ಭಾರತದಲ್ಲಿ ಒಂದು ದೇವಸ್ಥಾನ, ಅದರಲ್ಲಿ ಡೊನಾಲ್ಡ್ ಟ್ರಂಪ್ ದೇವರು
ಹೈದರಾಬಾದ್, ಫೆಬ್ರವರಿ 24: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗಾಗಿ ದೇವಸ್ಥಾನವೊಂದು ನಿರ್ಮಾಣಗೊಂಡಿದೆ.
ತೆಲಂಗಾಣದಲ್ಲಿ ಅಭಿಮಾನಿಯೊಬ್ಬರು ಟ್ರಂಪ್‌ಗಾಗಿಯೇ ದೇವಸ್ಥಾನ ನಿರ್ಮಿಸಿದ್ದಾರೆ.ತೆಲಂಗಾಣದ ಜನ್‍ಗಾನ್ ಜಿಲ್ಲೆಯ ಬುಸ್ಸಾ ಕೃಷ್ಣ ಎಂಬವರು ಟ್ರಂಪ್‍ನ ಅಪ್ಪಟ ಅಭಿಮಾನಿ. ಟ್ರಂಪ್‍ಗಾಗಿ ದೇಗುಲ ಕಟ್ಟಿಸಿರುವ ಕೃಷ್ಣ, 6 ಅಡಿ ಎತ್ತರದ ಟ್ರಂಪ್ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ನಿತ್ಯ ಪೂಜಿಸುತ್ತಿದ್ದಾರೆ. ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ.
ಇಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸುತ್ತಿದ್ದಾರೆ. ಟ್ರಂಪ್ ಸ್ವಾಗತಿಸಲು ಇಡೀ ದೇಶಕ್ಕೆ ದೇಶವೇ ಸಜ್ಜಾಗಿದೆ. ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಟ್ರಂಪ್‍ಗೆ ಸ್ವಾಗತ ಕೋರುತ್ತಿದ್ದಾರೆ. ಆದರೆ ತೆಲಂಗಾಣ ರಾಜ್ಯದಲ್ಲಿ ಟ್ರಂಪ್ ಅಭಿಮಾನಿಯೊಬ್ಬರು ತನ್ನ ನೆಚ್ಚಿನ ನಾಯಕನಿಗಾಗಿ ದೇವಸ್ಥಾನವನ್ನೇ ಕಟ್ಟಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬುಸ್ಸಾ ಕೃಷ್ಣ, ನಾನು ನಾಲ್ಕು ವರ್ಷಗಳ ಹಿಂದೆ ಡೊನಾಲ್ಡ್ ಟ್ರಂಪ್ ಅವರನ್ನು ಪೂಜಿಸಲು ಆರಂಭಿಸಿದ್ದೆ. ನನ್ನ ಸಂಬಂಧಿಕರಿಂದ ನಾನು ತೊಂದರೆಗಳನ್ನು ಎದುರಿಸುತ್ತಿದ್ದೇನೆ. ನಾನು ಸಮಾಜವನ್ನು ಅವಮಾನಿಸುತ್ತಿದ್ದೇನೆ ಎಂದು ಅವರು ನನಗೆ ಹೇಳುತ್ತಾರೆ.
ಬುಸ್ಸಾ ಕೃಷ್ಣನ ಈ ನಡೆಯನ್ನು ನೋಡಿದ ಹಲವರು ಈತ ಹುಚ್ಚ ಎಂದು ಹೀಯಾಳಿಸಿದರು ಎನ್ನಲಾಗಿದೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕೃಷ್ಣ ತನ್ನ ಅಭಿಮಾನವನ್ನು ಮುಂದುವರಿಸಿದ್ದಾರೆ. ಸದ್ಯ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ದೇವಸ್ಥಾನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.












Click it and Unblock the Notifications