ದೆಹಲಿಯಲ್ಲಿ ಮೋದಿ ವಿರುದ್ಧ 2,000 ಪೋಸ್ಟರ್ ವಶ: 4 ಜನರ ಬಂಧನ, 44 ಪ್ರಕರಣಗಳು ದಾಖಲು
ದೆಹಲಿಯಲ್ಲಿ ಸಾಗಿಸುತ್ತಿದ್ದ ಪ್ರಧಾನಿ ಮೋದಿ ವಿರುದ್ಧದ 2,000 ಪೋಸ್ಟರ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೆಹಲಿಯ ಹಲವು ಸ್ಥಳಗಳಲ್ಲಿ ಪ್ರಧಾನಿ ಮೋದಿ ವಿರುದ್ಧ ಅಂಟಿಸಲಾಗಿದ್ದ ಸುಮಾರು 2,000 ಪೋಸ್ಟರ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು 4 ಜನರನ್ನು ಬಂಧಿಸಿದ್ದಾರೆ. ಜೊತೆಗೆ 44 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಬಗ್ಗೆ ಸಾವಿರಾರು ಪೋಸ್ಟರ್‌ಗಳು ರಾಷ್ಟ್ರ ರಾಜಧಾನಿಯಲ್ಲಿ ಕಂಡುಬಂದಿವೆ. ಈ ಪೋಸ್ಟರ್‌ಗಳ ವಿರುದ್ಧ ದೆಹಲಿ ಪೊಲೀಸರು ಇಂದು 44 ಪ್ರಕರಣಗಳನ್ನು ದಾಖಲಿಸಿ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತ ನಾಲ್ವರಲ್ಲಿ ಇಬ್ಬರು ಪ್ರಿಂಟಿಂಗ್ ಪ್ರೆಸ್ ಹೊಂದಿದ್ದಾರೆ.

ಮಂಗಳವಾರದ ಬೃಹತ್ ಕಾರ್ಯಾಚರಣೆಯಲ್ಲಿ ಪೊಲೀಸರು ದೆಹಲಿಯ ಹಲವು ಸ್ಥಳಗಳಿಂದ ಸುಮಾರು 2,000 'ಮೋದಿ ವಿರೋಧಿ' ಪೋಸ್ಟರ್‌ಗಳನ್ನು ತೆಗೆದುಹಾಕಿದ್ದಾರೆ. ಈ ಪೋಸ್ಟರ್‌ಗಳಲ್ಲಿ ಹೆಚ್ಚಿನವು 'ಮೋದಿ ಹಠಾವೋ, ದೇಶ್ ಬಚಾವೋ' (ಮೋದಿಯನ್ನು ತೆಗೆದುಹಾಕಿ, ದೇಶವನ್ನು ಉಳಿಸಿ) ಎಂಬ ಘೋಷಣೆಯನ್ನು ಹೊಂದಿದ್ದವು.
ಆಮ್ ಆದ್ಮಿ ಪಕ್ಷದ ಕಚೇರಿಗೆ ತಲುಪಿಸಲಾಗುತ್ತಿದ್ದ 2,000 ಇತರೆ ಪೋಸ್ಟರ್‌ಗಳನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಐಪಿ ಎಸ್ಟೇಟ್ ಪ್ರದೇಶದಲ್ಲಿ ವ್ಯಾನ್ ವೊಂದರಿಂದ ಪೊಲೀಸರು 2,000 ಪೋಸ್ಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಪೋಸ್ಟರ್‌ಗಳನ್ನು ಎಎಪಿ ಕೇಂದ್ರ ಕಚೇರಿಗೆ ತಲುಪಿಸುವಂತೆ ಸೂಚಿಸಲಾಗಿದೆ ಎಂದು ಚಾಲಕ ಪೊಲೀಸರಿಗೆ ತಿಳಿಸಿದ್ದಾರೆ.

