ಬೆಳಗ್ಗೆ ಬಿಜೆಪಿ ಸೇರಿ ರಾತ್ರಿಗೆ ಕಾಂಗ್ರೆಸ್ಸಿಗೆ ಮರಳಿದ ಪದ್ಮಿನಿ ರೆಡ್ಡಿ
ಹೈದರಾಬಾದ್, ಅಕ್ಟೋಬರ್ 12: ಹಿರಿಯ ಕಾಂಗ್ರೆಸ್ ನಾಯಕ ಸಿ ದಾವೋದರ್ ರಾಜನರಸಿಂಹ ಅವರ ಪತ್ನಿ, ಸಾಮಾಜಿಕ ಕಾರ್ಯಕರ್ತೆ ಪದ್ಮಿನಿ ರೆಡ್ಡಿ ಅವರ ಪಕ್ಷ ನಿಷ್ಠೆ ಈಗ ಚರ್ಚೆಯ ವಿಷ್ಯವಾಗಿದೆ.
ಬೆಳಗ್ಗೆ ಕಾಂಗ್ರೆಸ್ಸಿನವರ ಜತೆ ಉಪಹಾರ ಸೇವಿಸಿದ್ದರು, ಮಧ್ಯಾಹ್ನ ಬಿಜೆಪಿಯವರ ಜತೆ ಊಟ ಮಾಡಿದರು, ರಾತ್ರಿ ವೇಳೆಗೆ ಹಳೆ ಗಂಡನ ಪಾದವೇ ಗತಿ ಎಂದು ಮತ್ತೆ ಕೈ ಪಕ್ಷಕ್ಕೆ ಮರಳಿದ್ದಾರೆ. ಪದ್ಮಿನಿ ರೆಡ್ಡಿ ಅವರು 10 ಗಂಟೆ ಕಾಲದಲ್ಲಿ ಪಕ್ಷದಿಂದ ಪಕ್ಷಕ್ಕೆ ಹಾರಿ, ವಾಪಸ್ ಆಗಿರುವ ಘಟನೆ ನಡೆದಿದೆ.

ಗುರುವಾರದಇಂದು ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರಿದ್ದಾರೆ. ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಕಿರಣ್ ಕುಮಾರ್ ರೆಡ್ಡಿ ಅವರ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿ ರಾಜನರಸಿಂಹ ಅವರು ಕಾರ್ಯ ನಿರ್ವಹಿಸಿದ್ದರು.
ಮೇಡಕ್ ಜಿಲ್ಲೆಯಲ್ಲಿ ಸಾಮಾಜಿಕ ಕಾರ್ಯಗಳ ಮೂಲಕ ಮನೆ ಮಾತಾಗಿರುವ ಶ್ರೀಮತಿ ಪದ್ಮಿನಿ ರೆಡ್ಡಿ ಅವರು ಮೋದಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ, ಬಿಜೆಪಿ ಸೇರಿರುವುದು ಸಂತಸ ತಂದಿದೆ ಎಂದು ತೆಲಂಗಾಣ ಬಿಜೆಪಿಯ ಅಧ್ಯಕ್ಷ ಕೆ ಲಕ್ಷ್ಮಣ್ ಪ್ರತಿಕ್ರಿಯಿಸಿದ್ದರು.
ಡಿಸೆಂಬರ್ 07ರಂದು ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ತಯಾರಿ ಜೋರಾಗಿ ನಡೆದಿದೆ. ರಾಜ್ಯ ಕಾಂಗ್ರೆಸ್ಸಿನ ಪ್ರಣಾಳಿಕಾ ಸಮಿತಿಯ ಮುಖ್ಯಸ್ಥರಾಗಿರುವ ದಾವೋದರ್ ರಾಜನರಸಿಂಹ ಅವರ ಪತ್ನಿ ಈಗ ಬಿಜೆಪಿ ಸೇರಿರುವುದು, ರಾಜಕೀಯ ವಲಯದಲ್ಲಿ ಹಲವರ ಹುಬ್ಬೇರಿಸಿತ್ತು. ಬಿಜೆಪಿಗೆ ಪ್ರಬಲ ಅಭ್ಯರ್ಥಿ ಸಿಕ್ಕ ಖುಷಿಯಿತ್ತು.
ಆದರೆ, ಎಲ್ಲವೂ ಕ್ಷಣಿಕವಾಗಿತ್ತು. ಪಕ್ಷದ ಕಾರ್ಯಕರ್ತರ ಒತ್ತಡಕ್ಕೆ ಮಣಿದು ನಾನು ಮರಳಿ ಕಾಂಗ್ರೆಸ್ಸಿಗೆ ಹೋಗುತ್ತಿದ್ದೇನೆ ಎಂದು ಪದ್ಮಿನಿ ಅವರು ಸಂಜೆ ವೇಳೆ ಹೊರಟು ನಿಂತಾಗ ತೆಲಂಗಾಣ ಬಿಜೆಪಿ ಮುಖಂಡರಲ್ಲಿ ನಿರಾಶೆ ಮೂಡಿತ್ತು.
ಮಹಿಳಾ ಸಬಲೀಕರಣ, ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ಆಕೆ ಮಾಡಿರುವ ಕೆಲಸಗಳನ್ನು ಮೆಚ್ಚಿ ಬಿಜೆಪಿಗೆ ಬರುವಂತೆ ಆಹ್ವಾನಿಸಲಾಯಿತು. ಈಗ ಬಿಜೆಪಿ ತೊರೆದಿದ್ದಾರೆ. ಅವರ ನಿರ್ಣಯವನ್ನು ನಾವು ಗೌರವಿಸುತ್ತೇವೆ ಎಂದು ತೆಲಂಗಾಣ ಬಿಜೆಪಿ ವಕ್ತಾರ ಕೃಷ್ಣ ಸಾಗರ ರಾವ್ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications