2026ರಲ್ಲಿ ಹೊಸ ವಂದೇ ಭಾರತ್ ಸ್ಲೀಪರ್ ರೈಲು ಹಲವು ಮಹತ್ವದ ಬದಲಾವಣೆ
ನವ ದೆಹಲಿ: 2025ನೇ ವರ್ಷ ಮುಕ್ತಾಯವಾಗುತ್ತಿದ್ದು, 2026ನೇ ವರ್ಷ ಪ್ರಾರಂಭವಾಗುವುದಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ರೀತಿ ಇರುವಾಗಲೇ ರೈಲ್ವೆ ವಲಯದಲ್ಲಿ ಹಲವು ಮಹತ್ವದ ಬದಲಾವಣೆಗಳು ಆಗಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಅದರಲ್ಲಿ ಮುಖ್ಯವಾಗಿ ವಂದೇ ಭಾರತ್ ರೈಲು ಸೇರಿದಂತೆ ಹಲವು ವಿಷಯಗಳು ಸೇರಿವೆ. ಅದರ ವಿವರ ಇಲ್ಲಿದೆ.
2026ರ ಜನವರಿಯಿಂದ ಹಲವು ಬದಲಾಣೆಗಳು ಆಗಲಿವೆ. ವಿವಿಧ ಕ್ಷೇತ್ರಗಳಲ್ಲಿ ಹಲವು ಪ್ರಮುಖ ಬದಲಾವಣೆಗಳು ಆಗುವ ನಿರೀಕ್ಷೆ ಇದೆ. ಅದರಲ್ಲಿ ರೈಲ್ವೆ ವಲಯವು ಪ್ರಮುಖವಾಗಿದೆ. ಬೆಂಗಳೂರು - ಕರ್ನಾಟಕ ದೇಶದಾದ್ಯಂತ ವಂದೇ ಭಾರತ್ ರೈಲು ಸೇವೆ ಪರಿಚಯಿಸಲಾಗಿದೆ. ಇದೀಗ ಇದರ ಮುಂದುವರಿದ ಭಾಗ ಮುಂದಿನ ವರ್ಷದ ಲಭ್ಯವಾಗಲಿದೆ. ವಂದೇ ಭಾರತ್ ಸ್ಲೀಪರ್ ರೈಲು 2026ರಲ್ಲಿ ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ. ಹೊಸ ವಂದೇ ಭಾರತ್ ಸ್ಲೀಪರ್ ರೈಲುಗಳ ಸೇವೆ 2026ರಲ್ಲಿ ಪ್ರಾರಂಭವಾಗಲಿದೆ. ಅಲ್ಲದೇ 2026ರಲ್ಲಿ ದೇಶದಲ್ಲಿರುವ ಎಲ್ಲಾ ರೈಲ್ವೆ ಮಾರ್ಗಗಳನ್ನು ವಿದ್ಯುದ್ದೀಕರಣ ಮಾಡಲಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ರೈಲ್ವೆ ಹೊಸ ನೇಮಕಾತಿ: ರೈಲ್ವೆ ನೇಮಕಾತಿ ಮಂಡಳಿಯು 2026ರ ಉದ್ಯೋಗ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದು, ಉದ್ಯೋಗ ಹುಡುಕುತ್ತಿರುವವರಿಗೆ ಗುಡ್‌ನ್ಯೂಸ್ ಕೊಟ್ಟಿದೆ. ಇದರಲ್ಲಿ ಸಹಾಯಕ ಲೋಕೋಪೈಲಟ್, ತಂತ್ರಜ್ಞ, ವಿಭಾಗ ನಿಯಂತ್ರಕ, ಪ್ಯಾರಾಮೆಡಿಕಲ್, ಜೆಇ ಹಾಗೂ ಗ್ರೂಪ್-ಡಿ ಸೇರಿದಂತೆ ವಿವಿಧ ಹುದ್ದೆಗಳ ಅಧಿಸೂಚನೆಗಳು ಫೆಬ್ರವರಿ ಮತ್ತು ಅಕ್ಟೋಬರ್ 2026ರ ನಡುವೆ ನಡೆಯಲಿವೆ.
ರೈಲುಗಳ ಹೆಸರು ಬದಲಾವಣೆ: 2026ರ ಫೆಬ್ರುವರಿ ತಿಂಗಳಿನಿಂದ ಕೆಲವು ಎಕ್ಸ್‌ಪ್ರೆಸ್ ರೈಲುಗಳ ಹೆಸರು ಮತ್ತು ಸಂಖ್ಯೆ ಬದಲಾಗಲಿದೆ. ಈ ಬಗ್ಗೆ ಇನ್ನಷ್ಟೇ ರೈಲ್ವೆ ಮಾಹಿತಿ ಹಂಚಿಕೊಳ್ಳಬೇಕಿದೆ.
