ಕೆಸಿಆರ್ ಪುತ್ರಿ ಮೇಲೆ ದೇಶದ್ರೋಹದ ಕೇಸ್
ಹೈದರಾಬಾದ್, ಆ.12: 'ಹೈದರಾಬಾದ್ ಮತ್ತು ಜಮ್ಮು-ಕಾಶ್ಮೀರ ಪ್ರದೇಶಗಳು ಬಲವಂತವಾಗಿ ಭಾರತದೊಂದಿಗೆ ವಿಲೀನವಾಗಿವೆ. ಭಾರತ ಈ ಪ್ರದೇಶಗಳನ್ನ ಬಿಟ್ಟುಕೊಡುವುದು ಒಳಿತು' ಎಂದು ಹೇಳಿಕೆ ನೀಡಿರುವ ತೆಲಂಗಾಣ ರಾಷ್ಟ್ರ ಸಮಿತಿಯ ಸಂಸದೆ ಕೆ.ಕವಿತಾ ವಿರುದ್ಧ ದೇಶದ್ರೋಹದ ಕೇಸ್ ದಾಖಲಾಗಿದೆ.
ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರಿಯೂ ಆಗಿರುವ ಕವಿತಾ ವಿರುದ್ಧ ದೇಶದ್ರೋಹದ ಆರೋಪದ ಮೇಲೆ ಮದನಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಎಫ್ ಐಆರ್ ಹಾಕಿದ್ದಾರೆ.
ಮಾಧ್ಯಮವೊಂದರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವೇಳೆ ಕವಿತಾ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. 'ಜಮ್ಮು ಮತ್ತು ಕಾಶ್ಮೀರ ಹಾಗೂ ತೆಲಂಗಾಣವನ್ನ ಬಲವಂತವಾಗಿ ಭಾರತದ ಒಕ್ಕೂಟಕ್ಕೆ ಸೇರಿಸಲಾಯಿತು. ಪ್ರತ್ಯೇಕ ರಾಷ್ಟ್ರಗಳಾಗಿದ್ದ ನಮ್ಮನ್ನ ಸ್ವಾತಂತ್ರ್ಯೋತ್ತರದಲ್ಲಿ ಭಾರತದ ಒಕ್ಕೂಟಕ್ಕೆ ಸೇರಿಸಲಾಯಿತು. 1947ರಲ್ಲಿ ನಾವು ಭಾರತದ ಅಂಗವಾಗಿರಲಿಲ್ಲ' ಎಂದು ಟಿಆರ್ ಎಸ್ ಸಂಸದೆ ಅಭಿಪ್ರಾಯಪಟ್ಟಿದ್ದರು.

ಕಾಶ್ಮೀರ ಮತ್ತು ತೆಲಂಗಾಣವನ್ನ ಪ್ರತ್ಯೇಕ ರಾಷ್ಟ್ರ ಮಾಡಬೇಕೆಂದು ಪರೋಕ್ಷವಾಗಿ ಆಗ್ರಹಿಸಿದ್ದ ಕವಿತಾ, " ಕೆಲವೊಂದು ಭಾಗಗಳು ನಮ್ಮವಾಗಿರಲಿಲ್ಲ. ಅದನ್ನ ಒಪ್ಪಿಕೊಳ್ಳಬೇಕು. ಅಂತಾರಾಷ್ಟ್ರೀಯ ಗಡಿಯನ್ನ ಪುನಾರಚಿಸಿ ಮುಂದುವರಿಯಬೇಕು" ಎಂದು ಹೇಳಿದ್ದರು.
ಕವಿತಾರ ಈ ವಿವಾದಾತ್ಮಕ ಮಾತುಗಳನ್ನ ಆಕ್ಷೇಪಿಸಿ ಹೈದರಾಬಾದ್ ನ ವಕೀಲರೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ದೂರಿನ ಆಧಾರದ ಮೇಲೆ ಮದನ್ ಪೇಟ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಕವಿತಾ ಅವರ ಹೇಳಿಕೆ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ, ನಿಜಾಮಾಬಾದ್ ಸಂಸದೆ ಕವಿತಾ ವಿರುದ್ಧ ಕ್ರಮ ಜರುಗಿಸುವಂತೆ ಆದೇಶಿಸಿತ್ತು. ಕೋರ್ಟ್ ಆದೇಶ ಬಂದ ಒಂದು ವಾರದ ನಂತರ ಕ್ರಮ ಜರುಗಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಸೋಮವಾರ ಕೋರ್ಟಿಗೆ ಈ ಬಗ್ಗೆ ಪೊಲೀಸರು ವಿವರಣೆ ನೀಡಿದ್ದಾರೆ.
ಬಿಜೆಪಿ ಮುಖಂಡ ಹಾಗೂ ವಕೀಲ ಕೆ ಕರುಣಾಸಾಗರ್ ಅವರ ಅರ್ಜಿ ಪರಿಗಣಿಸಿ ಆ.5 ರಂದು ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ನೀಡಿದ ಆದೇಶ ನೀಡಿದರು. (ಐಎಎನ್ಎಸ್)











Click it and Unblock the Notifications