
ಹಣ ಕೋಟಿ ಸುಲಿಗೆ ಹಗರಣ: ಎನ್‌ಸಿಪಿ ನಾಯಕ ಅನಿಲ್ ದೇಶ್‌ಮುಖ್ ಜಾಮೀನು ಅರ್ಜಿ ತಿರಸ್ಕೃತ
ಮುಂಬೈ, ಅ. 21: ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸುತ್ತಿರುವ 100 ಕೋಟಿ ರೂಪಾಯಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಅನಿಲ್ ದೇಶ್‌ಮುಖ್ ಅವರ ಜಾಮೀನು ಅರ್ಜಿಯನ್ನು ಶುಕ್ರವಾರ ಮುಂಬೈ ನ್ಯಾಯಾಲಯ ತಿರಸ್ಕರಿಸಿದೆ.
ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಎಸ್. ಹೆಚ್. ಗ್ವಾಲಾನಿ ಅವರು "ಈ ಪ್ರಕರಣ ಅಪಾರ ಪ್ರಮಾಣದ ಹಣಕಾಸಿಗೆ ಸಂಬಂಧಿಸಿದೆ ಮತ್ತು ಪ್ರಕರಣದ ಆರ್ಥಿಕ ಪರಿಣಾಮಗಳನ್ನು ನ್ಯಾಯಾಲಯವು ಪರಿಗಣಿಸಬೇಕಾಗಿದೆ" ಎಂದು ತೀರ್ಪು ನೀಡಿದ್ದಾರೆ.
ಅಕ್ರಮ ಹಣ ವರ್ಗಾವಣೆ: ಮಾಜಿ ಸಚಿವ ಅನಿಲ್ನ 4 ಕೋಟಿ ಆಸ್ತಿ ಮುಟ್ಟುಗೋಲು ಹಾಕಿದ ಇಡಿ
"ಪ್ರಸ್ತುತ ಪ್ರಕರಣದಲ್ಲಿ ರಾಷ್ಟ್ರದ ಆರ್ಥಿಕತೆಯನ್ನು ಒಳಗೊಂಡಿರುವ ಅಪಾರ ಹಣ ತೊಡಗಿಸಿಕೊಂಡಿದೆ. ಹೋಗಾಗಿ ದೇಶದ ಆರ್ಥಿಕತೆಯನ್ನು ಪರಿಗಣಿಸಬೇಕಾಗಿದೆ" ಎಂದು ನ್ಯಾಯಾಲಯವು ತಿಳಿಸಿದೆ.
71 ವರ್ಷದ ಅನಿಲ್ ದೇಶ್‌ಮುಖ್ ಅವರನ್ನು 2021 ರ ನವೆಂಬರ್ 2 ರಂದು ಬಂಧಿಸಲಾಗಿತ್ತು. ಅಂದಿನಿಂದ ಮಾಜಿ ಸಚಿವ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೀಗ ಅನಾರೋಗ್ಯದ ಸಮಸ್ಯೆಯಿಂದಾಗಿ ಕಳೆದ ವಾರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಕಳೆದ ವರ್ಷ, ಉನ್ನತ ಪೊಲೀಸ್ ಅಧಿಕಾರಿ ಪರಮ್ ಬೀರ್ ಸಿಂಗ್, ಆಗಿನ ಗೃಹ ಸಚಿವರಾಗಿದ್ದ ದೇಶಮುಖ್ ಅವರು ಮುಂಬೈನಲ್ಲಿ ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳಿಂದ ತಿಂಗಳಿಗೆ 100 ಕೋಟಿ ರೂಪಾಯಿ ಸಂಗ್ರಹಿಸಲು ಪೊಲೀಸ್ ಅಧಿಕಾರಿಗಳಿಗೆ ಟಾರ್ಗೆಟ್ ನೀಡಿದ್ದರು ಎಂದು ಆರೋಪಿಸಿದ್ದರು.
ಮಾಜಿ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ವಾಝೆ ಅವರ ವಿರುದ್ಧವೂ ಇದೇ ರೀತಿಯ ಆರೋಪಗಳನ್ನು ಮಾಡಿದ್ದರು. 2021ರ ಏಪ್ರಿಲ್‌ನಲ್ಲಿ ಹೈಕೋರ್ಟ್ ಪ್ರಾಥಮಿಕ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿತ್ತು. ತನಿಖೆಯ ನಂತರ, ಸಿಬಿಐ ದೇಶ್‌ಮುಖ್ ಮತ್ತು ಅವರ ಸಹಚರರ ವಿರುದ್ಧ ಭ್ರಷ್ಟಾಚಾರ ಮತ್ತು ಅಧಿಕೃತ ಅಧಿಕಾರದ ದುರುಪಯೋಗದ ಆರೋಪದ ಮೇಲೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದೆ.
ಏಪ್ರಿಲ್ 2021 ರಲ್ಲಿ, ಮಾಜಿ ಮುಂಬೈ ಪೋಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಮಾಡಿದ ಭ್ರಷ್ಟಾಚಾರ ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶಿಸಿದ ನಂತರ ಅನಿಲ್ ದೇಶ್‌ಮುಖ್ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.