ಲೋಕಸಭೆ ಚುನಾವಣೆಗೂ ಮುನ್ನವೇ ಟಿಡಿಪಿ-ಕಾಂಗ್ರೆಸ್ ನಡುವೆ ಬಿರುಕು
Recommended Video

ಹೈದರಾಬಾದ್, ಜನವರಿ 07: ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದಿಂದ ಹೊರಬರುತ್ತಿದ್ದಂತೆಯೇ ತೆಲಗು ದೇಶಂ ಪಕ್ಷ ಮೊದಲು ಮಾಡಿದ ಕೆಲಸವೆಂದರೆ ಕಾಂಗ್ರೆಸ್ ಸ್ನೇಹ ಬೆಳೆಸಿದ್ದು. ತೆಲಂಗಾಣ ವಿಧಾನಸಭೆ ಚುನಾವಣೆಯನ್ನೂ ಮೈತ್ರಿಕೂಟವಾಗಿಯೇ ಎದುರಿಸಿದ ಟಿಡಿಪಿ-ಕಾಂಗ್ರೆಸ್ ನಡುವೆ ಲೋಕಸಭಾ ಚುನಾವಣೆಗೂ ಮುನ್ನವೇ ಬಿರುಕು ಕಾಣಿಸಿಕೊಳ್ಳುತ್ತಿದೆಯೇ ಎಂಬ ಅನುಮಾನ ಇದೀಗ ದಟ್ಟವಾಗಿದೆ.
ತೆಲಂಗಾಣದಲ್ಲಿ ಟಿಡಿಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಕೆಲ ಕಾಂಗ್ರೆಸ್ ನಾಯಕರಿಗೇ ಇಷ್ಟವಿಲ್ಲ. ಆದರೆ ಹೈಕಮಾಂಡ್ ಗೆ ಸೆಡ್ಡು ಹೊಡೆಯುವ ಧೈರ್ಯವಿಲ್ಲದೆ ಭಿನ್ನಾಭಿಪ್ರಾಯವನ್ನು ನುಂಗಿಕೊಂಡು ಸುಮ್ಮನಿದ್ದಾರೆ.
ಟಿಡಿಪಿ ಜೊತೆಯಾಗಿ ಕಾಂಗ್ರೆಸ್ ಚುನಾವಣೆ ಎದುರಿಸಿದ್ದೇ ಆದರೆ ಮಣ್ಣುಮುಕ್ಕಬೇಕಾಗುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕೊಮಟಿರೆಡ್ಡಿ ವೆಂಕಟ ರೆಡ್ಡಿ ಹೇಳಿದ್ದಾರೆ. ಈ ಮೂಲಕ ಟಿಡಿಪಿ-ಕಾಂಗ್ರೆಸ್ ನಡುವೆ ಎಲ್ಲವೂ ಸರಿ ಇಲ್ಲ ಎಂಬ ಸೂಚನೆ ನೀಡಿದ್ದಾರೆ.

ತೆಲಂಗಾಣ ಸೋಲಿಗೆ ಮೈತ್ರಿ ಕಾರಣ!
ಕಳೆದ ಡಿಸೆಂಬರ್ ನಲ್ಲಿ ನಡೆದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಆಘಾತಕಾರಿ ಸೋಲು ಕಾಣಲು ಅದು ಟಿಡಿಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇ ಕಾರಣ ಎಂದು ವೆಂಕಟ ರೆಡ್ಡಿ ಅಭಿಪ್ರಾಯಪಟ್ಟರು. ಅಕಸ್ಮಾತ್ ತೆಲಂಗಾಣದಲ್ಲಿ ಕಾಂಗ್ರೆಸ್, ಟಿಡಿಪಿಯನ್ನು ಹೊರಗಿಟ್ಟು ಸ್ವತಂತ್ರವಾಗಿ ಸ್ಪರ್ಧಿಸಿದ್ದೇ ಆದರೆ 50 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲು ಸಾಧ್ಯವಿತ್ತು. ಏಕೆಂದರೆ ತೆಲಂಗಾಣದಲ್ಲಿ ಟಿಡಿಪಿ ಮುಖಂಡ ಮತ್ತು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬಗ್ಗೆ ಉತ್ತಮ ಅಭಿಪ್ರಾಯವಿಲ್ಲ ಎಂದು ಅವರು ಹೇಳಿದರು.

ಲೋಕಸಭೆಯಲ್ಲೂ ಸ್ವತಂತ್ರವಾಗಿ ಸ್ಪರ್ಧಿಸಲಿ
ತೆಲಂಗಾಣದಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಿದ್ದೇ ಆದರೆ ಎಂಟಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದಕ್ಕೆ ಸಾಧ್ಯ. ಕೇವಲ ಟಿಡಿಪಿ ಮಾತ್ರವಲ್ಲ, ಕಾಂಗ್ರೆಸ್ ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧಿಸಿಯೇ ಗೆಲ್ಲುವ ಸಾಮರ್ಥ್ಯ ಪಡೆದಿದೆ ಎಂದು ಅವರು ಹೇಳಿದರು.

ನಾಯಕರಲ್ಲಿ ಬೇಸರ
ತೆಲಂಗಾನ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆ ಇದ್ದ ಕಾಂಗ್ರೆಸ್ ನಾಯಕರೂ ಸೋತಿದ್ದಾರೆ. ಅದಕ್ಕೆ ಕಾರಣ ಟೀಡಿಪಿ ಜೊತೆಗಿನ ಮೈತ್ರಿ ಎಂದು ಅವರು ತಮ್ಮ ಬಳಿ ಹೇಳಿಕೊಂಡಿದ್ದಾರೆ ಎಂದು ರೆಡ್ಡಿ ಹೇಳಿದರು. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಡಿಪಿಯನ್ನು ದೂರವಿಡಬೇಕು ಎಂಬುದೇ ನಮ್ಮೆಲ್ಲರ ಅಭಿಪ್ರಾಯವಾಗಿದೆ ಎಂದು ಅವರು ಹೇಳಿದರು.

ವಸ್ತುಸ್ಥಿತಿ ಬೇರೆ ಇದೆ!
ತೆಲಂಗಾಣದಲ್ಲಿ ಟೀಡಿಪಿ-ಕಾಂಗ್ರೆಸ್ ಮೈತ್ರಿ ಬಗ್ಗೆ ಕೆಲ ನಾಯಕರಲ್ಲಿ ಬೇಸರವಿರಬಹುದು. ಆದರೆ ವಸ್ತುಸ್ಥಿತಿ ಬೇರೆಯೇ ಇದೆ. ತೆಲಂಗಾಣದಲ್ಲಿ ಟಿಡಿಪಿ-ಕಾಂಗ್ರೆಸ್ ಮೈತ್ರಿಯೇ ಪಕ್ಷಕ್ಕೆ ಹೆಚ್ಚು ಲಾಭವನ್ನುಂಟು ಮಾಡಿದೆ ಎಂಬುದು ನಮ್ಮ ಅಭಿಪ್ರಾಯ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ(in charge) ಆರ್ ಸಿ ಖುಂಟಿಯಾ ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಲೋಕಸಭೆಯಲ್ಲೂ ಈ ಮೈತ್ರಿ ಮುಂದುವರಿಯವುದು ಖಚಿತ ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ.












Click it and Unblock the Notifications