ಸುಡಾನ್ ನೆಲದಿಂದ 1,954 ಭಾರತೀಯರು ತಾಯ್ನಾಡಿಗೆ!
ನವದೆಹಲಿ: ಹಿಂಸಾಚಾರದ ಜ್ವಾಲೆಯಲ್ಲಿ ಧಗಧಗಿಸುತ್ತಿರುವ ಸುಡಾನ್‌ನಿಂದ ಭಾರತೀಯರ ರಕ್ಷಣಾ ಕಾರ್ಯ ಬಹುತೇಕ ಸಕ್ಸಸ್ ಆಗಿದೆ. ಇನ್ನೂ ಕೆಲವೇ ಮಂದಿ ಸುಡಾನ್‌ನಿಂದ ಭಾರತಕ್ಕೆ ಬರಬೇಕಿದ್ದು, ಈವರೆಗೂ 1,954 ಭಾರತೀಯರನ್ನು ತಾಯ್ನಾಡಿಗೆ ವಾಪಸ್ ಕರೆತರಲಾಗಿದೆ. ತೀವ್ರ ಸಂಕಷ್ಟದ ಪರಿಸ್ಥಿತಿ ನಡುವೆಯೂ ಭಾರತೀಯ ವೀರ ಯೋಧರು ದೇಶದ ಪ್ರಜೆಗಳನ್ನ ರಕ್ಷಿಸಿ ಕರೆತಂದಿದ್ದಾರೆ.
ಏಪ್ರಿಲ್ 15ರಂದು ಸುಡಾನ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಆ ಬಳಿಕ ನೂರಾರು ಜನರು ಬಲಿಯಾದರು. ಇಂತಹ ಪರಿಸ್ಥಿತಿ ನಡುವೆ ಭಾರತೀಯರು ತಾಯ್ನಾಡಿಗೆ ಬರಲು ಪರದಾಡುತ್ತಿದ್ದರು. ತಕ್ಷಣ ಅಲರ್ಟ್ ಆದ ಕೇಂದ್ರ ಸರ್ಕಾರ, ಸೇನೆಯನ್ನ ಸಜ್ಜುಗೊಳಿಸಿ, ಭಾರತೀಯರ ರಕ್ಷಣೆಗೆ 'ಆಪರೇಷನ್ ಕಾವೇರಿ' ಆರಂಭಿಸಿತ್ತು. ಈ ಮೂಲಕ ಸಾವಿರಾರು ಭಾರತೀಯರನ್ನ ಸಂಪರ್ಕಿಸಿ, ಸೂಕ್ತ ಜಾಗಕ್ಕೆ ಕರೆತಂದು ಸೌದಿ ಅರೇಬಿಯಾ ಮೂಲಕ ರಕ್ಷಿಸಿ ತಾಯ್ನಾಡಿಗೆ ಮರಳಿ ಕರೆತರಲಾಗಿದೆ.

ಭಾರತೀಯ ಸೇನೆಗೆ ಎದುರಾಗಿತ್ತು ಕಷ್ಟ
ಸುಡಾನ್ ನೆಲದಲ್ಲಿ ಇರುವ ವಿದೇಶಿಗರು ಅವರವರ ದೇಶಗಳಿಗೆ ತೆರಳಲು ವ್ಯವಸ್ಥೆ ಮಾಡಿಕೊಡಲು, ಸುಡಾನ್ ಸೇನೆ ಮತ್ತು ಅರೆಸೇನಾ ಪಡೆ ಒಪ್ಪಂದ ಮಾಡಿಕೊಂಡವು. ಇದರ ಪರಿಣಾಮ ಕಳೆದ 3 ದಿನದ ಹಿಂದೆ ಕದನ ವಿರಾಮವನ್ನು ಘೋಷಿಸಲಾಗಿತ್ತು. ಆದರೆ ಕದನ ವಿರಾಮ ಘೋಷಣೆ ಮಾಡಿದ್ದರೂ ಸುಡಾನ್ ಅರೆಸೇನಾ ಪಡೆಯಿಂದ ಕದನ ವಿರಾಮ ಉಲ್ಲಂಘನೆ ಆಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಇಷ್ಟೆಲ್ಲಾ ಸಂಕಷ್ಟದ ನಡುವೆ ಭಾರತದ ಸೈನಿಕರು ಭಾರತೀಯ ಪ್ರಜೆಗಳನ್ನ ರಕ್ಷಿಸಿದ್ದಾರೆ.
