ಆ.9 ರಿಂದ ಭಕ್ತರಿಗೆ ತಿರುಪತಿ ತಿಮ್ಮಪ್ಪನ ದರ್ಶನವಿಲ್ಲ
ಹೈದರಾಬಾದ್, ಜುಲೈ 14 : ಆಗಸ್ಟ್ ತಿಂಗಳಿನಲ್ಲಿ 9 ದಿನ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಸಾಧ್ಯವಿಲ್ಲ. ಟಿಟಿಡಿ ಆಡಳಿತ ಮಂಡಳಿ ಶನಿವಾರ ಈ ಕುರಿತು ಆದೇಶ ಹೊರಡಿಸಿದೆ.
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್ ಶನಿವಾರ ತುರ್ತು ಸಭೆ ನಡೆಸಿತು. ಸಭೆಯ ಬಳಿಕ ಟಿಟಿಡಿ ಅಧ್ಯಕ್ಷ ಪುಟ್ಟಾ ಸುಧಾಕರ್ ಯಾದವ್ ಸಭೆಯ ವಿವರಗಳನ್ನು ನೀಡಿದರು. 9 ದಿನಗಳ ಕಾಲ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಪ್ರತಿ 12 ವರ್ಷಕ್ಕೊಮ್ಮೆ ದೇವಾಲಯದಲ್ಲಿ 'ಅಷ್ಟಬಂಧ ಬಾಲಾಲಯ ಮಹಾಪ್ರೋಕ್ಷಣಂ' ಎಂಬ ಕಾರ್ಯಕ್ರಮ ನಡೆಯುತ್ತದೆ. ಆಗಸ್ಟ್ 9 ರಿಂದ 17ರ ತನಕ ಈ ಕಾರ್ಯಕ್ರಮ ನಡೆಯಲಿದೆ. ಈ ಸಮಯದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ.

ಆಗಸ್ಟ್ 11ರಂದು ದೇವಾಲಯದಲ್ಲಿ ಮಹಾಧಿವೇಶನ ನಡೆಯಲಿದೆ. ಆದರೆ, 9 ದಿನಗಳ ಕಾಲ ಭಕ್ತರಿಗೆ ದೇವಾಲಯಕ್ಕೆ ಭೇಟಿ ನೀಡಲು ಅವಕಾಶ ನೀಡುವುದಿಲ್ಲ ಎಂದು ಟಿಟಿಡಿ ಹೇಳಿದೆ. ಆಡಳಿತ ಮಂಡಳಿ ಈ ನಿರ್ಧಾರ ಭಕ್ತರ ಆಕ್ರೋಶಕ್ಕೂ ಕಾರಣವಾಗಿದೆ.
ಮೊದಲು ತಿರುಪತಿ ದೇವಾಲಯ ದಿನಕ್ಕೆ 30 ರಿಂದ 35 ಸಾವಿರ ಭಕ್ತರಿಗೆ ಮಾತ್ರ ಪ್ರವೇಶ ನೀಡುವ ಕುರಿತು ಚಿಂತನೆ ನಡೆಸಿತ್ತು. ಆದರೆ, ಈಗ ಭಕ್ತರ ಭೇಟಿಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ ತೀರ್ಮಾನ ಕೈಗೊಂಡಿದೆ.
'ಅಷ್ಟಬಂಧ ಬಾಲಾಲಯ ಮಹಾಪ್ರೋಕ್ಷಣಂ' ಕಾರ್ಯಕ್ರಮದಲ್ಲಿ ಸುಮಾರು 44 ಋತ್ವಿಕರು, 100 ಪ್ರಧಾನ ಪಂಡಿತರು ಪಾಲ್ಗೊಳ್ಳಲಿದ್ದಾರೆ. ಆಗಸ್ಟ್ 17 ರಿಂದಲೇ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದ್ದು, ಪ್ರತಿದಿನ ಮಹಾಮಸ್ತಕಾಭಿಷೇಕ ನಡೆಯಲಿದೆ.












Click it and Unblock the Notifications