ. 2500 ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ವಿದ್ಯುತ್ ಕಂಬ ಕುಸಿದು ಬಿದ್ದು, ಜನರ ಬದುಕು ಇಲ್ಲಿ ಅಕ್ಷರಶಃ ನರಕದಂತಾಗಿದೆ. ಸದ್ಯ ಇದು ಪ್ರಾಥಮಿಕ ಮಾಹಿತಿ ಆಗಿದ್ದು, ನಿಖರ ಮಾಹಿತಿ ಅಧಿಕಾರಿಗಳ ಸ್ಥಳ ಪರಿಶೀಲನೆ ವರದಿ ಪ್ರಕಟ ಬಳಿಕ ತಿಳಿಯಲಿದೆ.
ಚಂಡಮಾರುತಕ್ಕೆ ಸಿಲುಕಿದ 30ಲಕ್ಷಕ್ಕೂ ಹೆಚ್ಚು ಮಂದಿ
ಇನ್ನೂ ಬಾಂಗ್ಲಾದೇಶದಲ್ಲಿ ಸಹ ಸಾವು ನೋವು ಸಂಭವಿಸಿದೆ. ಅಗತ್ಯ ಎಚ್ಚರಿಕೆವಹಿಸಿದ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. 30ಲಕ್ಷಕ್ಕೂ ಹೆಚ್ಚು ಮಂದಿ ಚಂಡಮಾರುತದ ಪ್ರಭಾವಕ್ಕೆ ಒಳಗಾಗಿದ್ದಾರೆ. ಸುಮಾರು 15 ಲಕ್ಷ ಜನರು ವಿದ್ಯುತ್ ಇಲ್ಲದೇ ಕತ್ತಲೆಯಲ್ಲಿ ಜೀವನ ಕಳೆದಿದ್ದಾರೆ.
'ರೆಮಲ್' ಎಂದರೆ 'ಮರಳು' ಎಂದರ್ಥ
ಗಾಳಿಯ ವೇಗ ಹೆಚ್ಚಿದ್ದರಿಂದ ಸಮುದ್ರದಲ್ಲಿ ಸುಮಾರು ಆರು ಅಡಿವರೆಗೂ ಎತ್ತರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಇನ್ನೂ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೂ ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಪ್ರತಿ ಚಂಡಮಾರುತಕ್ಕೆ ಒಂದೊಂದು ದೇಶಗಳು ಹೆಸರಿಡುವ ಪರಿಪಾಠ ಇದೆ. ಈ ವರ್ಷದ ಮೊದಲ ಚಂಡಮಾರುತಕ್ಕೆ ಒಮಾನ್ ದೇಶ 'ರೆಮಲ್' ಚಂಡಮಾರುತ ಎಂದು ಹೆಸರಿಟ್ಟಿದೆ. 'ರೆಮಲ್' ಎಂದರೆ 'ಮರಳು' ಎಂಬರ್ಥ ಕೊಡುತ್ತದೆ.












Click it and Unblock the Notifications