ವಿಡಿಯೋ: ಮಹಿಳಾ ಅರಣ್ಯ ಅಧಿಕಾರಿಯ ಥಳಿಸಿದ ಶಾಸಕನ ಸಹೋದರ
ಹೈದರಾಬಾದ್, ಜುಲೈ 01: ಖಾಕಿ ಸಮವಸ್ತ್ರ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಅರಣ್ಯ ಅಧಿಕಾರಿಯೊಬ್ಬರನ್ನು ದೊಣ್ಣೆಯಿಂದ ಶಾಸಕನ ತಮ್ಮನೊಬ್ಬ ಹೊಡೆದಿರುವ ಘಟನೆ ತೆಲಂಗಾಣ ರಾಜ್ಯದಲ್ಲಿ ವರದಿಯಾಗಿದೆ.
ತೆಲಂಗಾಣದ ಕೌಮರಮ್ ಭೀಮ್ ಆಸಿಫಾಬಾದ್ ಜಿಲ್ಲೆಯ ಸರಸಲ ಎಂಬ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಮತ್ತು ಸ್ಥಳೀಯ ಶಾಸಕನ ಸಹೋದರ ಆಗಿರುವ ಕೋನೇರು ಕೃಷ್ಣ ಎಂಬಾತ ಕರ್ತವ್ಯ ನಿರತ ಮಹಿಳಾ ಅಧಿಕಾರಿಗೆ ದೊಣ್ಣೆಯಿಂದ ಭಾರಿಸಿದ್ದಾನೆ.
ಕೋನೇರು ಕೃಷ್ಣ ಅಮಾನುಷವಾಗಿ ಮಹಿಳಾ ಅಧಿಕಾರಿಗೆ ಹೊಡೆಯುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಕೊನೇರು ಕೃಷ್ಣನನ್ನು ಬಂಧಿಸಿದ್ದಾರೆ.

ಅರಣ್ಯ ಅಧಿಕಾರಿ ಅನಿತಾ ಅವರು ಸರ್ಕಾರದ ಯೋಜನೆಯಾದ 'ಹರಿತ ಹರಂ' ಯೋಜನೆ ಅಡಿಯಲ್ಲಿ ಗಿಡ ನೆಡಲು ಸರಸಲ ಗ್ರಾಮಕ್ಕೆ ಹೋಗಿದ್ದಾರೆ. ಆಗ ಅಲ್ಲಿಗೆ ತನ್ನ ಬೆಂಬಲಿಗರೊಂದಿಗೆ ಭಾವಿಸಿದ ಕೋನೇರು ಕೃಷ್ಣ ದೊಣ್ಣೆಗಳೊಂದಿಗೆ ಬಂದು ಅರಣ್ಯ ಅಧಿಕಾರಿಗಳ ವಾಹನಗಳು, ಅರಣ್ಯ ಸಿಬ್ಬಂದಿ ಮತ್ತು ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ.
ಅನಿತಾ ಅವರಿಗೆ ಕೈ ಮತ್ತು ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು, ಅನಿತಾ ಅವರು ಆಸ್ಪತ್ರೆಯಲ್ಲಿದ್ದಾರೆ. ಹಲ್ಲೆ ಮಾಡಿರುವ ಕೋನೇರು ಕೃಷ್ಣ, ಸಿರಪುರದ ಟಿಆರ್‌ಎಸ್ ಶಾಸಕ ಕೋನೇರು ಕೋನಪ್ಪ ಅವರ ಸಹೋದರನಾಗಿದ್ದಾನೆ. ಹಲ್ಲೆ ಮಾಡಿರುವ ಕೋನೇರು ಕೃಷ್ಣ ಸಹ ಟಿಆರ್‌ಎಸ್ ಪಕ್ಷಕ್ಕೆ ಸೇರಿದವನಾಗಿದ್ದಾನೆ.
ಘಟನೆ ಬಗ್ಗೆ ಮಾತನಾಡಿರುವ ತೆಲಂಗಾಣ ಅರಣ್ಯ ಇಲಾಖೆ ಉನ್ನತ ಅಧಿಕಾರಿ, ಅನಿತಾ ಅವರು ಸಿಬ್ಬಂದಿಯೊಂದಿಗೆ ಗಿಡ ನೆಡಲು ತೆರಳಿದ್ದ ಸ್ಥಳ ಅರಣ್ಯ ಇಲಾಖೆಗೆ ಸೇರಿದ್ದು, ಈ ಬಗ್ಗೆ ಸ್ಥಳೀಯ ಶಾಸಕರಿಗೂ ಮೊದಲೇ ತಿಳಿಸಲಾಗಿತ್ತು. ಘಟನೆಯನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸಿದ್ದು ಸೂಕ್ತ ಕ್ರಮಗಳನ್ನು ಮುಂದೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.












Click it and Unblock the Notifications