ಉತ್ತರ ಕರ್ನಾಟಕದ ಸಂಜೀವಿನಿ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಮತ್ತೆ ಯಡವಟ್ಟು: ಒಂದೇ ಬೆಡ್ ಮೇಲೆ ಇಬ್ಬರಿಗೆ ಚಿಕಿತ್ಸೆ
ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಪ್ರಖ್ಯಾತಿ ಪಡೆದಿರುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಸದಾ ಒಂದಲ್ಲ ಒಂದು ಯಡವಟ್ಟು ಮಾಡಿಕೊಂಡು ಸುದ್ದಿಯಲ್ಲಿರುತ್ತದೆ. ಇದೀಗ ಮತ್ತೆ ಯಡವಟ್ಟು ಮಾಡಿಕೊಂಡು ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಹುಬ್ಬಳ್ಳಿ, ಮಾರ್ಚ್, 15: ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಪ್ರಖ್ಯಾತಿ ಆಗಿರುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಸದಾ ಒಂದಲ್ಲ ಒಂದು ಯಡವಟ್ಟು ಮಾಡಿಕೊಂಡು ಸುದ್ದಿಯಲ್ಲಿರುತ್ತದೆ. ವಾರ್ಡ್‌ಗಳಲ್ಲಿ ರೋಗಿಗಳನ್ನು ಕೆಳಮಟ್ಟದಲ್ಲಿ ನೋಡಿಕೊಳ್ಳಲಾಗುತ್ತಿದ್ದು, ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಬಡರೋಗಿಗಳು ನರಳಾಡುವಂತಾಗಿದೆ.
ಹುಬ್ಬಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ರೋಗಿಗಳು ನಿತ್ಯ ನರಕದರ್ಶನ ಅನುಭವಿಸುವಂತಾಗಿದೆ. ಮೊನ್ನೆ ನೆಲದ ಮೇಲೆ ವೃದ್ಧೆಗೆ ಚಿಕಿತ್ಸೆ ನೀಡಿ ಸುದ್ದಿಯಾಗಿದ್ದ ಕಿಮ್ಸ್ ಆಡಳಿತ ಮಂಡಳಿ, ಇದೀಗ ಮತ್ತೆ ಅಂತಹದ್ದೇ ತಪ್ಪು ಮಾಡಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಇಬ್ಬರು ಮಹಿಳೆಯರು ಒಂದೇ ಬೆಡ್ ಮೇಲೆ ಮಲಗಿ ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆದ ವಿಡಿಯೋ ಈಗ ವೈರಲ್ ಆಗಿದೆ. ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಕಾರ್ಯವೈಖರಿಗೆ ಜನ ಬೇಸರ ವ್ಯಕ್ತಪಡಿಸಿದ್ದಾರೆ.

ಒಂದೇ ಬೆಡ್ ಮೇಲೆ ಇಬ್ಬರಿಗೆ ಚಿಕಿತ್ಸೆ
ಇನ್ನು ಒಂದೇ ಬೆಡ್‌ನಲ್ಲಿ ಒಬ್ಬರ ಕಾಲ ಬಳಿ ಮತ್ತೊಬ್ಬರ ಮುಖ ಮಾಡಿ ಮಧ್ಯವಯಸ್ಕ ಮಹಿಳೆಯರು ವಿಶ್ರಾಂತಿ ಪಡೆದಿದ್ದಾರೆ. ಸ್ವಲ್ಪ ಆಚೀಚೆ ಆದರೂ ನೆಲಕ್ಕೆ ಬೀಳುವ ಸ್ಥಿತಿ, ಆತಂಕದಲ್ಲಿಯೇ ಮೈ ಬಿಗಿ ಹಿಡಿದುಕೊಂಡು ಮಲಗಿದ್ದಾರೆ. ಹೀಗೆ ಒಂದೇ ಬೆಡ್‌ನಲ್ಲಿ ಇಬ್ಬರು ನರಳಾಡುವ ದೃಶ್ಯ ಕಂಡ ಸಹ ರೋಗಿ ಸಂಬಂಧಿ ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚರವಾದ ಕಿಮ್ಸ್ ಆಡಳಿತ ಮಂಡಳಿ ಪ್ರಕರಣ ಮುಚ್ಚಿಹಾಕುವ ಪ್ರಯತ್ನಕ್ಕೆ ಮುಂದಾಗಿದೆ. ಆ ಸಮಯದಲ್ಲಿ ಹೆಚ್ಚು ಜನ ರೋಗಿಗಳು ದಾಖಲಾದ ಹಿನ್ನೆಲೆ ಬೆಡ್ ಅಭಾವ ಸೃಷ್ಟಿಯಾಗಿತ್ತು. ಇದರಲ್ಲಿ ನಮ್ಮ ಸಿಬ್ಬಂದಿಯದ್ದು ತಪ್ಪಾಗಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸಿತ್ತೇವೆ ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಸ್ಪಷ್ಟನೆ ನೀಡಿದ್ದಾರೆ.

ಒಟ್ಟಿನಲ್ಲಿ ಸಿಬ್ಬಂದಿ ನಿರ್ಲಕ್ಷ್ಯದಿಂದ ಒಳ್ಳೆಯ ಚಿಕಿತ್ಸೆ ಇದ್ದರೂ ಕಿಮ್ಸ್ ಆಸ್ಪತ್ರೆಗೆ ಕೆಟ್ಟ ಹೆಸರು ಬರುತ್ತಿದೆ. ಹೀಗೆ ಬಡರೋಗಿಗಳ ಜೊತೆಗೆ ಚೆಲ್ಲಾಟವಾಡುತ್ತಿರುವ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಾಬೇಕಾಗಿದೆ ಎನ್ನುವುದು ಇಲ್ಲಿನ ಜನರ ಆಶಯವಾಗಿದೆ.












Click it and Unblock the Notifications