ಸೌದಿ ಮೂಲಕ ರಕ್ಷಣಾ ಕಾರ್ಯ
ಭಾರತದ ರಕ್ಷಣಾ ಕಾರ್ಯಕ್ಕೆ ನಮ್ಮ ದೇಶದ ಮಿತ್ರ ಸೌದಿ ಅರೇಬಿಯಾ ನೆರವಾಗುತ್ತಿದೆ. ಹೇಗೆಂದರೆ ಕೆಂಪು ಸಮುದ್ರ ತೀರದಲ್ಲಿ ಚಾಚಿಕೊಂಡಿರುವ ಸುಡಾನ್ ದೇಶಕ್ಕೆ ಸೌದಿ ಅರೇಬಿಯಾ ನೆರೆ ರಾಷ್ಟ್ರ. 2 ರಾಷ್ಟ್ರಗಳ ನಡುವೆ ಕೆಂಪು ಸಮುದ್ರ ಹರಡಿದೆ. ಹೀಗಾಗಿ ಸೌದಿ ಮೂಲಕ ಭಾರತೀಯರನ್ನ ರಕ್ಷಿಸಿ ಕರೆತರುವ ಕಾರ್ಯ ನಮ್ಮ ಸೇನೆಯಿಂದ ಮುಂದುವರಿದಿದೆ. ಇಲ್ಲಿಯವರೆಗೆ 1,954 ಭಾರತೀಯರನ್ನ ಸುರಕ್ಷಿತವಾಗಿ ಸುಡಾನ್ ನೆಲದಿಂದ ರಕ್ಷಿಸಿ ಭಾರತಕ್ಕೆ ಕರೆತರಲಾಗಿದೆ. ಮತ್ತಷ್ಟು ಭಾರತೀಯರು ಶೀಘ್ರದಲ್ಲೇ ತಾಯ್ನಾಡಿಗೆ ಬರಲಿದ್ದಾರೆ.
ಸುಡಾನ್ ನೆಲದಲ್ಲಿ ಏನಾಗಿತ್ತು?
ಅಂದಹಾಗೆ ಸುಡಾನ್ ದೇಶಕ್ಕೆ ಹೊಟ್ಟೆಪಾಡಿಗೆ ವಲಸೆ ಹೋಗಿದ್ದ ಭಾರತೀಯರು ಪರದಾಡಿದ್ದರು. ಏಪ್ರಿಲ್ 15ರ ತನಕ ಅಲ್ಲಿ ಎಲ್ಲವೂ ಸರಿಯಾಗಿತ್ತು. ಆದರೆ ಏಪ್ರಿಲ್ 15ರ ಮಧ್ಯಾಹ್ನ ಶುರುವಾಯಿತು ನೋಡಿ ದಿಢೀರ್ ದಂಗೆ. ಸುಡಾನ್ ಸೇನೆ ವಿರುದ್ಧ ಅಲ್ಲಿನ ಅರೆಸೇನಾ ಪಡೆ ಸೈನಿಕರು ಹಿಂಸಾಚಾರ ಆರಂಭಿಸಿದರು. ಅಲ್ಲಿಂದ ಮುಂದೆ ನೂರಾರು ಹೆಣಗಳು ಬೀದಿಯಲ್ಲೇ ಬಿದ್ದವು. ಸಾವಿರಾರು ಜನ ಕೈಕಾಲು ಕಳೆದುಕೊಂಡು ಆಸ್ಪತ್ರೆ ಸೇರಿದ್ದಾರೆ. ಇಂತಹ ದೇಶದಲ್ಲಿ ನರಳುತ್ತಿದ್ದ ಭಾರತೀಯರನ್ನ ರಕ್ಷಿಸಿ ಕರೆತರಲಾಗುತ್ತಿದೆ.

