ಆಂಧ್ರ: ಜಗನ್ ಆರೋಗ್ಯ ಸ್ಥಿರ, ರೋಗಿಗಳ ಸ್ಥಿತಿ ಹರೋಹರ
ಹೈದರಾಬಾದ್, ಅ 8: ಅಖಂಡ ಆಂಧ್ರಪ್ರದೇಶ ವಿಭಜನೆಯ ವಿರುದ್ದ ಕಳೆದ ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹದಲ್ಲಿ ಕುಳಿತಿರುವ YSR ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ಮೋಹನ್ ರೆಡ್ಡಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಸೀಮಾಂಧ್ರ ಪ್ರದೇಶದ ಆಸ್ಪತ್ರೆಯಲ್ಲಿನ ರೋಗಿಗಳನ್ನು ಕೇಳುವವರೇ ಇಲ್ಲದಂತಾಗಿದೆ.
ಇನ್ನು ನವದೆಹಲಿಯ ಆಂಧ್ರ ಭವನದಲ್ಲಿ ಆಮರಣಾಂತ ಉಪವಾಸದಲ್ಲಿ ಕೂತಿರುವ ತೆಲುಗುದೇಶಂ ಮುಖ್ಯಸ್ಥ ಚಂದ್ರಬಾಬು ನಾಯ್ಡು ಈ ಕೂಡಲೇ ಆಂಧ್ರಭವನ ಖಾಲಿ ಮಾಡಬೇಕೆಂದು ನೋಟೀಸ್ ಜಾರಿ ಮಾಡಲಾಗಿದೆ. ಆದರೆ ಯಾವುದೇ ಕಾರಣಕ್ಕೂ ಇಲ್ಲಿಂದ ಕದಲುವುದಿಲ್ಲ ಎಂದು ನಾಯ್ಡು ತಿರುಗೇಟು ನೀಡಿದ್ದಾರೆ.
ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಆಂಧ್ರ ವಿಭಜನೆಯ ವಿರುದ್ದ ಹೋರಾಟಕ್ಕಿಳಿರುವುದರಿಂದ ಸೀಮಾಂಧ್ರ ಪ್ರದೇಶದಲ್ಲಿ ತೀವ್ರ ವಿದ್ಯುತ್ ಅಭಾವ ಎದುರಾಗಿದೆ. ಪ್ರಮುಖವಾಗಿ ಆಸ್ಪತ್ರೆಗಳಿಗೆ ವಿದ್ಯುತ್ ಸರಬರಾಜು ಇಲ್ಲದಿರುವುದರಿಂದ ರೋಗಿಗಳು ಪರದಾಡುತ್ತಿದ್ದಾರೆ.
ಈ ಭಾಗದ ಹೆಚ್ಚಿನ ಕಾರ್ಖಾನೆಗಳು ಸದ್ಯ ಜನರೇಟರ್ ಮೂಲಕ ಕಾರ್ಯ ನಿರ್ವಹಿಸುತ್ತಿವೆ. ಆದರೆ ವಿದ್ಯುತ್ ಅಭಾವ ಜಲಮಂಡಳಿ, ರೈಲು, ಪೆಟ್ರೋಲ್ ಬಂಕುಗಳ ಮೇಲೂ ತಟ್ಟಿದೆ. ಮೂಲ ಕಾಂಗ್ರೆಸ್ ಪಕ್ಷದ ಸಚಿವರು, ಸಂಸದರು ಮತ್ತು ಶಾಸಕರ ನಿವಾಸಗಳ ಮುಂದೆ ಭಾರೀ ಪ್ರತಿಭಟನೆ ಮುಂದುವರಿದಿದೆ.
ರಾಜಮಂಡ್ರಿ, ನೆಲ್ಲೂರು, ತಿರುಪತಿ, ವಿಶಾಖಪಟ್ಟಣಂ, ಕಾಕಿನಾಡ ಮುಂತಾದೆಡೆ ರಾಜಕೀಯ ನಾಯಕರ ಶವಯಾತ್ರೆ, ಪ್ರತಿಕೃತಿ ದಹನ ಹೀಗೆ ವಿವಿಧ ರೀತಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ.

