ಛತ್ತೀಸ್‌ಗಢ: ಬಿಜಾಪುರ ಜಿಲ್ಲೆಯಲ್ಲಿ 12 ಮಾವೋವಾದಿಗಳನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು
ಛತ್ತಿಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಗುರುವಾರ ಮಾವೋವಾದಿಗಳ ಜೊತೆ ಭದ್ರತಾ ಪಡೆಗಳು ನಡಸಿದ ಸಂಘರ್ಷ ನಡೆಸಿದ್ದು, ಗುಂಡಿನ ಚಕಮಕಿಯಲ್ಲಿ 12 ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ದಕ್ಷಿಣ ಬಿಜಾಪುರದ ಕಾಡಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಮಾವೋವಾದಿಗಳನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿವೆ.
ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ಮಾವೋವಾದಿ ವಿರೋಧಿ ಕಾರ್ಯಾಚರಣೆಗೆ ಹೊರಟಿದ್ದರು. ಸಂಜೆ ವೇಳೆಗೆ ಗುಂಡಿನ ಚಕಮಕಿ ನಡೆದಿದೆ ಎಂದು ಭದ್ರತಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಮೂರು ಜಿಲ್ಲೆಗಳಿಂದ ರಾಜ್ಯ ಪೊಲೀಸರ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ) ಗೆ ಸೇರಿದ ಸಿಬ್ಬಂದಿ, ಕೋಬ್ರಾ (ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ - ಸಿಆರ್‌ಪಿಎಫ್‌ನ ಎಲೈಟ್ ಜಂಗಲ್ ವಾರ್ಫೇರ್ ಯೂನಿಟ್) ನ ಐದು ಬೆಟಾಲಿಯನ್‌ಗಳು ಮತ್ತು ಸಿಆರ್‌ಪಿಎಫ್‌ನ 229 ನೇ ಬೆಟಾಲಿಯನ್ ಜಂಟಿಯಾಗಿ ಕಾರ್ಯಾಚರಣೆ ನಡೆಸಿದವು.
ಗುಂಡಿನ ಚಕಮಕಿಯಲ್ಲಿ 12 ಮಾವೋವಾದಿಗಳು ಮೃತಪಟ್ಟಿದ್ದಾರೆ. ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ನಿರೀಕ್ಷೆ ಮಾಡಲಾಗಿದೆ. ಘಟನೆಯಲ್ಲಿ ಭದ್ರತಾ ಪಡೆಯ ಸಿಬ್ಬಂದಿಗೆ ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ.
26 ಮಾವೋವಾದಿಗಳ ಎನ್‌ಕೌಂಟರ್
ಗುರುವಾರ 12 ಮಂದಿ ಎನ್‌ಕೌಂಟರ್ ಆಗುವ ಮೂಲಕ ಜನವರಿ ತಿಂಗಳಿನಲ್ಲಿ ಈವರೆಗೆ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ26 ಮಾವೊವಾದಿಗಳನ್ನು ಹೊಡೆದುರುಳಿಸಲಾಗಿದೆ. ಜನವರಿ 12ರಂದು ಬಿಜಾಪುರ ಜಿಲ್ಲೆಯ ಮುದ್ದೆಡ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಭದ್ರತಾ ಸಿಬ್ಬಂದಿ ಜೊತೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಐವರು ನಕ್ಸಲರನ್ನು ಹೊಡೆದುರುಳಿಸಲಾಗಿತ್ತು.
ಜನವರಿ 9 ರಂದು ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್ ನಲ್ಲಿ ಮೂವರು ನಕ್ಸಲರು ಮೃತಪಟ್ಟಿದ್ದರು. ಇದರಲ್ಲಿ ಸುಧಾರಿತ ಸ್ಫೋಟಗಳನ್ನು ತಯಾರಿಸುತ್ತಿದ್ದ ಮಹೇಶ್ ಕೋರ್ಸಾ ಕೂಡ ಈ ಎನ್‌ಕೌಂಟರ್ ನಲ್ಲಿ ಮೃತಪಟ್ಟಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಉಪಮುಖ್ಯಮಂತ್ರಿ ವಿಜಯ್ ಶರ್ಮಾ ನಕ್ಸಲ್ ವಿರೋಧಿ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದರು.
ಸುಕ್ಮಾ-ಬಿಜಾಪುರ ಗಡಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಜಂಟಿಯಾಗಿ ನಡೆಸಿದ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ಎನ್‌ಕೌಂಟರ್ ಸಂಭವಿಸಿದ್ದು, ರಾಜ್ಯದಲ್ಲಿ ನಕ್ಸಲರನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಲಾಗುತ್ತಿದೆ.
ಮಾರ್ಚ್ 2026ರ ವೇಳೆಗೆ ದೇಶದಲ್ಲಿ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡುವುದಾಗಿ ಅಮಿತ್ ಶಾ ಹೇಳಿದ್ದಾರೆ. ಛತ್ತಿಸ್‌ಗಢದಲ್ಲಿ ನಕ್ಸಲರಿಂದ ಹತ್ಯೆಗೀಡಾದವರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ, ನಕ್ಸಲರ ಅಂತ್ಯವಾಗುವವರೆಗೆ ಸುಮ್ಮನೆ ಬಿಡುವುದಿಲ್ಲ ಎಂದು ಜನವರಿ 6ರಂದು ಹೇಳಿದ್ದರು. 2024ರಲ್ಲಿ ರಾಜ್ಯದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಭದ್ರತಾ ಪಡೆಗಳು 219 ಮಾವೋವಾದಿಗಳನ್ನು ಹೊಡೆದುರುಳಿಸಿಲಾಗಿದೆ.












Click it and Unblock the Notifications