MPs Suspended: ಲೋಕಸಭಾ ಕಲಾಪದಲ್ಲಿ ಭದ್ರತೆ ಲೋಪ ಗದ್ದಲ; 16 ಸಂಸದರು ಅಮಾನತು
ಹೊಸದಿಲ್ಲಿ, ಡಿಸೆಂಬರ್ 14: ಲೋಕಸಭೆಯಲ್ಲಿ ಬುಧವಾರ ಉಂಟಾದ ಭದ್ರತಾ ಲೋಪದ ವಿಚಾರವಾಗಿ ಗುರುವಾರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಭಾರಿ ಗದ್ದಲ ಉಂಟಾಗಿದ್ದು, ಈ ವೇಳೆ ಎರಡೂ ಸದನಗಳಿಂದ ಒಟ್ಟು 16 ಮಂದಿ ಸಂಸದರನ್ನು ಅಮಾನತು ಮಾಡಲಾಗಿದೆ.
ಲೋಕಸಭೆಯಲ್ಲಿ ಉಂಟಾದ ಭದ್ರತಾ ಲೋಕದ ಕುರಿತು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಸಂಸದರಾದ ಜ್ಯೋತಿಮಣಿ, ಹೈಬಿ ಇಡೆನ್, ಡೀನ್ ಕುರಿಯಾಕೋಸ್, ಪ್ರತಾಪನ್ ಮತ್ತು ರಮ್ಯಾ ಹರಿದಾಸ್ ಅವರನ್ನು ಚಳಿಗಾಲದ ಅಧಿವೇಶನ ಮುಗಿಯುವವರೆಗೂ ಕಲಾಪಕ್ಕೆ ಹಾಜರಾಗದಂತೆ ಮೊದಲು ಅಮಾನತು ಮಾಡಲಾಗಿದೆ.

ಡಿಎಂಕೆ ಸಂಸದೆ ಕನಿಮೊಳಿ, ಕಾಂಗ್ರೆಸ್ ಸಂಸದ ಮಣಿಕಮ್ ಟಾಗೋರ್, ಬೆನ್ನಿ ಬೆಹನಾನ್, ವಿಕೆ ಶ್ರೀಕಂಡನ್, ಮೊಹಮದ್ ಜಾವೇದ್, ಪಿಆರ್ ನಟರಾಜನ್, ಕೆ ಸುಬ್ರಮಣ್ಯಂ, ಎಸ್‌ಆರ್ ಪಾರ್ತಿಬನ್, ಎಸ್ ವೆಂಕಟೇಶನ್ ಅವರನ್ನು ಲೋಕಸಭೆಯಿಂದ ಅಮಾನತು ಮಾಡಲಾಗಿದೆ. ಅಲ್ಲದೇ ರಾಜ್ಯಸಭೆ ಅಧ್ಯಕ್ಷರ ಜೊತೆಗೆ ತೀವ್ರ ವಾಕ್ಸಮರ ನಡೆಸಿದ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಓಬ್ರಿಯನ್ ಅವರನ್ನು 'ಅನುಚಿತ ವರ್ತನೆ' ಕಾರಣದಿಂದ ಅಮಾನತು ಮಾಡಲಾಗಿದೆ.
ಇನ್ನೂ ಗುರುವಾರ ರಾಜ್ಯಸಭೆಯ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷಗಳ ಸಂಸದರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಭದ್ರತಾ ಲೋಪದ ಕುರಿತು ಚರ್ಚೆಗೆ ಪಟ್ಟು ಹಿಡಿದರು. ಭದ್ರತಾ ವೈಫಲ್ಯದ ಕುರಿತು ಚರ್ಚಿಸಲು ಉಳಿದ ಕಲಾಪವನ್ನು ಅಮಾನತುಗೊಳಿಸುವಂತೆ ವಿಪಕ್ಷ ಸಂಸದರು 28 ನೋಟಿಸ್‌ಗಳನ್ನು ಮಂಡಿಸಿದರು. ಈ ನೋಟಿಸ್‌ಗಳನ್ನು ಅಧ್ಯಕ್ಷ ಜಗದೀಪ್ ಧನಕರ್ ತಿರಸ್ಕರಿಸಿದರು. ಹೀಗಾಗಿ ಇದರಿಂದ ಕೋಪಗೊಂಡ ವಿಪಕ್ಷ ಸದಸ್ಯರು ಸದನದ ಬಾವಿಗೆ ಇಳಿದು ಧರಣಿ ನಡೆಸಿದರು. ಸಂಸದರ 'ಅನುಚಿತ ನಡವಳಿಕೆ'ಯನ್ನು ಖಂಡಿಸಿದ ಧನಕರ್, ಇದು ಸದನದ ನಿಯಮಾವಳಿಗಳ ಉಲ್ಲಂಘನೆಯಾಗಿದೆ ಎಂದು ಕಿಡಿಕಾರಿದರು.
ಡೆರೆಕ್ ಓಬ್ರಿಯನ್ ಅವರು ಈ ಕೂಡಲೇ ಸದನವನ್ನು ತೊರೆಯಬೇಕು ಎಂದು ಸೂಚಿಸಲಾಗಿದೆ. ಅಧ್ಯಕ್ಷ ಸ್ಥಾನವನ್ನು ತಿರಸ್ಕರಿಸುವುದಾಗಿ ಡೆರೆಕ್ ಓಬ್ರಿಯನ್ ಹೇಳುತ್ತಾರೆ. ನಿಯಮಗಳನ್ನು ತಾವು ಗೌರವಿಸುವುದಿಲ್ಲ ಎಂದು ಡೆರೆಕ್ ಓಬ್ರಿಯನ್ ಹೇಳುತ್ತಾರೆ. ಇದು ಗಂಭೀರ ದುರ್ವರ್ತನೆ. ಇದು ನಾಚಿಕೆಗೇಡಿನ ಘಟನೆ ಎಂದು ಧನಕರ್ ಕಿಡಿಕಾರಿದರು. ಎಚ್ಚರಿಕೆ ನಡುವೆಯೂ ಓಬ್ರಿಯನ್ ಹಾಗೂ ಇತರೆ ವಿಪಕ್ಷ ಸಂಸದರು ಪ್ರತಿಭಟನೆ ಮುಂದುವರಿಸಿದರು. ಬುಧವಾರ ಘಟನೆ ಬಗ್ಗೆ ಅಮಿತ್ ಶಾ ಅವರು ಸದನಕ್ಕೆ ಹಾಜರಾಗಿ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.












Click it and Unblock the Notifications