Tirupati: ತಿರುಪತಿ ದೇವಸ್ಥಾನಕ್ಕೆ ದೇಣಿಗೆ ನೀಡುವವರಿಗೆ ಶಾಕ್; ಬರೋಬ್ಬರಿ ₹100 ಕೋಟಿ ಗುಳುಂ
ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನವು ಅತ್ಯಂತ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾಗಿದೆ. ಭಕ್ತಾದಿಗಳಿಂದಲೇ ಕೋಟಿಗಟ್ಟಲೆ ಹಣ, ಚಿನ್ನಾಭರಣಗಳು ಈ ದೇವಸ್ಥಾನಕ್ಕೆ ದೇಣಿಗೆ ರೂಪದಲ್ಲಿ ಬರುತ್ತವೆ. ಹೀಗಾಗಿ ಕೋಟಿ ಕೋಟಿ ಆಸ್ತಿಯ ಒಡೆಯ ಎಂದು ತಿರುಪತಿ ತಿಮ್ಮಪ್ಪನನ್ನ ಕರೆಯಲಾಗುತ್ತದೆ. ಆದರೆ ದೇಣಿಗೆ ಬಂದಿದ್ದ 100 ಕೋಟಿ ರೂಪಾಯಿಗೂ ಹೆಚ್ಚು ಹಣ ಕಳವಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರ ಕೇಳಿ ಭಕ್ತಾದಿಗಳು ಶಾಕ್ ಆಗಿದ್ದಾರೆ.
ಈ ಹಿಂದೆ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಆಡಳಿತಾವಧಿಯಲ್ಲಿ ತಿರುಪತಿ ದೇವಸ್ಥಾನದ ಪರಕಾಮಣಿ ದೇಣಿಗೆ ಪೆಟ್ಟಿಗೆಯಿಂದ ಬರೋಬ್ಬರಿ 100 ಕೋಟಿ ರೂ.ಗೂ ಹೆಚ್ಚು ಹಣ ಕಳವಾಗಿದೆ ಎಂಬ ಆರೋಪ ರಾಜಕೀಯ ತಿರುವು ಪಡೆದುಕೊಂಡಿದೆ. ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಸದಸ್ಯರೂ ಆಗಿರುವ ಭಾನು ಪ್ರಕಾಶ್ ರೆಡ್ಡಿ ಅವರು ದೇವಸ್ಥಾನದ ಸಿಬ್ಬಂದಿಯಾದ ರವಿಕುಮಾರ್ ದೇಣಿಗೆ ಪೆಟ್ಟಿಗೆಯಿಂದ ಹಣ ಕದ್ದಿದ್ದಾರೆ ಎಂದು ಆರೋಪಿಸಿ ಇದಕ್ಕೆ ಸಂಬಂಧಿಸಿ ಸಿಸಿಟಿವಿ ದೃಶ್ಯಗಳನ್ನು ಸಹ ಬಿಡುಗಡೆ ಮಾಡಿದ್ದಾರೆ.

ಹಣ ಕದ್ದು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ?
ದೇವಸ್ಥಾನ ಲೂಟಿ ಮಾಡಿದ ಕೋಟ್ಯಂತರ ರೂಪಾಯಿಗಳನ್ನು ಬಳಸಿಕೊಂಡು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲಾಗಿದೆ ಹಾಗೂ ಈ ಅಕ್ರಮ ಹಣವನ್ನು ಜಗನ್ ಮೋಹನ್ ರೆಡ್ಡಿ ಅವರ ಮನೆಯಾದ ತಡೆಪಲ್ಲಿ ಅರಮನೆಗೆ ತಿರುಗಿಸಲಾಗಿದೆ ಎಂದು ಆರೋಪಿಸಲಾಗಿದೆ. 2019ರಿಂದ 2024ರವರೆಗೆ ನಡೆದ ವೈಎಸ್‌ಆರ್‌ಸಿಪಿ ಆಡಳಿತದಲ್ಲಿ ಟಿಟಿಡಿಯ ಇತಿಹಾಸದಲ್ಲಿ 100 ಕೋಟಿ ರೂಪಾಯಿಗಳ ಕಳ್ಳತನವು ಅತಿ ದೊಡ್ಡ ಲೂಟಿ ಎಂದು ಭಾನು ಪ್ರಕಾಶ್ ರೆಡ್ಡಿ ದೂರಿದ್ದಾರೆ.
ಟಿಡಿಪಿ ನಾಯಕ ನಾರಾ ಲೋಕೇಶ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹಣ ಕಳ್ಳತನದ ವಿಡಿಯೋ ಹಂಚಿಕೊಂಡಿದ್ದಾರೆ. ದೇವಾಲಯಕ್ಕೆ ನೀಡುವ ದೇಣಿಗೆ ನಿಧಿಯಲ್ಲಿ ಹಣ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿದ್ದಾರೆ. ಜಗನ್ ಅವರ ಐದು ವರ್ಷಗಳ ಆಳ್ವಿಕೆಯಲ್ಲಿ ಭ್ರಷ್ಟಾಚಾರ ಮಿತಿಮೀರಿ ಅರಾಜಕತೆ ತಾಂಡವವಾಡುತ್ತಿತ್ತು. ಜಗನ್ ಆಂಧ್ರಪ್ರದೇಶವನ್ನು ಕಳ್ಳರು, ಲೂಟಿಕೋರರು ಮತ್ತು ಮಾಫಿಯಾ ಡಾನ್‌ಗಳ ಸ್ವರ್ಗವನ್ನಾಗಿ ಬದಲಾಯಿಸಿದ್ರು. ಜಗನ್ ಗ್ಯಾಂಗ್ ಜನರನ್ನು ಶೋಷಿಸುವ ಜೊತೆಗೆ ಗಣಿಗಳು, ಭೂಮಿ, ಕಾಡುಗಳು ಮತ್ತು ಎಲ್ಲ ಸಂಪನ್ಮೂಲಗಳನ್ನು ಲೂಟಿ ಮಾಡಿತು. ಕೊನೆಗೆ ತಿರುಮಲದಲ್ಲಿರುವ ವೆಂಕಟೇಶ್ವರನ ಆಸ್ತಿಯನ್ನು ಸಹ ಬಿಟ್ಟಿಲ್ಲ ಎಂದು ನಾರಾ ಲೋಕೇಶ್ ಕಿಡಿಕಾರಿದ್ದಾರೆ.

