ಆಫ್ಘಾನ್‌ನಿಂದ ಬರುವ ಎಲ್ಲರಿಗೂ 14 ದಿನ ಕ್ವಾರಂಟೈನ್ ಕಡ್ಡಾಯ: ಆರೋಗ್ಯ ಸಚಿವಾಲಯ
ನವದೆಹಲಿ, ಆಗಸ್ಟ್ 25: ತಾಲಿಬಾನ್ ದಾಳಿಗೆ ಒಳಗಾಗಿ ಉಗ್ರರ ವಶವಾಗಿರುವ ಅಫ್ಘಾನಿಸ್ತಾನದಿಂದ ಹಲವಾರು ಮಂದಿ ಭಾರತಕ್ಕೆ ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೊರೊನಾ ವೈರಸ್ ಸೋಂಕಿನ ಈ ಸಂದರ್ಭದಲ್ಲಿ ಮುಂಜಾಗ್ರತ ಕ್ರಮವಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಅಫ್ಘಾನಿಸ್ತಾನದಿಂದ ಬರುವ ಎಲ್ಲರಿಗೂ 14 ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯಗೊಳಿಸಿದೆ.
"ಹಾಗೆಯೇ ಅಫ್ಘಾನಿಸ್ತಾನದಿಂದ ಬರುವ ಜನರ ಆರ್‌ಟಿ-ಪಿಸಿಆರ್ ಕೋವಿಡ್ ವರದಿಯು ನೆಗೆಟಿವ್ ಆದರೂ ಕೂಡಾ 14 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಪಡುವುದು ಕಡ್ಡಾಯ," ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆಯ ಆತಂಕದ ನಡುವೆ ಈ ತೀರ್ಮಾನಕ್ಕೆ ಬಂದಿರುವುದಾಗಿ ತಿಳಿಸಿದೆ.
"ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿಯಿಂದಾಗಿ ಬಿಕ್ಕಟ್ಟು ಉಂಟಾಗಿರುವ ಕಾರಣದಿಂದಾಗಿ ಅಫ್ಘಾನಿಸ್ತಾನದಿಂದ ತೆರಳುವ ಮುನ್ನ ಕೋವಿಡ್‌ನ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡುವುದಕ್ಕೆ ಈಗಾಗಲೇ ವಿನಾಯಿತಿ ನೀಡಲಾಗಿದೆ," ಎಂದು ಕೂಡಾ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ 78 ಭಾರತೀಯರನ್ನು ರಕ್ಷಣೆ ಮಾಡಲಾಗಿತ್ತು. ವಿಶೇಷ ವಿಮಾನದಲ್ಲಿ ಎಲ್ಲರೂ ಮಂಗಳವಾರ ದೆಹಲಿ ತಲುಪಿದ್ದರು. ಈ 78 ಜನರ ಪೈಕಿ 16 ಜನರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಮುಂಜಾಗ್ರತಾ ಕ್ರಮವಾಗಿ 78 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ನಿರ್ದೇಶನದ ಪ್ರಕಾರ ಈಗ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಆದ ಜನರನ್ನು ಕೋವಿಡ್ ಕೇರ್ ಕೇಂದ್ರಕ್ಕೆ ವರ್ಗಾಯಿಸಲಾಗುತ್ತದೆ. ಈ ಹಿನ್ನೆಲೆ ಐಟಿಬಿಪಿ ಎಲ್ಲಾ ಅಗತ್ಯ ಕ್ರಮಗಳನ್ನು, ಅಗತ್ಯ ತಯಾರಿಗಳನ್ನು ನಡೆಸುತ್ತಿದೆ ಎಂದು ಹೇಳಲಾಗಿದೆ.