ಸೋಮವಾರವೂ ಇದೇ ರೀತಿಯ ಸರಕನ್ನು ತಲುಪಿಸಿರುವುದಾಗಿ ಚಾಲಕ ತಿಳಿಸಿದ್ದಾನೆ. ಈ ಬಗ್ಗೆ ಎಎಪಿಯಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 50,000 'ಮೋದಿ ಹಟಾವೋ, ದೇಶ್ ಬಚಾವೋ' ಪೋಸ್ಟರ್‌ಗಳನ್ನು ಮುದ್ರಿಸಲು ತಮಗೆ ಆದೇಶ ಬಂದಿದೆ ಎಂದು ಬಂಧಿತ ಪ್ರಿಂಟಿಂಗ್ ಪ್ರೆಸ್ ಮಾಲೀಕರು ದೆಹಲಿ ಪೊಲೀಸರಿಗೆ ತಿಳಿಸಿದ್ದಾರೆ.
ಕೋವಿಡ್ ಸಮಯದಲ್ಲೂ ಪೋಸ್ಟರ್ ಗಲಾಟೆ
ಕೋವಿಡ್ ನಿರ್ವಹಣೆ ಹಾಗೂ ಲಸಿಕೆಗಳ ಹಂಚಿಕೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ ದೆಹಲಿ ನಗರದ ಅನೇಕ ಕಡೆಗಳಲ್ಲಿ ಬಿತ್ತಿಪತ್ರಗಳನ್ನು ಅಂಟಿಸಿದ್ದಕ್ಕಾಗಿ ಸುಮಾರು 17 ಜನರನ್ನು ಬಂಧಿಸಿಸಲಾಗಿತ್ತು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಇತರೆ ಮುಖಂಡರು ಕಿಡಿಕಾರಿದ್ದರು.
'ನನ್ನನ್ನೂ ಬಂಧಿಸಿ' ಎಂದು ರಾಹುಲ್ ಗಾಂಧಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಟ್ವೀಟ್ ಮಾಡಿದ್ದರು. ಅವರು ಪ್ರತಿಭಟನಾತ್ಮಕವಾಗಿ 'ಮೋದಿ ಜಿ, ನಮ್ಮ ಮಕ್ಕಳಿಗಾಗಿ ಮೀಸಲಿರಿಸಿದ್ದ ಲಸಿಕೆಗಳನ್ನು ಏಕೆ ವಿದೇಶಕ್ಕೆ ಕಳುಹಿಸಿದ್ದೀರಿ?' ಎಂದು ಪ್ರಶ್ನಿಸಿದ್ದರು. ದೆಹಲಿಯ ಅನೇಕ ಭಾಗಗಳಲ್ಲಿ ಇದೇ ಬರಹವುಳ್ಳ ಬಿತ್ತಿಪತ್ರಗಳು ಪತ್ತೆಯಾಗಿದ್ದವು, ಈ ಕಾರಣಕ್ಕೆ 17 ಮಂದಿಯನ್ನು ಬಂಧಿಸಲಾಗಿತ್ತು.
ಕೋವಿಡ್ ನಿರ್ವಹಣೆ ಹಾಗೂ ಲಸಿಕೆ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಸತತ ಟೀಕಾಪ್ರಹಾರ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು 'ನನ್ನನ್ನೂ ಬಂಧಿಸುತ್ತೀರಾ?' ಎಂದು ಸವಾಲು ಹಾಕಿದ್ದರು.
ಕಾಂಗ್ರೆಸ್‌ನ ಅನೇಕ ನಾಯಕರು ಈ ಘಟನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. 'ನನಗೆ ಆಘಾತ ಮತ್ತು ದಿಗಿಲಾಗಿದೆ. ಇದು ಭಾವೋದ್ವೇಗದ ಅಸಮ್ಮತಿ ಇರಬಹುದು. ಆದರೆ ಆಟೊ ಚಾಲಕ, ಮುದ್ರಣಕಾರ, ದಿನಗೂಲಿ ಕಾರ್ಮಿಕ ಇತ್ಯಾದಿ, ಬಿತ್ತಿಪತ್ರ ಅಂಟಿಸಿದವರನ್ನೆಲ್ಲ ಯಾವ ಅಧಿಕಾರ, ಯಾವ ಕಾನೂನು, ಯಾವ ಶಕ್ತಿಯಡಿ ನೀವು ಬಂಧಿಸಿದ್ದೀರಿ? ಇದು ತನ್ನ ತಂದೆಯನ್ನು ಕಳೆದುಕೊಂಡಿದ್ದಕ್ಕೆ ದೂರು ನೀಡಿದ ವ್ಯಕ್ತಿಯನ್ನು ಉತ್ತರ ಪ್ರದೇಶದಲ್ಲಿ ಬಂಧಿಸಿದಂತೆ, ಕಾನೂನು ಇಲ್ಲದ ರಾಜ್ಯವು ರಕ್ತದಾಹಿಯಾಗುತ್ತಿದೆ' ಎಂದು ಅಭಿಷೇಕ್ ಸಿಂಘ್ವಿ ಟೀಕಿಸಿದ್ದರು.












Click it and Unblock the Notifications