ತಿರುಪತಿ ಹುಂಡಿ ಕಾಣಿಕೆ ಸಂಗ್ರಹ 3 ಕೋಟಿಯಿಂದ 73 ಲಕ್ಷಕ್ಕೆ ಇಳಿಕೆ!
ಹೈದರಾಬಾದ್, ಆಗಸ್ಟ್ 13 : ತಿರುಪತಿ ದೇವಾಲಯದ ಹುಂಡಿಯಲ್ಲಿ ಸಂಗ್ರಹವಾಗುವ ಮೊತ್ತದಲ್ಲಿ ಗಣನೀಯ ಇಳಿಕೆಯಾಗಿದೆ. ಮಹಾಸಂಪ್ರೋಕ್ಷಣಂ ಕಾರ್ಯಕ್ರಮ ನಡೆಯುತ್ತಿರುವುದರಿಂದ ಭಕ್ತರು ದೇವರ ದರ್ಶನ ಪಡೆಯಲು ನಿರ್ಬಂಧ ಹೇರಲಾಗಿದೆ.
ಚಿನ್ನದ ಹರಕೆ, ಕಾಣಿಕೆ ಹೊರತಾಗಿ ಎಲ್ಲಾ ಹುಂಡಿಗಳನ್ನು ಸೇರಿಸಿದರೆ ದಿನಕ್ಕೆ ಸುಮಾರು 3 ಕೋಟಿ ರೂ. ಸಂಗ್ರಹವಾಗುತ್ತಿತ್ತು. ಆದರೆ, ಸೋಮವಾರ ಹುಂಡಿ ಏಣಿಕೆ ಮಾಡಿದಾಗ ಕೇವಲ 73 ಲಕ್ಷ ಮಾತ್ರ ಸಂಗ್ರಹವಾಗಿದೆ.
ಪ್ರತಿ 12 ವರ್ಷಕ್ಕೊಮ್ಮೆ ತಿರುಪತಿಯಲ್ಲಿ ಮಹಾಸಂಪ್ರೋಕ್ಷಣಂ ಎಂಬ ಕಾರ್ಯಕ್ರಮ ನಡೆಯುತ್ತದೆ. ಐದು ದಿನಗಳ ಕಾಲ ದೇವಾಲಯದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತವೆ. ಶನಿವಾರ ಸಂಜೆಯಿಂದ ಮಹಾಸಂಪ್ರೋಕ್ಷಣಂ ಕಾರ್ಯಕ್ರಮ ಆರಂಭವಾಗಿದೆ. ಭಕ್ತಾದಿಗಳ ಭೇಟಿಗೆ ನಿರ್ಬಂಧ ಹಾಕಲಾಗಿದೆ.

ಭಕ್ತರ ಭೇಟಿಗೆ ಅವಕಾಶ ಇಲ್ಲದ ಹಿನ್ನಲೆಯಲ್ಲಿ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆ ಆಗಿದೆ. ಆದ್ದರಿಂದ, ಹುಂಡಿಯಲ್ಲಿನ ಹಣದ ಸಂಗ್ರಹ ಕಡಿಮೆಯಾಗಿದೆ. ಇಷ್ಟೊಂದು ಹುಂಡಿ ಹಣ ಕಡಿಮೆ ಆಗಿರುವುದು ಹಲವು ವರ್ಷಗಳ ಬಳಿಕ ಇದೇ ಮೊದಲು.
ಮಹಾಸಂಪ್ರೋಕ್ಷಣಂ ಕಾರ್ಯಕ್ರಮಕ್ಕಾಗಿ ಹಲವು ಅರ್ಚಕರ ತಂಡ ದೇವಾಲಯಕ್ಕೆ ಆಗಮಿಸಿದೆ. ಐದು ದಿನಗಳ ಕಾಲ ಅಷ್ಟಬಂಧ ಬಾಲಾಲಯ, ಬಿಂಬ ಪ್ರತಿಷ್ಠೆ, ಕಲಶಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.












Click it and Unblock the Notifications