ಪತ್ನಿ, ಇಬ್ಬರು ಮಕ್ಕಳನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ
ಹೈದರಾಬಾದ್, ಮಾರ್ಚ್ 2: 40 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಮೃತದೇಹವು ಹಸ್ತಿನಾಪುರಂ ಎಲ್ ಬಿ ನಗರದ ನಿವಾಸದಲ್ಲಿ ಪತ್ತೆಯಾಗಿದೆ.
ಪ್ರದೀಪ್ (40) ಹೈದರಾಬಾದ್ ನಲ್ಲಿರುವ ಒಂದು ಪ್ರತಿಷ್ಟಿತ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದರು. ಆದರೆ, ಹಣಕಾಸಿನ ತೊಂದರೆ, ಅವರು ಈ ಕೆಟ್ಟ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿದೆ ಎಂದು ಅನುಮಾನಿಸಲಾಗಿದೆ. ಪ್ರದೀಪ್ ಪತ್ನಿ ಸ್ವಾತಿ 35 ವರ್ಷದವರಾಗಿದ್ದರು. ಮೊದಲ ಮಗು ಕಲ್ಯಾಣ್ ಕೃಷ್ಣ 6 ವರ್ಷ, ಎರಡನೇ ಮಗು ಜಯಾ ಕೃಷ್ಣ ಕೇವಲ 2 ವರ್ಷದವರಾಗಿದ್ದರು.
ಊಟದಲ್ಲಿ ವಿಷ ಹಾಕಿ ಹೆಂಡತಿ ಮಕ್ಕಳನ್ನು ಕೊಂದು, ಆ ನಂತರ ತಾನು ಕೂಡ ಅದೇ ಆಹಾರ ತಿಂದು ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರ ಅಥವಾ ಭಾನುವಾರ ಈ ಘಟನೆ ನಡೆದಿರಬಹುದು ಎಂದು ಪೋಲೀಸರು ಶಂಕಿಸಿದ್ದಾರೆ.

ಪೊಲೀಸರಿಗೆ ಘಟನೆಯ ಬಗ್ಗೆ ಮೊದಲು ಅಕ್ಕಪಕ್ಕದ ಮನೆಯವರು, ತಿಳಿಸಿದ್ದಾರೆ. ಪ್ರದೀಪ್ ಕುಟುಂಬ, ಶನಿವಾರದಿಂದ ಮನೆಯ ಹೊರಗೆ ಬರದೆ ಇದ್ದಿದ್ದನ್ನು ಗಮನಿಸಿದ ಸ್ಥಳಿಯರು ಪೋಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಬಾಗಿಲು ಒಡೆದು ಒಳಗೆ ಹೋದ ಪೊಲೀಸರಿಗೆ ಮೃತ ದೇಹ ಕಂಡಿದೆ.
ಆಸ್ಪತ್ರೆಗೆ ಮೃತದೇಹಗಳನ್ನು ಸಾಗಿಸಿದ ನಂತರ ಪೊಲೀಸರು, ತನಿಖೆ ಪ್ರಾರಂಭ ಮಾಡಿದ್ದಾರೆ. ಪ್ರದೀಪ್ ತಮ್ಮ ತಂದೆಗೆ ''ನಾನು ನಿನಗೆ ಇನ್ನು ಮುಂದೆ ಹೊರೆಯಾಗಲು ಬಯಸುವುದಿಲ್ಲ'' ಎಂದು ಬರೆದಿದ್ದು, ಹಣಕಾಸಿನ ಕಾರಣ ಇರಬಹುದು ಎಂದು ಶಂಕಿಸಿದ್ದಾರೆ.












Click it and Unblock the Notifications