ಹೊಸ ವಂದೇ ಭಾರತ್ ರೈಲು: ಹೊಸ ವರ್ಷದಿಂದ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಕ್ಕೆ ವಂದೇ ಭಾರತ್ ಹೊಸ ರೈಲು ಯೋಜನೆ ಪರಿಚಯಿಸುವ ಪ್ರಸ್ತಾವನೆಯೂ ಇದೆ. ಈಗಾಗಲೇ ಹಲವು ನಗರಗಳಿಗೆ ವಂದೇ ಭಾರತ್ ರೈಲು ಸಂಪರ್ಕ ಕಲ್ಪಿಸಬೇಕು ಎನ್ನುವ ಬೇಡಿಕೆ ಇದೆ. ಹೀಗಾಗಿ ಈ ವರ್ಷ ಹೊಸ ವಂದೇ ಭಾರತ್ ರೈಲುಗಳನ್ನು ಪರಿಚಯಿಸುವ ಸಾಧ್ಯತೆ ಇದೆ. ಇದರೊಂದಿಗೆ ಎಸಿ ಸೌಲಭ್ಯದ ಅಮೃತ್ ಭಾರತ್ ರೈಲು ಹಾಗೂ ನಮೋ ಭಾರತ್ ರೈಲು ಮಾರ್ಗಗಳು ವಿಸ್ತರಣೆ ಆಗಲಿದೆ.
ಪ್ರಯಾಣಿಕರಿಗೆ ಇನ್ನಷ್ಟು ಸೌಲಭ್ಯ: ರೈಲಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ 2026ನೇ ಸಾಲಿನಿಂದ ಇನ್ನಷ್ಟು ಹೆಚ್ಚಿನ ಸೌಲಭ್ಯಗಳು ಸಿಗಲಿವೆ. ಅದರಲ್ಲಿ ಮುಖ್ಯವಾಗಿ ಪ್ರಯಾಣಿಕರಿಗೆ ಎಸಿ ಕೋಚ್‌ಗಳಲ್ಲಿ ಹಣ ಪಾವತಿ ಮಾಡುವ ಮೂಲಕ ಅಗತ್ಯವಿರುವಷ್ಟು ಬೆಡ್‌ಶೀಟ್ ಹಾಗೂ ದಿಂಬುಗಳನ್ನು ಪಡೆದುಕೊಳ್ಳುವುದಕ್ಕೆ ಅವಕಾಶ ಇರಲಿದೆ.
ರೈಲು ಪ್ರಯಾಣ ದರ ಹೆಚ್ಚಳ: ಇನ್ನು ಹೊಸ ವರ್ಷದಿಂದ ವಿವಿಧ ರೈಲು ಟಿಕೆಟ್ ಬೆಲೆ ಹೆಚ್ಚಳವಾಗಲಿದೆ. ರೈಲಿನಲ್ಲಿ ದೂರದ ಊರುಗಳಿಗೆ ಪ್ರಯಾಣಿಸುವವರಿಗೆ ಟಿಕೆಟ್ ದರವು ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ. 215 ಕಿ.ಮೀ ವರೆಗಿನ ಸಾಮಾನ್ಯ ದರ್ಜೆಯ ಪ್ರಯಾಣದರದಲ್ಲಿ ಯಾವುದೇ ಏರಿಕೆ ಇರುವುದಿಲ್ಲ. ಪ್ರಯಾಣ ದರ ಏರಿಕೆಯಿಂದ 2026ರ ಮಾರ್ಚ್ ವೇಳೆಗೆ ರೈಲ್ವೆ ಇಲಾಖೆಗೆ ಹೆಚ್ಚುವರಿಯಾಗಿ 600 ಕೋಟಿ ರೂಪಾಯಿ ಆದಾಯ ಬರಲಿದೆ ಎಂದು ನಿರೀಕ್ಷಿಸಲಾಗಿದೆ.
ಭಾರತೀಯ ರೈಲ್ವೆ ಸಚಿವಾಲಯವು ಡಿಸೆಂಬರ್ 26ರಿಂದ ಜಾರಿಗೆ ಬರುವಂತೆ ಕೆಲವು ನಿರ್ದಿಷ್ಟ ರೈಲು ಪ್ರಯಾಣ ದರವನ್ನು ಹೆಚ್ಚಿಸಿದೆ. ಮೇಲ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳ ಎಸಿ ಹಾಗೂ ನಾನ್ ಎಸಿ ಪ್ರಯಾಣ ದರವನ್ನು ಪ್ರತಿ ಕಿ.ಮೀಗೆ 2 ಪೈಸೆ ಏರಿಕೆ ಆಗಿದೆ. ನಾನ್-ಎಸಿ ಕೋಚ್‌ನಲ್ಲಿ 500 ಕಿ.ಮೀ ಪ್ರಯಾಣಿಸುವ ಟಿಕೆಟ್‌ಗಳ ಮೇಲೆ 10 ರೂಪಾಯಿ ಹೆಚ್ಚಳವಾಗಿದೆ. ಇದು ಹೊಸ ವರ್ಷದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ಬರಲಿದೆ.












Click it and Unblock the Notifications