ಇಂದು ಓವೈಸಿ-ಕೆಸಿಆರ್ ಭೇಟಿ, ತೆಲಂಗಾಣ ರಾಜಕೀಯದಲ್ಲಿ ತಲ್ಲಣ
ಹೈದರಾಬಾದ್, ಡಿಸೆಂಬರ್ 10: ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರನ್ನು ಇಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ಅವರು ಭೇಟಿ ಮಾಡಲಿದ್ದೆ.
ಸೋಮವಾರ ಮಧ್ಯಾಹ್ನ 03 ಗಂಟೆಗೆ ಉಭಯ ನಾಯಕರೂ ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಡಿಸೆಂಬರ್ 7 ರಂದು ನಡೆದಿದ್ದ ತೆಲಂಗಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಡಿ.11 ರಂದು ಬಿಡುಗಡೆಯಾಗಲಿದೆ. ಫಲಿತಾಂಶಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಇಬ್ಬರು ನಾಯಕರು ಭೇಟಿಯಾಗುತ್ತಿರುವುದು ಕುತೂಹಲ ಕೆರಳಿಸಿದೆ.
ಚುನಾವಣೋತ್ತರ ಸಮೀಕ್ಷೆಗಳು ತೆಲಂಗಾಣ ರಾಷ್ಟ್ರ ಸಮಿತಿಯು ತೆಲಂಗಾಣದಲ್ಲಿ ಬಹುಮತ ಪಡೆಯುವುದು ಬಹುತೇಕ ಖಚಿತ ಎಂದಿದೆ. ರಾಜಕೀಯ ಪಂಡಿತರದ್ದೂ ಅದೇ ಲೆಕ್ಕಾಚಾರ.

ಒಟ್ಟು 119 ಕ್ಷೇತ್ರಗಳ ವಿಧಾನಸಭೆಯಲ್ಲಿ ಮ್ಯಾಜಿಕ್ ನಂಬರ್ 60. ಅದನ್ನು ಟಿಆರ್ ಎಸ್ ಸುಲಭವಾಗಿ ಪಡೆಯಬಹುದು. ಅಕಸ್ಮಾತ್ ಪಡೆಯದಿದ್ದರೂ, ಟಿಆರ್ ಎಸ್ ಗೆ ಬೆಂಬಲ ನೀಡುವ ಸೂಚನೆಯನ್ನು ಈಗಾಗಲೇ ಬಿಜೆಪಿಯೇ ನೀಡಿದೆ. ಅದರೊಟ್ಟಿಗೆ ಓವೈಸಿ ಸಹ ಕೆಸಿಆರ್ ಅವರನ್ನು ಭೇಟಿ ಮಾಡುತ್ತಿರುವುದು ಟಿಆರ್ ಎಸ್ ಗೆ ಆನೆಬಲ ಸಿಕ್ಕಂತಾಗಿದೆ.
ಕಾಂಗ್ರೆಸ್ ಮತ್ತು ಟಿಡಿಪಿ ನೇತೃತ್ವದ ಮೈತ್ರಿ ಸರ್ಕಾರ ತೆಲಂಗಾಣದಲದ್ಲಿ ಬಹುಮತ ಪಡೆಯಲು ವಿಫಲವಾಗಲಿದೆ ಎಂದು ಸಮೀಕ್ಷೆಗಳು ಹೇಳಿವೆ.












Click it and Unblock the Notifications