ಕನ್ನಡಿಗರ ಜೀವನದಿ ಹೆಸರು!
ಹೌದು, ಕನ್ನಡಿಗರ ಜೀವನದಿ ಹೆಸರನ್ನು ಸುಡಾನ್ ಕಾರ್ಯಾಚರಣೆ ಇಡಲಾಗಿದೆ. 'ಆಪರೇಷನ್ ಕಾವೇರಿ' ಹೆಸರಲ್ಲಿ ಭಾರತೀಯ ಪ್ರಜೆಗಳನ್ನ ರಕ್ಷಿಸಲಾಗುತ್ತಿದೆ. ಪ್ರಮುಖವಾಗಿ ಸುಡಾನ್ ನೆಲದಲ್ಲಿ ಪರದಾಡಿದ್ದ ಹಕ್ಕಿಪಿಕ್ಕಿ ಜನರನ್ನು ರಕ್ಷಣೆ ಮಾಡಿ ಭಾರತಕ್ಕೆ ಕರೆತರಲಾಗುತ್ತಿದೆ. ಈಗಾಗಲೇ ಬಹುತೇಕ ವಿದೇಶಿಗರು ಸುಡಾನ್ ನೆಲದಿಂದ ಹೊರಟಿದ್ದಾರೆ. ಆದರೆ ಸುಡಾನ್ ಹಿಂಸಾಚಾರಕ್ಕೆ ರಕ್ತದಾಹ ಮಾತ್ರ ಕಡಿಮೆಯಾಗಿಲ್ಲ, ಹೀಗಾಗಿ ಇನ್ನೊಂದು ರೌಂಡ್ ಹಿಂಸಾಚಾರ ಆರಂಭಿಸಲು ಸುಡಾನ್ ಸೇನೆ ಮತ್ತು ಅರೆಸೇನಾ ಪಡೆ ಸಜ್ಜಾಗಿದೆ.
ಬೀದಿಗೆ ಬಿದ್ದ ತುಂಬು ಗರ್ಭಿಣಿಯರು
ಇದಿಷ್ಟು ಮಾತ್ರವಲ್ಲ, ವಿಶ್ವಸಂಸ್ಥೆಯ ನಿರಾಶ್ರಿತ ಕೇಂದ್ರದ ವರದಿ ಪ್ರಕಾರ ಸುಡಾನ್ ಹಿಂಸಾಚಾರ ಆರಂಭವಾದ ನಂತರ 11 ಲಕ್ಷ ಬೀದಿಗೆ ಬಿದ್ದಿದ್ದಾರೆ. ಹೀಗೆ ಮನೆ ಕಳೆದುಕೊಂಡು ನರಳುತ್ತಿರುವ ನಿರಾಶ್ರಿತರ ಪೈಕಿ 24 ಸಾವಿರ ಗರ್ಭಿಣಿಯರು ಕೂಡ ಸೇರಿದ್ದಾರಂತೆ. ಇವರಿಗೆಲ್ಲಾ ಮುಂದಿನ ವಾರದಲ್ಲಿ ಹೆರಿಗೆ ಆಗುವುದಿದೆ ಎಂದಿದೆ ವರದಿ. ಸುಡಾನ್ ದೇಶಾದ್ಯಂತ ಒಟ್ಟು 2,19,000 ಗರ್ಭಿಣಿಯರಿದ್ದಾರೆ. ಆದರೆ ಸೇನಾ ಪಡೆ, ಅರೆಸೇನಾ ಪಡೆ ಹುಚ್ಚಾಟದಲ್ಲಿ ತುಂಬು ಗರ್ಭಿಣಿಯರಿಗೆ ಸರಿಯಾದ ಚಿಕಿತ್ಸೆ ಸಿಗದೆ ಬೀದಿಗೆ ಬಿದ್ದಂತಾಗಿದೆ.












Click it and Unblock the Notifications