ವಿದ್ಯುತ್ ಅಭಾವ
ನೌಕರರ ಮುಷ್ಕರದಿಂದ ರೈಲು ಸಂಚಾರ ವ್ಯತ್ಯಯಗೊಂಡಿದೆ. ಹೀಗಾಗಿ ರೈಲ್ವೆ ಇಲಾಖೆ ಬೇರೆ ವಿಧಿಯಿಲ್ಲದೇ ಹಲವು ರೈಲು ಸಂಚಾರವನ್ನು ರದ್ದುಗೊಳಿಸಿದೆ. ಇದರಿಂದಾಗಿ ಪ್ರಯಾಣಿಕರು ಇನ್ನಷ್ಟು ಪರದಾಡುವಂತಾಗಿದೆ.

ಜಗನ್
ಹೈದರಾಬಾದಿನ ಲೋಟಸ್ ಪಾಂಡ್ ನಲ್ಲಿ ಉಪವಾಸ ಸತ್ಯಾಗ್ರಹ ಕೂತಿರುವ ವೈ ಎಸ್ ಜಗನ್ಮೋಹನ್ ರೆಡ್ಡಿಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಉಪವಾಸ ಸತ್ಯಾಗ್ರಹ ಕೈಬಿಟ್ಟು ತೀವ್ರ ಪ್ರತಿಭಟನೆ ನಡೆಸಿ ಎಂದು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಜಗನ್ ಅವರನ್ನು ವಿನಂತಿಸಿ ಕೊಂಡಿದ್ದಾರೆ.

ಜನಜೀವನ ಅಸ್ತವ್ಯಸ್ಥ
ಜಗನ್ ಆರೋಗ್ಯ ನೋಡಿಕೊಳ್ಳುತ್ತಿರುವ ವೈದ್ಯರು ಅವರ ಆರೋಗ್ಯ ಸ್ಥಿರವಾಗಿದೆ ಎಂದಿದ್ದಾರೆ. ಇದರಿಂದ ಕಾರ್ಯಕರ್ತರು ನಿರಾಳರಾಗಿದ್ದಾರೆ, ಆದರೆ ಪರದಾಡುತ್ತಿರುವ ಜನಸಾಮಾನ್ಯರ ಬವಣೆ ಕೇಳುವವರಾರು?

ಆಸ್ಪತ್ರೆಗಳು
ಸೀಮಾಂಧ್ರ ಭಾಗದ ಹೆಚ್ಚಿನ ಆಸ್ಪತ್ರೆಗಳಿಗೆ ಪ್ರತಿಭಟನೆಯ ಕಾವು ಸರಿಯಾಗಿ ತಟ್ಟುತ್ತಿದೆ. ವಿದ್ಯುತ್ ಇಲ್ಲದಿರುವುದರಿಂದ ಹೆಚ್ಚಿನ ತಪಾಸಣೆ ನಡೆಸಲಾಗುತ್ತಿಲ್ಲ.

ಸಿಖ್ಖರ ಪ್ರತಿಭಟನೆ
ಸೀಮಾಂಧ್ರ ಭಾಗದ ವಿಜಯನಗರಂನ ಗುರುದ್ವಾರಕ್ಕೆ ಪ್ರತಿಭಟನಾಕಾರರಿಂದ ಹಾನಿಯಾಗಿರುವುದನ್ನು ಪ್ರತಿಭಟಿಸಿ ಸಿಖ್ ಸಮುದಾಯದವರು ಗನ್ ಪಾರ್ಕ್ ನಲ್ಲಿ ಮೇಣದ ಬತ್ತಿ (candle light rally) ಹಿಡಿದು ಪ್ರತಿಭಟನೆ ನಡೆಸಿದ್ದಾರೆ.












Click it and Unblock the Notifications