ಸಾಮಾನ್ಯವರ್ಗದವರಿಗೂ ಮೀಸಲಾತಿ ವಿಧೇಯಕ, ಲೋಕಸಭೆಯಲ್ಲಿ ಪಾಸ್
ನವದೆಹಲಿ, ಜನವರಿ 08: ಸಾಮಾನ್ಯವರ್ಗದಲ್ಲಿ ಆರ್ಥಿಕವಾಗಿ ದುರ್ಬಲರಾದವರಿಗೆ ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ಶೇ.10ರಷ್ಟು ಮೀಸಲಾತಿ ಒದಗಿಸುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಮಂಗಳವಾರ(ಜನವರಿ 08)ದಂದು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.
'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಎಂಬುದನ್ನು ಈ ಮಸೂದೆ ಪೂರ್ಣಗೊಳಿಸುತ್ತದೆ. ಸಮಾನತೆಗೆ ಹಾಗೂ ಸಮಾಜದ ಉನ್ನತಿಗೆ ಈ ಮಸೂದೆ ಅವಶ್ಯಕ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಸಮರ್ಥಿಸಿಕೊಂಡರು.
ಮಸೂದೆ ಕುರಿತಾಗಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳು ಭಾರಿ ಚರ್ಚೆ ನಡೆಸಿದವು. ಭಾರಿ ಚರ್ಚೆ ನಂತರ ಅಂತಿಮವಾಗಿ ಲೋಕಸಭೆಯಲ್ಲಿ ಮಸೂದೆಗೆ ಸಮ್ಮತಿ ದೊರೆಯಿತು.

ವಿಧೇಯಕ ಅಂಗೀಕಾರವಾದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ, 8 ಲಕ್ಷದೊಳಗಿನ ವಾರ್ಷಿಕ ಆದಾಯ ಹೊಂದಿರುವ ಜನರಿಗೆ ಇದು ಸಾಕಷ್ಟು ಅನುಕೂಲಕಾರಿ. ಕೋಟ್ಯಂತರ ಯುವಕರು ಈ ನಿರ್ಧಾರದಿಂದ ಲಾಭ ಪಡೆಯಲಿದ್ದಾರೆ. ಎಸ್ಸಿ, ಎಸ್ಟಿ ಹಾಗೂ ಒಬಿಸಿಗಳಿಗೆ ನೀಡಲಾಗಿರುವ ಶೇ. 50 ರಷ್ಟು ಮೀಸಲಾತಿಗೆ ಇದರಿಂದ ಯಾವುದೇ ಅಡ್ಡಿ-ಆತಂಕಗಳಿಲ್ಲ ಎಂದರು.
ಸಂವಿಧಾನದ 15 ಹಾಗೂ 16ನೇ ಪರಿಚ್ಛೇದ ತಿದ್ದುಪಡಿ ಮಾಡಿರುವ ಕೇಂದ್ರ ಸರ್ಕಾರ, ಈ ಸಂಬಂಧ ತಿದ್ದುಪಡಿ ಮಸೂದೆ ಮಂಡಿಸಿತು. ಬಿಜೆಪಿ ಪರ 323 ಮತಗಳು ಲಭಿಸಿದರೆ, 3 ಮತಗಳು ವಿರುದ್ಧ ಬಂದಿವೆ.
ಜಾತಿ ಆಧಾರಿತ ಮೀಸಲಾತಿಯನ್ನು ಶೇ.50ಕ್ಕೆ ಮಿತಿಗೊಳಿಸಿ ಕೇಂದ್ರ ಸರ್ಕಾರ ಆದೇಶಿಸಿತ್ತು. ಈಗ ಈ ಮೀಸಲಾತಿ ಪ್ರಮಾಣ ಶೇ10ರಷ್ಟು ಹೆಚ್ಚಳವಾಗಲಿದೆ.












Click it and Unblock the Notifications