ಕೋಟ್ಯಂತರ ಆಸ್ತಿಯನ್ನು ಲೂಟಿ ಮಾಡಲಾಗಿದೆ. ಈ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲಾಗಿದೆ. ಪ್ರಪಂಚದಾದ್ಯಂತದ ಭಕ್ತರು ಅಪಾರ ನಂಬಿಕೆಯಿಂದ ಇಟ್ಟಿದ್ದ ನೂರಾರು ಕೋಟಿ ರೂಪಾಯಿ ದೇಣಿಗೆ ಮತ್ತು ಹುಂಡಿಯನ್ನು ಕದ್ದಿದ್ದಾರೆ. ಅಧಿಕಾರದ ಬೆಂಬಲದೊಂದಿಗೆ ಜಗನ್ ಗ್ಯಾಂಗ್ ಭಕ್ತರು ಶ್ರೇಷ್ಠ ಪ್ರಸಾದವೆಂದು ಪರಿಗಣಿಸುವ ಲಡ್ಡುಗೆ ಕಲಬೆರಕೆ ಮಾಡಿದ್ದಾರೆ. ಅನ್ನ ಪ್ರಸಾದವನ್ನ ಭ್ರಷ್ಟಗೊಳಿಸಿದ್ದಾರೆ. ತಿರುಮಲದ ದರ್ಶನಗಳನ್ನು ಮಾರಾಟ ಮಾಡಿ ಸಾಮಾನ್ಯ ಭಕ್ತರು ದೇವರ ದರ್ಶನ ಪಡೆಯುವುದನ್ನು ಕಷ್ಟಕರವಾಗಿಸಿದ್ದಾರೆ ಎಂದು ಸಾಲು ಸಾಲು ಆರೋಪಗಳನ್ನ ಮಾಡಿದ್ದಾರೆ.
ತಿರುಪತಿ ತಿಮ್ಮಪ್ಪ ಒಬ್ಬ ಪ್ರಭಾವಿ ವ್ಯಕ್ತಿ. ಅವನ ಸಮ್ಮುಖದಲ್ಲಿ ಭ್ರಷ್ಟಾಚಾರ ಮಾಡಿದರೆ ಏನಾಗುತ್ತಿದೆ ಎಂದು ತಿಳಿದಿದ್ದರೂ ಸಹ ಜಗನ್ ಈ ಆಸ್ತಿ ದೋಚಿದ್ದಾರೆ. ದೇವಸ್ಥಾನದ ಹುಂಡಿಯನ್ನು ಲೂಟಿ ಮಾಡಿದ ಹಿಂದಿನ ಆಡಳಿತಗಾರ ಜಗನ್ ಗ್ಯಾಂಗ್‌ನ ಪಾಪಗಳು ಬಹಿರಂಗಗೊಂಡಿವೆ. ಕಳ್ಳತನದ ವಿಡಿಯೋ ಇಂದು ಬಿಡುಗಡೆ ಮಾಡಲಾಗಿದೆ. ನಾಳೆ ಆರೋಪಿಗಳೇ ವೈಸಿಪಿಯ ಪಾಪಗಳ ಪಟ್ಟಿಯನ್ನು ಬಹಿರಂಗಪಡಿಸಲಿದ್ದಾರೆ ಎಂದು ನಾರಾ ಲೋಕೇಶ್ ಹೇಳಿದ್ದಾರೆ.












Click it and Unblock the Notifications