ಹುಬ್ಬಳ್ಳಿಯಲ್ಲಿ ಪೇಜಾವರ ಶ್ರೀಗಳಿಗೆ ನಾಣ್ಯದ ತುಲಾಭಾರ
ಹುಬ್ಬಳ್ಳಿ, ಅಕ್ಟೋಬರ್ 12: ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಗೆ ಇಂದು (ಅಕ್ಟೋಬರ್ 12) ಗುರುವಾರ ಹುಬ್ಬಳ್ಳಿಯಲ್ಲಿ ನಾಣ್ಯದ ತುಲಾಭಾರ ಮಾಡಲಾಯಿತು.
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳ ಷಷ್ಟ್ಯಬ್ದ ಅಂಗವಾಗಿ ಅಖಿಲ ಭಾರತ ಮಾಧ್ವ ಮಹಾಮಂಡಲದ ವತಿಯಿಂದ ಹುಬ್ಬಳ್ಳಿಯ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಧಾರ್ಮಿಕ ಕಾರ್ಯದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ ನಾಣ್ಯದ ತುಲಾಭಾರ ನೆರವೇರಿಸಲಾಯಿತು.

ನಾಣ್ಯದ ತುಲಾಭಾರದ ಸೇವೆ ಪಡೆದ ಬಳಿಕ ಮಾತನಾಡಿದ ಪೇಜಾವರ ಶ್ರೀಗಳು, "ನಾನು ಸಮಾಜ ಸೇವೆ ಮಾಡಿದ್ದೇನೆ ಎಂದು ನನ್ನನ್ನು ಗೌರವಿಸಿದ್ದೀರಿ. ಅದೆಲ್ಲ ನಾನು ಮಾಡಿದ್ದಲ್ಲ. ಭಗವಂತನ ಪ್ರೇರಣೆಯಿಂದ ಎಲ್ಲವೂ ನಡೆಯುತ್ತಿದೆ" ಎಂದು ಹೇಳಿದರು.
"ಭಕ್ತರು ಮಾಡಿದ ತುಲಾಭಾರ ಸೇವೆಯನ್ನು ಶ್ರೀಕೃಷ್ಣನಿಗೆ ಸಮರ್ಪಣೆ ಮಾಡುತ್ತಿದ್ದೇನೆ ಎಂದ ಪೇಜಾವರ ಶ್ರೀಗಳು, ಎಲ್ಲವೂ ನಾನು ನನ್ನಿಂದ ಅನ್ನಬಾರದು ಇದು ಸರಿಯಾಗಿ ಕ್ರಮವಲ್ಲ ಪ್ರಾಣದೇವರು ಭಗವಂತ ಅಂತರಾಳದಲ್ಲಿನ ಭಗವಂತನಿಗೆ ತಾವು ಕೊಟ್ಟ ಗೌರವ ಇದು ಎಲ್ಲವೋ ನಾನೇ ಮಾಡಿದ್ದು ಅಲ್ಲ ಅದು ಭಗವಂತನ ಇಚ್ಛೇ ಅಷ್ಟೇ" ಎಂದರು. ಅಲ್ಲದೇ "ಇನ್ನು ತಾವು ಕೊಟ್ಟ ಗೌರವವನ್ನು ಅತ್ಯಂತ ಪ್ರಾಮಾಣಿಕತಯಿಂದ ಸ್ವೀಕಾರ ಮಾಡಿರುವೆ" ಎಂದರು.
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳ ಷಷ್ಟ್ಯಬ್ದ ಅಂಗವಾಗಿ ಹುಬ್ಬಳ್ಳಿ ಶ್ರೀಕೃಷ್ಣ ಕಲ್ಯಾಣಮಂಟಪದಲ್ಲಿ ಬೆಳಗ್ಗೆ ಚಕ್ರಾಬ್ಜ ಮಂಡಲ ಮಹಾಪೂಜೆ ನೆರವೇರಿಸಲಾಯಿತು. ಬಳಿಕ ನರಸಿಂಹಾಚಾರ್ಯ ಕೊರ್ಲಹಳ್ಳಿ, ಡಾ.ಎಚ್.ಸತ್ಯನಾರಾಯಣಾಚಾರ್ಯ, ವಾದಿರಾಜಾಚಾರ್ಯ ತಡಕೋಡ, ಪ್ರದ್ಯುಮ್ನಾಚಾರ್ಯ ಜೋಶಿ, ಹರಿ ಆಚಾರ್ಯ ವಾಳ್ವೇಕರ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಇನ್ನು ತುಲಾಭಾರ ಸೇವೆಯ ನಂತರ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಅನುಗ್ರಹ ಸಂದೇಶ ನೀಡಿದರು. ಬಳಿಕ ಭಕ್ತರಿಗೆ ಫಲಮಂತ್ರಾಕ್ಷತೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮಾಜದ ಮುಖಂಡರು ಹಾಗೂ ಅನೇಕರು ಭಾಗವಹಿಸಿದ್ದರು.












Click it and Unblock the Notifications