ಇನ್ನು "ಅಫ್ಘಾನಿಸ್ತಾನದಿಂದ ಬಂದ ಇಬ್ಬರಿಗೆ ಕೋವಿಡ್ ದೃಢಪಟ್ಟಿದ್ದು, ಅವರಿಬ್ಬರಿಗೂ ಕೊರೊನಾ ವೈರಸ್ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲ. ಅವರಿಬ್ಬರನ್ನು ದೆಹಲಿಯ ಎಲ್‌ಎಸ್‌ಜೆಪಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ," ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ತಾಲಿಬಾನ್ ಉಗ್ರರು ಕಾಬೂಲ್ ನಗರವನ್ನು ವಶಕ್ಕೆ ಪಡೆದ ಒಂದು ದಿನದ ಬಳಿಕ ಭಾರತವು ಸುಮಾರು 40 ಭಾರತೀಯರನ್ನು ಕಾಬೂಲ್‌ನಿಂದ ಆಗಸ್ಟ್ 16 ರಂದು ವಾಪಾಸ್ ಕರೆಸಿಕೊಂಡಿದೆ. ಈವರೆಗೂ ಸುಮಾರು 800 ಮಂದಿಯನ್ನು ಭಾರತವೂ ಕಾಬೂಲ್‌ನಿಂದ ಭಾರತಕ್ಕೆ ಕರೆತಂದಿದೆ. ಇನ್ನು ಬೇರೆ ದೇಶಗಳು ಕೂಡಾ ಅಫ್ಘಾನಿಸ್ತಾನದಿಂದ ತನ್ನ ದೇಶದ ಜನರನ್ನು ರಕ್ಷಣೆ ಮಾಡುತ್ತಿದೆ. ಹಾಗೆಯೇ ತಮ್ಮ ದೇಶಕ್ಕೆ ಕೊಡುಗೆ ನೀಡಿದ ಅಫ್ಘಾನ್ ಜನರನ್ನು ಕೂಡಾ ರಕ್ಷಣೆ ಮಾಡುತ್ತಿದೆ. ಸಾವಿರಾರು ಅಫ್ಘಾನಿಸ್ತಾನದ ಜನರು ಕಾಬೂಲ್‌ನ ವಿಮಾನ ನಿಲ್ದಾಣಕ್ಕೆ ಧಾವಿಸಿ ಬಂದಿದ್ದು, ತಮ್ಮನ್ನು ತಾಲಿಬಾನ್‌ನಿಂದ ರಕ್ಷಿಸಿಕೊಳ್ಳುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಇನ್ನು ಅಮೆರಿಕನ್ನರನ್ನು ವಾಪಾಸ್ ಕರೆಸಿಕೊಳ್ಳಲು ಆಗಸ್ಟ್ 31ರ ಗಡುವನ್ನು ವಿಸ್ತರಿಸಿಕೊಳ್ಳುವ ನಿರ್ಧಾರ ಕೈಗೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಚಿಂತನೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಮಂಗಳವಾರ ತಾಲಿಬಾನ್ ಬಿಕ್ಕಟ್ಟಿನ ಕುರಿತು ಚರ್ಚೆಗೆ ಜಿ 7 ದೇಶಗಳು ಸಭೆ ನಡೆಸಿದ್ದು, ಮುಖಂಡರು ಗಡುವು ವಿಸ್ತರಿಸಲು ಕೋರುವ ಚಿಂತನೆ ನಡೆಸಿದ್ದರು. ಆದರೆ ತಾಲಿಬಾನ್ ಮಾತ್ರ ಎಲ್ಲಾ ವಿದೇಶಿಯರು ಆಗಸ್ಟ್ 31ರೊಳಗೆ ದೇಶ ತೊರೆಯಬೇಕು. ದೇಶ ತೊರೆಯಲು ನೀಡಲಾದ 31ರ ಗಡುವನ್ನು ವಿಸ್ತರಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿಕೊಂಡಿದೆ.
ಕಳೆದ ಭಾನುವಾರ ತಾಲಿಬಾನ್ ಕಾಬೂಲ್ ವಶಕ್ಕೆ ಪಡೆದಿದ್ದು, ಇಡೀ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಹಿನ್ನೆಲೆ ಅಫ್ಘಾನಿಸ್ತಾನದಿಂದ ತಮ್ಮ ದೇಶದ ಜನರನ್ನು ರಕ್ಷಿಸುವ ಕಾರ್ಯವನ್ನು ಹಲವು ದೇಶಗಳು ಮಾಡುತ್ತಿದೆ. ಕಳೆದ 10 ದಿನಗಳಲ್ಲಿ ಸುಮಾರು 60 ಸಾವಿರ ಜನರನ್ನು ಅಲ್ಲಿಂದ ತೆರವು ಮಾಡಲಾಗಿದೆ. ಆದರೆ ಇನ್ನೂ ಸಾವಿರಾರು ವಿದೇಶಿ ಜನರು ಅಫ್ಘಾನಿಸ್ತಾನದಲ್ಲಿ ಬಾಕಿಯಾಗಿದ್ದಾರೆ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications